Advertisement

ಶೀಘ್ರ ಟವರ್‌ ತೆರವು, ಮತದಾನ ಬಹಿಷ್ಕಾರ ವಾಪಸ್‌

12:58 PM Mar 27, 2019 | Lakshmi GovindaRaju |

ಮಾಲೂರು: ಮೊಬೈಲ್‌ ಟವರ್‌ಅನ್ನು ಬದಲಿಸಬೇಕು, ಇಲ್ಲ, ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದ ಪಟ್ಟಣದ ಮಾರುತಿ ಬಡಾವಣೆಯ ಆರ್‌ಪಿ ಲೇಔಟ್‌ನ ನಿವಾಸಿಗಳನ್ನು ತಾಲೂಕು ಆಡಳಿತ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಅರ್‌.ಪಿ. ಲೇಔಟ್‌ ಒಂದಾಗಿದೆ. ಈ ಹಿಂದೆ ಬಡಾವಣೆಯ ಖಾಲಿ ನಿವೇಶನದಲ್ಲಿ ಖಾಸಗಿ ಮೊಬೈಲ್‌ ಕಂಪನಿಯವರು ನೆಲ ಬಾಡಿಗೆ ಆಧಾರದ ಮೇಲೆ ಸ್ಥಳಗುತ್ತಿಗೆ ಪಡೆದು ಟವರ್‌ ನಿರ್ಮಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಟವರ್‌ ನಿರ್ಮಿಸಿರುವ ಅಕ್ಕ ಪಕ್ಕದಲ್ಲಿ ವಾಸದ ಮನೆಗಳು ನಿರ್ಮಾಣವಾಗಿದ್ದವು.

ಸ್ಥಳಾಂತರಕ್ಕೆ ಮನವಿ: ಟವರ್‌ನಿಂದ ಹೊರಬರುತ್ತಿರುವ ರೇಡಿಯೇಷನ್‌ನಿಂದಾಗಿ ಪಾರ್ಶ್ವವಾಯು, ಬಂಜೆತನ ಮುಂತಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ನಿವಾಸಿಗಳು ಎರಡು ತಿಂಗಳ ಹಿಂದೆ ಟವರ್‌ ನಿರ್ವಹಣೆ ಮಾಡುತ್ತಿರುವ ಖಾಸಗಿ ಮೊಬೈಲ್‌ ಕಂಪನಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸ್ಥಳಾಂತರಕ್ಕೆ ಕೋರಿದ್ದರು.

ಬೆದರಿಕೆ: ಮನವಿ ಸ್ವೀಕರಿಸಿದ ಕಂಪನಿಯವರು ಸರಕಾರತ್ಮವಾಗಿ ಸ್ವಂದಿಸಿದ್ದರಾದರೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಘಟಿತರಾದ ಬಡಾವಣೆ ನಿವಾಸಿಗಳು ಟವರ್‌ನ ಬಳಿಯಲ್ಲಿ ಪ್ರತಿಭಟನೆ ನಡೆಸಿ ಏ.14ರ ಒಳಗಾಗಿ ಟವರ್‌ ಬದಲಿಸದಿದ್ದಲ್ಲಿ ಲೋಕಸಭಾ ಚುನಾವಣೆ ಸಾರ್ವತ್ರಿಕವಾಗಿ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.

ನಿವಾಸಿಗಳ ಜತೆ ಸಭೆ: ಸಾರ್ವಜನಿಕರ ಪ್ರತಿಭಟನೆಗೆ ಮಣಿದ ತಹಶೀಲ್ದಾರ್‌ ಎಂ.ನಾಗರಾಜು, ಉಪ ಚುನಾವಣಾಧಿಕಾರಿ ಜಯಪ್ರಕಾಶ್‌, ಪುರಸಭಾ ಮುಖ್ಯಾಧಿಕಾರಿ ಪ್ರಸಾದ್‌, ಬಿಎಸ್‌ಎನ್‌ಎಲ್‌ನ ಜೆಟಿಒ ದಿವ್ಯಾ, ಪಿಎಸ್‌ಐ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಟವರ್‌ನ ಉಸ್ತುವಾರಿ ವಹಿಕೊಂಡಿರುವ ಪುಟ್ಟೇಗೌಡ ಮತ್ತು ಬಡಾವಣೆ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿದರು.

Advertisement

ಮತದಾನದ ಭರವಸೆ: ಈ ವೇಳೆಯಲ್ಲಿ ಹಾಜರಿದ್ದ ಬಡಾವಣೆಯ ನಿವಾಸಿಗಳು, ಟವರ್‌ ತೆರವುಗೊಳಿಸದ ಹೊರತು ಮತದಾನ ಮಾಡದಿರಲು ತೀರ್ಮಾನಿಸಿದ್ದು ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದರು. ಈ ಬಗ್ಗೆ ಪುಟ್ಟೇಗೌಡರೊಂದಿಗೆ ಚರ್ಚಿಸಿದ ಅಧಿಕಾರಿಗಳು, ಶೀಘ್ರ ಸಾರ್ವಜನಿಕರ ಸಭೆಗೆ ಸ್ಪಂದಿಸುವಂತೆ ಅದೇಶಿಸಿದರು.

ವೇಳೆ ಮಾತನಾಡಿದ ಪುಟ್ಟೇಗೌಡ, ದೂರಸಂಪರ್ಕ ಇಲಾಖೆಯ 45 ತಂತ್ರಿಕ ದಿನಗಳಲ್ಲಿ ನಿಯಮಾನುಸಾರ ದೂರ ಸಂಪರ್ಕ ಇಲಾಖೆಯ ಅನುಮತಿ ಪಡೆದು ಟವರ್‌ ಅನ್ನು ಸ್ಥಳಾಂತರ ಮಾಡುವುದಾಗಿ ತಿಳಿಸಿದರು. ನಂತರ ಸಮ್ಮತಿಸಿದ ಬಡಾವಣೆಯ ನಿವಾಸಿಗಳು ಚುನಾವಣೆಯ ಮತದಾನದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಬಡಾವಣೆ ನಿವಾಸಿಗಳಾದ ವೆಂಕಟರಾಮ್‌, ವಿಶ್ವನಾಥರಾವು, ಜಾವೀದ್‌ಖಾನ್‌, ಕೃಷ್ಣಪ್ಪ, ವೇಣುಗೋಪಾಲ ವಹ್ನಿ, ಅರೋಗ್ಯ ಇಲಾಖೆಯ ಯತೀಶ್‌, ಇಮ್ತಿಯಾಜ್‌, ಎಂ.ಪಿ.ಶ್ರೀನಿವಾಸ್‌, ನಂಜುಂಡಪ್ಪ, ಶಿವಣ್ಣ, ಪ್ರಕಾಶ್‌ ರಾಮಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next