Advertisement

ಮಳೆ ನಿಲ್ಲುತ್ತಿಲ್ಲ, ಜನರಿಗೆ ನೆಮ್ಮದಿಯಿಲ್ಲ

11:29 AM Aug 18, 2017 | Team Udayavani |

ಬೆಂಗಳೂರು: ಮಳೆ ಬಿಡುತ್ತಿಲ್ಲ, ರಾಜಧಾನಿ ಜನತೆಗೆ ನೆಮ್ಮದಿ ಇಲ್ಲ. ಸೋಮವಾರ ರಾತ್ರಿ ಆರಂಭವಾಗಿರುವ ಮಳೆ ಗುರುವಾರವೂ ಮುಂದುವರಿದ ಪರಿಣಾಮ ರಾಜಧಾನಿಗೆ ಮಳೆ ಅವಾಂತರದಿಂದ ಮುಕ್ತಿ ಸಿಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.

Advertisement

ಸತತ ನಾಲ್ಕನೇ ದಿನವಾದ ಗುರವಾರವೂ ಮಳೆ ಮುಂದುವರಿದಿದ್ದು, ತಡ ರಾತ್ರಿ ಸುರಿದ ಮಳೆಗೆ ನಗರದ ಅನೇಕ ಭಾಗಗಳು ಸಮಸ್ಯೆ ಎದುರಿಸಿವೆ. ವಿಶೇಷವಾಗಿ ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಅಣ್ಣಸಂದ್ರ ಬಡಾವಣೆ ಪ್ರವಾಹಪೀಡಿತ ಪ್ರದೇಶದಂತಾಗಿದೆ. ಮ್ಯಾನ್‌ಹೋಲ್‌ ಉಕ್ಕಿ ಹರಿದು ಪ್ರವಾಹ ಮಾದರಿಯಲ್ಲಿ ನೀರು ರಸ್ತೆಯಲ್ಲಿ ತುಂಬಿದೆ. ಇನ್ನು ಮೂರು ದಿನಗಳಿಂದ ದ್ವೀಪದಂತಾಗಿರುವ ಎಸ್‌ಟಿ ಬೆಡ್‌ ಪ್ರದೇಶದಲ್ಲಿ ಮತ್ತೂಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಂಪಂಗಿರಾಮ ನಗರ 28.5 ಮಿ.ಮೀ. ದಯಾನಂದ ನಗರ 25, ವಿದ್ಯಾಪೀಠ 20.5, ದಾಸನಪುರ 15ಮಿ.ಮೀ., ಬಸವೇಶ್ವರನಗರ 14, ನಾಗಾಪುರ 14.5, ಕಾಟನ್‌ಪೇಟೆ 17, ರಾಜ್‌ಮಹಲ್‌ ಗುಟ್ಟಹಳ್ಳಿ 18, ಸಾರಕ್ಕಿ 19 ಹಾಗೂ ಬಸವನಗುಡಿಯಲ್ಲಿ 16 ಮಿ.ಮೀ ಮಳೆಯಾಗಿದೆ. ಗುರುವಾರ ರಾತ್ರಿ ಗಾಳಿಯಿಲ್ಲದೆ ಬರಿ ಮಳೆ ಮಾತ್ರ ಸುರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.

ಸ್ಥಿತಿ ಬದಲಾಗಿಲ್ಲ: ಒಳ ಚರಂಡಿಗಳು ತುಂಬಿ ಹರಿದಿರುವುದರಿಂದ ಎಸ್‌ಟಿ ಬೆಡ್‌ ಪ್ರದೇಶ ಕೊಚ್ಚೆಯಂತಾಗಿದ್ದು, ಕೋರಮಂಗಲ ನಾಲ್ಕನೇ ಹಂತ ಮತ್ತು ಎಸ್‌ಟಿ ಬೆಡ್‌ ಪ್ರದೇಶಗಳಲ್ಲಿ ಇನ್ನೂ ಸ್ಥಿತಿ ಬದಲಾಗಿಲ್ಲ. ಅನೇಕ ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ನೀರಿನಲ್ಲಿಯೇ ನಿಂತಿವೆ. ಗುರುವಾರ ರಾತ್ರಿ ಮತ್ತೆ ಮಳೆ ಬಿದ್ದಿರುವುದು ಸಮಸ್ಯೆ ದುಪ್ಪಟ್ಟಾಗಿದೆ. ಬೇಸ್‌ಮೆಂಟ್‌ನಲ್ಲಿ ತುಂಬಿರು ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ.

ನೀರನ್ನು ಹೊರಕ್ಕೆ ಪಂಪ್‌ ಮಾಡಲು ಮೋಟಾರ್‌ಗಳ ಅವಶ್ಯವಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ ಕನ್ನಡಭವನದ ನಯನ ಸಭಾಂಗಣ ಜಲಾವೃತಗೊಂಡಿದ್ದು, ನೀರು ಹೊರ ಹಾಕುವ ಕಾರ್ಯದಲ್ಲಿ ಸಿಬ್ಬಂದಿ ಮಗ್ನರಾಗಿದ್ದರು. ಪಾಲಿಕೆ ಸಿಬ್ಬಂದಿಗಳು ಮೂರು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದ್ದರೂ ಸಹ ಮೂಲ ಸೌಕರ್ಯ ಒದಗಿಸುವುದು ಸವಾಲಿನ ಕೆಲಸವಾಗಿದೆ.  

Advertisement

ಪಾಲಿಕೆ ತ್ವರಿತಗತಿಯಲ್ಲಿ ಸ್ವತ್ಛತೆ ಕೈಗೊಳ್ಳದಿದ್ದಲ್ಲಿ ಮತ್ತಷ್ಟು ಅನಾಹುತ ಎದುರಾಗಲಿದೆ. ನೀರು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಪಾಲಿಕೆ ತಕ್ಷಣವೇ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next