Advertisement

ಶುದ್ಧ ನೀರಿಗಾಗಿ ಸರತಿ

11:27 AM Sep 24, 2019 | Team Udayavani |

ನರೇಗಲ್ಲ: ಪಟ್ಟಣದ ಅನೇಕ ವಾರ್ಡ್‌ಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ನೀರು ಅರಸಿ ಬರುವ ಜನರು ಸರತಿ ಸಾಲಿನಲ್ಲಿ ನಿಂತು ಹಿಡಿಶಾಪ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಪಟ್ಟಣದಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ಕುಸಿದಿದೆ. ಇದರ ನಡುವೆಯೂ ಸಿಗುವ ನೀರಿನಲ್ಲಿ ಪ್ಲೋರೈಡ್‌ ಅಂಶ ಹೆಚ್ಚಾಗಿರುವುದರಿಂದ ಅನೇಕ ಸಮಸ್ಯೆಗಳನ್ನು ಇಲ್ಲಿನ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅವಳಡಿಸಲಾಗಿದೆ ಆದರೂ ಅವುಗಳು ಬಳಕೆಯಾಗದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಿನದ್ದೇ ಸಮಸ್ಯೆ: ಪಟ್ಟಣದ ಪ್ರತಿ ವಾರ್ಡ್‌ನಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ.ಪಂ, ಶಾಸಕ ನಿಧಿ  ಸೇರಿದಂತೆ ಇನ್ನಿತರೆ ಸಂಸ್ಥೆಗಳಿಂದಲೂ ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಸಮರ್ಪಕವಾಗಿಲ್ಲ. ಹಲವು ಕಡೆಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಬಾಗಿಲು ಮುಚ್ಚಿದರೆ, ಇನ್ನೂ ಕೆಲವೆಡೆ ನಾಲ್ಕೈದು ಗಂಟೆಗಳ ಸೇವೆ ನೀಡಿ ಬಾಗಿಲು ಹಾಕುತ್ತಿದ್ದಾರೆ. ಇದರಿಂದಾಗಿ ಉತ್ತಮ ಸೇವೆಯು ಸಿಗುತ್ತಿಲ್ಲ. ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಕೆಲವೆಡೆ ಶಾಶ್ವತವಾಗಿಯೇ ಮುಚ್ಚಲಾಗಿದೆ.

ನೀರು ಪೋಲಾದರೂ ತಡೆವವರಿಲ್ಲ: ನೀರಿಗೆ ಸಾಕಷ್ಟು ಹಾಹಾಕಾರ ಉಂಟಾಗಿರುವ ಈ ಸಂದರ್ಭದಲ್ಲಿ ಪ.ಪಂ ವತಿಯಿಂದ ಪಟ್ಟಣದ ಪ್ರತಿಯೊಂದು ವಾರ್ಡ್ ಗಳಲ್ಲಿ 10ರಿಂದ 15 ದಿನಕ್ಕೊಮ್ಮೆ ನೀರು ಬಿಟ್ಟ ಸಮಯದಲ್ಲಿ ಸಾರ್ವಜನಿಕರು ಸಾಕಷ್ಟು ನೀರು ಪೋಲು ಮಾಡುತ್ತಿದ್ದಾರೆ. ಅಲ್ಲದೇ ಕೆಲವೊಂದು ಘಟಕದ ನಲ್ಲಿ ಹಾಳಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇತ್ತೀಚೆಗೆ ಪೋಲಾಗುತ್ತಿತ್ತು. ಅದನ್ನು ಯಾರೂ ಸಂರಕ್ಷಣೆ ಮಾಡಲು ಮುಂದಾಗಲೇ ಇಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನಲಾಗಿದೆ.

ಮಹಿಳೆಯರ ಪರದಾಟ: ಇಲ್ಲಿನ ಮಹಿಳೆಯರು ತಮ್ಮ ಕೆಲಸ, ಕಾರ್ಯಗಳನ್ನು ಬಿಟ್ಟು ಶುದ್ಧ ಕುಡಿಯುವ ನೀರಿಗಾಗಿ ನಿತ್ಯ ಕನಿಷ್ಠ ಎರಡು ಗಂಟೆಗೂ ಹೆಚ್ಚು ಕಾಲ ನಿಂತು ನೀರು ತರುವ ಪ್ರಸಂಗ ಇದೆ. ಕೆಲವೊಮ್ಮೆ ಒಂದು ಕಡೆ ನೀರು ಸಿಕ್ಕರೆ ಮತ್ತೂಮ್ಮೆ ಸಿಗುವುದಿಲ್ಲ. ನೀರಿಗಾಗಿ ಓಣಿ ಓಣಿ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪ.ಪಂ ವತಿಯಿಂದ ನಿರ್ಮಿಸಿರುವ ಒಟ್ಟು 7 ಘಟಕಗಲ್ಲಿ 3 ಪ್ರಾರಂಭವಾಗಿವೆ. ಇನ್ನೂ 4 ಘಟಕಗಳು ಸ್ಥಗಿತಗೊಂಡಿವೆ. ಆದರೂ ಯಾವುದನ್ನೂ ನಿರ್ಲಕ್ಷಿಸದೆ ಪ್ರತಿ ಘಟಕಕ್ಕೂ ಒಂದು ಟ್ಯಾಂಕರ್‌ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ. ಸಮಸ್ಯೆ ಇರುವ ಬಗ್ಗೆ ನೇರವಾಗಿ ನನ್ನ ಗಮನಕ್ಕೆ ತಂದರೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.-ಎಸ್‌.ಎಸ್‌. ಹುಲ್ಲಮ್ಮನವರ, ಪಪಂ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next