ಹುಣಸೂರು: ತಾಲೂಕಿನಾ ದ್ಯಂತ ಬೀಳುತ್ತಿರುವ ಮಳೆಯಿಂದ ಕಟಾವು ಮಾಡಿದ್ದ ಭತ್ತ, ರಾಗಿ ಮತ್ತಿತರ ಬೆಳೆಗೆ ತೊಂದರೆ ಆಗಿದೆ. ಮತ್ತೂಂದೆಡೆ ಕೀಟಬಾಧೆಯಿಂದ ತತ್ತರಿಸಿದ್ದ ತೋಟದ ಬೆಳೆಗಾರರು ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
ರವಿವಾರ ಮಧ್ಯರಾತ್ರಿ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ. ಕೊçಲು, ಒಕ್ಕಣೆ ಸಮಯ ಇದಾಗಿದ್ದು, ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತೆ ಆಗಿದೆ.
ಹನಗೋಡು ಅಣೆಕಟ್ಟೆಯ ಉದ್ದೂರು, ಹನುಮಂತಪುರ ನಾಲಾ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಕೊçಲು ಮುಗಿದಿದ್ದು, ಭತ್ತ ಬಡಿದು ಜಮೀನಿನಲ್ಲೇ ರೈತರು ರಾಶಿ ಹಾಕಿದ್ದಾರೆ. ಗದ್ದೆಯಲ್ಲಿ ಕೊçಲು ಮಾಡಿರುವ ಭತ್ತದ ಅರಿ(ಭತ್ತದೊಂದಿಗೆ ಹುಲ್ಲು) ನೀರಿನಲ್ಲಿ ತೊಯ್ದಿದೆ. ಹಲವು ರೈತರು ಒಕ್ಕಣೆ ಮಾಡಲು ಭತ್ತವನ್ನು ಕಣದಲ್ಲಿ ಗುಡ್ಡೆ ಮಾಡಿದ್ದಾರೆ. ಗಾಳಿ, ಬಿಸಿಲು ಬೀಳದಿದ್ದರೆ ಗುಡ್ಡೆಯಲ್ಲಿ ಶಾಖ ಹೆಚ್ಚಿ ಭತ್ತ, ಹುಲ್ಲು ನಷ್ಟವಾಗುವ ಸಂಭವವಿದೆ.
ನೀರನ್ನು ಹೊರಹಾಕಲು ಹರಸಾಹಸ ಕೊಯ್ಲು ಮಾಡಿರುವ ಭತ್ತದ ಅರಿ ಯನ್ನು ಗದ್ದೆಯ ತೆವರಿಯಲ್ಲಿ ಹಾಕಿ ನೀರು ನಿಲ್ಲದಂತೆ ನೋಡಿಕೊಳ್ಳುವ ವ್ಯರ್ಥ ಪ್ರಯತ್ನ ನಡೆದಿದ್ದರೆ, ಮತ್ತೂಂದೆಡೆ ಗದ್ದೆಯಿಂದ ನೀರನ್ನು ಹೊರ ಹಾಕುವ ಕಾರ್ಯ ನಡೆಯುತ್ತಿದೆ. ಮಟ್ಟದ ಗದ್ದೆಗಳಿಂದ ನೀರು ಹೊರ ಹಾಕಲು ಸಾಧ್ಯವಾಗದೆ ಭತ್ತ ಗದ್ದೆ ಯಲ್ಲೇ ಕೊಳೆಯುತ್ತಿದೆ. ಬಡಿದ ಭತ್ತವನ್ನು ಟಾರ್ಪಲ್ ಮುಚ್ಚಿ ರಕ್ಷಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.