ದಾವಣಗೆರೆ: ರೈಲ್ವೆ ಇಲಾಖೆ ಖಾಸಗೀಕರಣವನ್ನು ಹಿಂತೆಗೆದು ಕೊಳ್ಳಬೇಕು ಮತ್ತು ಇತರೆ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಎಐಯುಟಿಯುಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರೈಲ್ವೆ ನಿಲ್ದಾಣ ವ್ಯವಸ್ಥಾಪಕರ ಮೂಲಕ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ರೈಲ್ವೆ ಇಲಾಖೆ ದೇಶದ ಅತಿದೊಡ್ಡ ಸಾರ್ವಜನಿಕ ಸಂಸ್ಥೆಯಾಗಿದೆ, ಸಾರ್ವಜನಿಕರ ಹಣದಿಂದ ಸ್ಥಾಪಿಸಲಾದ ಇಲಾಖೆ ರಾಷ್ಟ್ರೀಯ ಆಸ್ತಿಯಾಗಿದೆ. ಕೇಂದ್ರ ಸರ್ಕಾರ ಈಚೆಗೆ ರೈಲ್ವೆ ಇಲಾಖೆ ಖಾಸಗೀಕರಣ ಪ್ರಕ್ರಿಯೆಗೆ ಮುಂದಾಗಿದೆ. 150 ಖಾಸಗಿ ರೈಲುಗಳ ಸಂಚಾರ ಪ್ರಾರಂಭಕ್ಕೂ ಹಸಿರು ನಿಶಾನೆ ತೋರಿರುವುದು ಅತ್ಯಂತ ಖಂಡನೀಯ. ರಾಷ್ಟ್ರೀಯ ಆಸ್ತಿ ಆಗಿರುವ ರೈಲ್ವೆ ಇಲಾಖೆ ಬಂಡವಾಳಶಾಹಿಗಳ ಪಾಲಾಗುವುದನ್ನು ತಪ್ಪಿಸಬೇಕು. ಕೂಡಲೇ ರೈಲ್ವೆ ಖಾಸಗೀಕರಣವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ಸಾರ್ವಜನಿಕ ಸಂಪತ್ತನ್ನು ಖಾಸಗಿ ಬಂಡವಾಳಗಾರರಿಗೆ ಹಸ್ತಾಂತರಿಸಲು ಯಾವುದೇ ರಾಜಕೀಯ, ಆಳುವ ಪಕ್ಷಕ್ಕೆ ಅಧಿಕಾರವೇ ಇಲ್ಲ. ಖಾಸಗೀಕರಣದ ಪರಿಣಾಮವಾಗಿ ಎಲ್ಲಾ ರೈಲುಗಳ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಳವಾಗಲಿವೆ. ಬಹುಸಂಖ್ಯಾತ ಜನಸಾಮಾನ್ಯರಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಅತೀ ಕಡಿಮೆ ದರದಲ್ಲಿ ದೂರದ ಊರುಗಳಿಗೆ ಸಂಚರಿಸುವ ವ್ಯವಸ್ಥೆಯೇ ಕೈ ತಪ್ಪಿ ಹೋಗಲಿದೆ. ಉಳ್ಳವರಿಗೆ ಮಾತ್ರ ಎನ್ನುವಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ದೂರಿದರು.
ರೈಲ್ವೆ ಇಲಾಖೆ ಖಾಸಗೀಕರಣದಿಂದ ರಿಯಾಯತಿ ದರದ ಪ್ರಯಾಣ ಸೌಲಭ್ಯ ದೊರೆಯುವುದಿಲ್ಲ. ಇಲಾಖೆಯನ್ನು ಕಟ್ಟಿ ಬೆಳೆಸಲು ಲಕ್ಷಾಂತರ ಉದ್ಯೋಗಿಗಳ ಶ್ರಮ ಹಾಗೂ ಸಾರ್ವಜನಿಕರ ಪಾಲು ಲಾಭಕೋರರ ಪಾಲಾಗಲಿದೆ. ಈಗ ಲಾಭ ಗಳಿಸುವ ಒಂದೇ ಉದ್ದೇಶದಿಂದ ಖಾಸಗಿಯವರಿಗೆ ಕೊಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿಯವರು ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ಕೊಡುವುದಿಲ್ಲ ಎಂದು ಸಂಸತ್ತಿನಲ್ಲಿ ಮೂರು ಬಾರಿ ಹೇಳಿದ್ದಾರೆ. ಇತ್ತೀಚೆಗೆ ಸ್ವಾವಲಂಬನೆ ಮಂತ್ರ
ಪಠಿಸುತ್ತಾ ಅತ್ಯಂತ ಲಾಭದಾಯಕ ರೈಲ್ವೆ ಇಲಾಖೆಯನ್ನು ಖಾಸಗಿ ಲಾಭಕೋರ ಬಂಡವಾಳಗಾರರಿಗೆ ಧಾರೆ ಎರೆಯಲು ಯೋಜನೆ ರೂಪಿಸಿದ್ದಾರೆ .ಕೇಂದ್ರ ಸರ್ಕಾರ ಈ ಜನವಿರೋಧಿ ನೀತಿ ಕೈ ಬಿಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕೈದಾಳೆ ,ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು , ಜಿಲ್ಲಾ ಸಂಘಟನಕಾರರಾದ ಪ್ರಕಾಶ್, ಭಾರತಿ ಇತರರು ಇದ್ದರು.