Advertisement

ಮಳೆ ನಿಂತರೂ ನಿಲ್ಲದ ಮರಣ ಮೃದಂಗ

12:10 AM Aug 15, 2019 | Lakshmi GovindaRaj |

ಹುಬ್ಬಳ್ಳಿ: ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ವರುಣನ ಅಬ್ಬರ ತಗ್ಗಿ, ಪ್ರವಾಹ ತಣ್ಣಗಾಗಿದ್ದರೂ ಮರಣ ಮೃದಂಗ ಮಾತ್ರ ನಿಂತಿಲ್ಲ. ಬುಧವಾರ ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆಯಲ್ಲಿ ತಲಾ ಇಬ್ಬರು ಸೇರಿ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ.

Advertisement

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಉಮಾದೇವಿ (34), 2 ವರ್ಷದ ಮಗು ಧನುಷ್‌ ಮೃತಪಟ್ಟಿದ್ದಾರೆ. ಪತಿ ಕುಮಾರ್‌ ಮತ್ತು ಇನ್ನೊಂದು ಮಗು ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ಮಗು ಪಕ್ಕದಲ್ಲಿರುವ ಚಿಕ್ಕಪ್ಪನ ಮನೆಯಲ್ಲಿ ಮಲಗಿದ್ದರಿಂದ ಅದೃಷ್ಟವಶಾತ್‌ ಬಚಾವಾಗಿದೆ.

ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತ, ಪ್ರವಾಹದಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಕಿಟ್ಟು ಪೂಜಾರಿ (55) ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ. ಗುಡ್ಡ ಕುಸಿತಕ್ಕೆ ಸಿಲುಕಿ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಕಳಸಾ ಹೋಬಳಿ ಚನ್ನಹಡ್ಲು ಗ್ರಾಮದ ಸಂತೋಷ್‌ (42) ಎಂಬುವರ ಮೃತದೇಹ ಬುಧವಾರ ಪತ್ತೆಯಾಗಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿರುವ ಮಧುಗುಂಡಿ ಗ್ರಾಮದ ನಾಗಪ್ಪಗೌಡ ಅವರಿಗಾಗಿ ಶೋಧ ಕಾರ್ಯ ನಡೆದಿದೆ.

ಬೆಳಗಾವಿ ತಾಲೂಕಿನ ಜುಮನಾಳದಲ್ಲಿ ಮಾರ್ಕಂಡೇಯ ನದಿ ನೀರಿನಲ್ಲಿ ಕೃಷಿ ಕೆಲಸಕ್ಕೆ ಹೋದಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಕಾಕತಿ ಗ್ರಾಮದ ಸಾವಿತ್ರಿ ಶೆಟ್ಟು ಬಸರೀಕಟ್ಟಿ(60)ಯವರ ಮೃತದೇಹ ಬುಧವಾರ ಪತ್ತೆಯಾಗಿದೆ. ರಾಮದುರ್ಗ ತಾಲೂಕಿನಲ್ಲಿ ಮಲಪ್ರಭಾ ನದಿ ಸೆಳೆತಕ್ಕೆ ಬೆಳೆ ಕೊಚ್ಚಿ ಹೋಗಿದ್ದರಿಂದ ನೊಂದು ಮಾಗನೂರ ಗ್ರಾಮದ ರೈತ ಲಕ್ಷ್ಮಣ ಲಕ್ಕಪ್ಪ ತ್ಯಾಪಿ(34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎನ್‌ಡಿಆರ್‌ಎಫ್‌ ರಕ್ಷಿಸಿದ ಗರ್ಭಿಣಿ ಸುಖ ಪ್ರಸವ
ಬೆಳ್ತಂಗಡಿ: ಚಾರ್ಮಾಡಿಯ ಹೊಸಮಠ ಸೇತುವೆ ಕೊಚ್ಚಿ ಹೋದ ಬಳಿಕ ಎನ್‌ಡಿಆರ್‌ಎಫ್‌ ತಂಡ ಆ.10ರಂದು ರಕ್ಷಿಸಿದ್ದ ಗರ್ಭಿಣಿ ದಿವ್ಯಾ (35) ಅವರು ಬುಧವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಚಾರ್ಮಾಡಿಯ ಫರ್ಲಾನಿ ನಿವಾಸಿಯಾಗಿದ್ದು, ನೆರೆಯಿಂದ ಲಾೖಲ ಗ್ರಾಮದ ಕೊಯ್ಯೂರು ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದಿದ್ದರು. ಆ.10ರಂದು ದಿವ್ಯಾ ಸಹಿತ ಎರಡು ಹಸುಗೂಸು ಮತ್ತು ಮತ್ತೋರ್ವ ಗರ್ಭಿಣಿ ಜ್ಯೋತಿ ಎಂಬುವರನ್ನು ರಕ್ಷಿಸಲಾಗಿತ್ತು.

Advertisement

ಕೊಂಬೆ ಹಿಡಿದು ಬದುಕುಳಿದ ಪೇದೆ!
ಹಾವೇರಿ: ಸೇತುವೆ ಮೇಲೆ ಹರಿಯುತ್ತಿದ್ದ ವರದಾ ನದಿ ನೀರಿನ ಪ್ರವಾಹದಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಬೈಕ್‌ ಸಹಿತ ಕೊಚ್ಚಿ ಹೋಗಿ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ತಾಲೂಕಿನ ಕರ್ಜಗಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಯಲ್ಲಪ್ಪ ಕೊರವಿ ಬದುಕುಳಿದ ಪೊಲೀಸ್‌ ಪೇದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಂತಿಸಿಗ್ಲಿ ಗ್ರಾಮದ ನಿವಾಸಿಯಾಗಿದ್ದು, ಕಾಗಿನೆಲೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕರ್ತವ್ಯ ಮುಗಿಸಿ ಗ್ರಾಮಕ್ಕೆ ಬೈಕಲ್ಲಿ ಹಿಂತಿರುಗುತ್ತಿದ್ದ ವೇಳೆ ಕರ್ಜಗಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಲ್ಲಿ ಬೈಕ್‌ ಸಹಿತ ಕೊಚ್ಚಿ ಹೋಗಿದ್ದರು. ಅರ್ಧ ಕಿಮೀ ದೂರದಲ್ಲಿ ಸಿಕ್ಕ ಮರದ ಕೊಂಬೆ ಆಧಾರವಾಗಿಸಿಕೊಂಡರು. ಜರ್ಕಿನ್‌ ಒಳಗಿದ್ದ ಮೊಬೈಲ್‌ನಿಂದ ಸಂಬಂಧಿಕರಿಗೆ ಘಟನೆ ವಿವರಿಸಿ,ರಕ್ಷಿಸಲು ಕೋರಿದರು. ಬರೋಬ್ಬರಿ ನಾಲ್ಕು ತಾಸು ಜೀವ ಕೈಯಲ್ಲಿಯೇ ಹಿಡಿದು ನಿಂತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಅಗ್ನಿಶಾಮಕ ದಳ, ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿಗಳ ತಂಡ ಆಗಮಿಸಿ ರಕ್ಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next