ಮೈಸೂರು: ಮೈಸೂರು ರೈಲ್ವೆ ನಿಲ್ದಾಣದ ಪರಂಪರೆಗೆ ಯಾವುದೇ ಧಕ್ಕೆ ಬಾರದಂತೆ, ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಳೆಗಾಲ ಆರಂಭವಾಗುವುದರೊಳಗೆ ಈ ಕಾಮಗಾರಿಗಳನ್ನು ಮುಗಿಸಬೇಕಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಹೇಳಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ, ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ರೈಲು ನಿಲ್ದಾಣದ ಪಾರಂಪಕರಿಕತೆಗೆ ಹಾನಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1940ರಲ್ಲಿ ನಿರ್ಮಿಸಲಾಗಿರುವ ಮೈಸೂರು ರೈಲ್ವೆ ನಿಲ್ದಾಣವನ್ನು ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುತ್ತಾ ಬರಲಾಗಿದೆ.
ನಿತ್ಯ 60 ಸಾವಿರ ಪ್ರಯಾಣಿಕರು: 1980ರಲ್ಲಿ ಕೇವಲ ನಾಲ್ಕು ಪ್ಲಾಟ್‌ಫಾರಂ ಇದ್ದ ನಿಲ್ದಾಣದಲ್ಲಿ ಈಗ ಆರು ಪ್ಲಾಟ್‌ಫಾರಂಗಳಿದೆ. 1980ರಲ್ಲಿ 24 ರೈಲುಗಳು ಇಲ್ಲಿಗೆ ಬಂದು ಹೋಗುತ್ತಿದ್ದವು. ಈಗ 96 ರೈಲುಗಳ ಸಂಚಾರವನ್ನು ನಿರ್ವಹಿಸಬೇಕಿದೆ. ಪ್ರತಿ ನಿತ್ಯ 60 ಸಾವಿರ ಪ್ರಯಾಣಿಕರು ರೈಲ್ವೆಯನ್ನು ಬಳಸುತ್ತಿದ್ದು, 2014-15ನೇ ಸಾಲಿಗೆ ಹೋಲಿಸಿದರೆ ಪ್ರಯಾಣಿಕರ ದಟ್ಟಣೆ ಶೇ.20ರಷ್ಟು ಹೆಚ್ಚಾಗಿದೆ. ಜೊತೆಗೆ ಕಳೆದ ಹತ್ತು ವರ್ಷಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾಮಗಾರಿ: ನಿಲ್ದಾಣದ ಪಾರಂಪರಿಕ ಕಟ್ಟಡದ ಮೇಲ್ಛಾವಣಿ ಸೋರುತ್ತಿದ್ದು, ಅದನ್ನು ದುರಸ್ತಿಪಡಿಸಿ ಸಂರಕ್ಷಿಸಬೇಕಿದೆ. ಪ್ರಯಾಣಿಕರ ನಿರೀಕ್ಷಣಾಲಯ, ಕೊಠಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಾರ್ಸೆಲ್ ಕಚೇರಿಯನ್ನು ಸ್ಥಳಾಂತರಿಸಲಾಗುತ್ತಿದೆ. ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗಾಗಿ ಹವಾನಿಯಂತ್ರಿತ ಲಾಂಜ್ ನಿರ್ಮಾಣ, ವಿದ್ಯುತ್ ದೀಪಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇದನ್ನು ಹೊರತುಪಡಿಸಿ ರೈಲು ನಿಲ್ದಾಣದ ಪಾರಂಪರಿಕ ಸೌಂದರ್ಯಕ್ಕೆ ಯಾವುದೇ ಧಕ್ಕೆ ಮಾಡುತ್ತಿಲ್ಲ.
ಕೇಂದ್ರ ಸರ್ಕಾರದ ಇಲಾಖೆಯಾಗಿರುವುದರಿಂದ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕಾದ ಆಗತ್ಯತೆ ಇಲ್ಲ. ಆದರೂ 2018ರ ಆಗಸ್ಟ್‌ನಲ್ಲೇ ನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಡಿಸೆಂಬರ್‌ನಲ್ಲಿ ಪಾರಂಪರಿಕ ಸಮಿತಿಯ ಗಮನಕ್ಕೂ ತಂದು ಕಾಮಗಾರಿ ಆರಂಭಿಸಲಾಗಿದೆ. ಈಗ ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಕಾಲದಲ್ಲಿ ಪೂರ್ಣ: ರೈಲ್ವೆ ಮಂತ್ರಾಲಯ ಮೈಸೂರು ನಿಲ್ದಾಣದ ಅಭಿವೃದ್ಧಿಗೆ ಅನುದಾನ ನೀಡಿರುವುದರಿಂದ ಇಲ್ಲಿನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿರುತ್ತದೆ. ರೈಲ್ವೆಗೆ ನಾನು ಉತ್ತರದಾಯಿ ಯಾಗಿರುವುದರಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲೇ ಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಎಲ್ಲವನ್ನೂ ವಿವರಿಸಿದ್ದೇವೆ, ಪ್ರವಾಸೋದ್ಯಮ ಸಚಿವರ ಗಮನಕ್ಕೂ ತರಲಾಗಿದೆ.
ಮೇ 25ರಂದು ಸ್ಥಳ ಪರಿಶೀಲನೆಗೆ ಬರುವುದಾಗಿ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಅನಾನುಕೂಲವಾಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಕಾಮಗಾರಿ ಮುಗಿಸುವುದು ನಮ್ಮ ಆದ್ಯತೆ ಎಂದರು. ಮೈಸೂರು ವಲಯದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಡಾ.ಯತೀಶ್ ಸೇರಿದಂತೆ ರೈಲ್ವೆಯ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.