Advertisement

ರಸ್ತೆಗೆ ಬಿದ್ದ ಮರ ತೆರವು ನೆಪದಲ್ಲಿ  ಸುಲಿಗೆ: ಆರೋಪ 

03:12 PM Mar 21, 2018 | Team Udayavani |

ಉಪ್ಪಿನಂಗಡಿ: ಸೋಮವಾರ ಸಂಜೆ ಗಾಳಿ-ಮಳೆಗೆ ಪೆರಿಯಶಾಂತಿ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವು ಮಾಡಿದ ತಂಡವೊಂದು, ಬಳಿಕ ವಾಹನ ಮಾಲಕರು ಹಾಗೂ ಚಾಲಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎನ್ನಲಾದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಸಾಧಿಸುವ ಪೆರಿಯಶಾಂತಿ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಕೆಲವರು ಯಂತ್ರದ ಸಹಾಯದಿಂದ ಮರ ಕತ್ತರಿಸಿ, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಅರಣ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ಇವರು ಮಾಡಿದ್ದು ಶ್ಲಾಘನೀಯವಾದರೂ, ಇದನ್ನೇ ಮುಂದಿಟ್ಟುಕೊಂಡು ವಾಹನಗಳ ಮಾಲಕರಿಂದ ಹಣ ವಸೂಲಿ ಮಾಡಿದ್ದಾರೆ. ವಾಹನಗಳ ಗಾತ್ರವನ್ನು ಅನುಸರಿಸಿ ದರ ನಿಗದಿ ಮಾಡಿದ್ದಾರೆ. ಯಾತ್ರಾರ್ಥಿಗಳನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬರು ಹಣ ವಸೂಲಿಯ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನ್ಯಾಯ ಕೇಳಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಸುಲಿಗೆ ನಿತ್ಯ ನಿರಂತರ
ಕಾಡು ಪ್ರದೇಶವಾಗಿರುವ ಪೆರಿಯಶಾಂತಿ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು ವ್ಯಾಪಾರದ ಸೋಗಿನಲ್ಲಿ ಠಿಕಾಣಿ ಹೂಡಿರುವ ಈ ವ್ಯಕ್ತಿಗಳು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಯಾತ್ರಿಕರನ್ನು ಶೋಷಣೆ ಮಾಡುವ ದೂರುಗಳು ಕೇಳಿ ಬರುತ್ತಲೇ ಇವೆ. ದುಬಾರಿ ದರ ವಸೂಲಿ, ಪ್ರತಿಭಟಿಸಿದರೆ ಗುಂಪುಗೂಡಿ ಬೆದರಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ. ಅಪಾಯಕ್ಕೆ ಅಂಜಿ ಯಾತ್ರಾರ್ಥಿಗಳು ಕೇಳಿದಷ್ಟು ಹಣ ಕೊಟ್ಟು ಜಾಗ ಖಾಲಿ ಮಾಡುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ದಂಪತಿಗಳು, ಪ್ರೇಮಿಗಳಿಗೆ ಈ ರಸ್ತೆ ಅಪಾಯಕಾರಿಯಾಗಿದೆ. ಆದರೆ, ಬೆರಳೆಣಿಕೆ ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ವಾಹನಗಳ ಮಾಲಕರಿಂದ ಕೆಲವರು ಹಣ ವಸೂಲಿ ಮಾಡಿರುವ ಕುರಿತು ಉಪ್ಪಿನಂಗಡಿ ಪಿಎಸ್‌ಐ ನಂದಕುಮಾರ್‌ ಅವರನ್ನು ಪ್ರಶ್ನಿಸಿದಾಗ, ಯಾತ್ರಿಗಳಿಂದ ಹಣ ದೋಚಿದ ಪ್ರಕರಣ ಗಮನಕ್ಕೆ ಬಂದೊಡನೆ ಸ್ಥಳಕ್ಕೆ ತೆರಳಿದ್ದೇವೆ. ಈ ವೇಳೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಸೂಕ್ತ ನಿಗಾ ವಹಿಸಲಾಗಿದೆ. ಪೆರಿಯಶಾಂತಿ ಭಾಗದಲ್ಲಿ ನಾನಾ ಕಾರಣಕ್ಕೆ ಯಾತ್ರಾರ್ಥಿಗಳನ್ನು ದೋಚುತ್ತಿರುವ ವಿಚಾರವೂ ಪೊಲೀಸರ ಗಮನಕ್ಕೆ ಬಂದಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ
ಪೆರಿಯಶಾಂತಿ ರಸ್ತೆಯಲ್ಲಿ ವ್ಯಾಪಾರದ ನೆಪದಲ್ಲಿ ಸುಲಿಗೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆ ಸಂಭವಿಸಿದೆ. ಪಂಚಾಯತ್‌ ಅನುಮತಿ ಪತ್ರವನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸುವುದು, ಬಿಲ್‌ ನೀಡಿಕೆ ಕಡ್ಡಾಯಗೊಳಿಸಿದರೆ ಸುಲಿಗೆ ನಿಯಂತ್ರಣಕ್ಕೆ ಬಂದೀತು. ಪೊಲೀಸ್‌ ಸಹಾಯವಾಣಿ ಸಂಖ್ಯೆಯನ್ನು ಫ‌ಲಕಗಳಲ್ಲಿ ರಸ್ತೆಯುದ್ದಕ್ಕೂ ಅಳವಡಿಸಬೇಕು. ನೀಡಿದ ದೂರಿಗೆ ಪ್ರಾಮಾಣಿಕ ಕ್ರಮ ಕೈಗೊಳ್ಳುವಂತಾಗಬೇಕು. ಸೋಮವಾರದ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಬೇಕು.
– ಮಹೇಶ್‌ ಬಜತ್ತೂರು
ಸಾಮಾಜಿಕ ಮುಂದಾಳು

Advertisement
Advertisement

Udayavani is now on Telegram. Click here to join our channel and stay updated with the latest news.

Next