Advertisement

ಹೆಣ್ಣು ಮತ್ತು ಸ್ವಾಭಿಮಾನದ ಪ್ರಶ್ನೆ

05:43 PM Jan 02, 2020 | mahesh |

ಹೆಣ್ಣು ಅಂದಾಕ್ಷಣ ಎಲ್ಲರ ಮಾತಿನಲ್ಲೂ- ಹೆಣ್ಣುಮಗಳು ದೇವತೆ, ತಾಯಿಗೆ ಸಮಾನ, ಮಾತೆ, ಅವಳನ್ನು ಗೌರವದಿಂದ ಕಾಣಬೇಕು, ಅವಳಿಗೆ ರಕ್ಷಣೆ ನೀಡಬೇಕು, ಅವಳಿಗೆ ಅವಳ ಬದುಕು ಕಟ್ಟಲು ಸ್ವಾತಂತ್ರ್ಯ ಇರಬೇಕು, ಗಂಡಿನಂತೆ ಅವಳಿಗೂ ಎಲ್ಲ ಸಮಯದಲ್ಲೂ ಗೌರವ, ಸಮಾನತೆ ಇರಬೇಕು ಎಂದು.

Advertisement

ಆದರೆ, ಈ ಪದಗಳು ಕೇವಲ ಹೇಳಲು ಮತ್ತು ಬರೆಯಲು ಮಾತ್ರ. ಹೆಣ್ಣಿಗೆ ಈ ಆಧುನಿಕ ಕಾಲದಲ್ಲೂ ಸ್ವಾತಂತ್ರ್ಯವಾಗಲಿ, ಗೌರವವಾಗಲಿ ಮತ್ತು ಸಮಾನತೆಯಾಗಲಿ ಸಿಗುತ್ತಿಲ್ಲ. ಅವಳು ತನ್ನ ದೈನಂದಿನ ಜೀವನದಲ್ಲಿ ಎಷ್ಟೋ ರೀತಿಯ ನೋವು-ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ತನಗೆ ಎಷ್ಟೇ ಕಷ್ಟಗಳು ಬಂದರೂ ಧೈರ್ಯಗೆಡದೇ ಎದೆಗುಂದದೆ ಮುಂದುವರಿಯುತ್ತಿದ್ದಾಳೆ. ಎಷ್ಟೋ ಜನರು ಪ್ರತಿಪಾದಿಸುತ್ತಾರೆ- ಹೆಣ್ಣು ಈಗ ಬಲಶಾಲಿ, ಈಗಿನ ಕಾಲದಲ್ಲಿ ಅವಳು ಏನು ಹೇಳಿದರೂ, ಏನು ಮಾಡಿದರೂ ನಡೆಯುತ್ತದೆ. ಹೆಣ್ಣು ಈಗ ಗಂಡಸಿಗಿಂತ ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾಳೆ ಎಂದು. ಆದರೆ, ಇತ್ತೀಚಿನ ಕೆಲವು ಪ್ರಕರಣಗಳನ್ನು ನೋಡಿ ನಾವು, “ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿ’ ಎಂದು ಅಂಗಲಾಚಿ ಬೇಡುತ್ತಿದ್ದೇವೆ ಮತ್ತು ಇಂತಹ ಪ್ರಕರಣಗಳು ಮುಂದೆ ನಡೆಯಬಾರದು ಎಂದು ಪ್ರತಿಭಟನೆ ಕೂಡ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಗಂಡಸಿಗಿಂತ ಮುಂದುವರಿದಿರಬಹುದು. ಆದರೆ, ಆ ಕ್ಷೇತ್ರವನ್ನು ತಲುಪಬೇಕಾದರೆ ಅವರು ಎಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಎನ್ನುವುದು ಆ ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು.

ಹೆಣ್ಣನ್ನು ದೈವೀಸ್ವರೂಪ ಎನ್ನುತ್ತಾರೆ. ಹೆಣ್ಣು ಕೆರಳಿದರೆ ರಣಚಂಡಿಯಾಗುತ್ತಾಳೆ ಎನ್ನುತ್ತಾರೆ. ಆದರೆ, ಆ ಹೆಣ್ಣು ಕೆಲವು ಕಾಮುಕರ ಮುಂದೆ ರಣಚಂಡಿಯಾದರೂ ಅವರ ಕಾಮುತಕನದ ಮುಂದೆ ಸೋತು ಹೋಗುತ್ತಾಳೆ. ಮೊದಲಿನ ಕಾಲದಲ್ಲಿ ಹೆಣ್ಣುಮಗುವೆಂದು ಗೊತ್ತಾದರೆ ಸಾಕು, ಅದನ್ನು ಭ್ರೂಣದಲ್ಲಿಯೇ ಕೊಂದುಹಾಕುತ್ತಿದ್ದರು. ಆದರೆ, ಈಗ ಇದರ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಮಗುವನ್ನು ಬೆಳೆಸಬೇಕಾದರೆ ಎಷ್ಟು ಕಷ್ಟಗಳನ್ನು ಎದುರಿಸಬೇಕು ಎನ್ನುವುದು ಹೆಣ್ಣು ಹೆತ್ತವರಿಗಷ್ಟೇ ಗೊತ್ತು. ಹಾಗಂತ ಗಂಡುಮಗುವನ್ನು ಬೆಳೆಸುವುದು ಕೂಡ ಸುಲಭವಲ್ಲ. ತಮ್ಮ ಕಣ್ಣ ಮುಂದೆ ತಾವು ಪ್ರೀತಿಯಿಂದ ಬೆಳೆಸಿದ ಮಗಳನ್ನು ಕಾಮುಕತನದಿಂದ ಸಾಯಿಸಿದ ಸುದ್ದಿ ಕೇಳಿ ಆ ಹೆತ್ತ ಕರುಳಿಗೆ ಹೇಗಾಗಬಹುದು ಒಮ್ಮೆ ಯೋಚಿಸಿ?

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’- ಇದು ಎಲ್ಲಾ ಶಾಲೆಯಲ್ಲೂ ನೇತುಹಾಕಿರುವ ಬೋರ್ಡು. ಒಂದು ಹೆಣ್ಣು ಮಗು ಕಲಿತು ತನ್ನ ಕ್ಷೇತ್ರದಲ್ಲಿ ಮುಂದುವರಿದರೆ ಅವಳು ಉಳಿದ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುತ್ತಾಳೆ. ಆದರೆ, ಕೆಲವು ಹೆಣ್ಣುಮಕ್ಕಳಿಗೆ ವಿದ್ಯೆ-ಬುದ್ಧಿಯ ಬದಲು ನೋವಿನ ಪಾಠವನ್ನು ಕಲಿಯುವ ಜಾಗ ಆ ಶಾಲೆ ಆಗುತ್ತದೆ. ಅಂದರೆ, ರಕ್ಷಣೆ ಸಿಗಬೇಕಾದ ಜಾಗದಲ್ಲಿ ರಕ್ಷಣೆ ಸಿಗುವುದಿಲ್ಲ. ಶಾಲೆಯಲ್ಲಿ ಬಿಡಿ ತಮ್ಮ ಮನೆಯಲ್ಲಿಯೇ ರಕ್ಷಣೆ ಸಿಗದೇ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಬಿಟ್ಟಿದ್ದಾರೆ. ತಮಗೆ ಎಲ್ಲಿ ರಕ್ಷಣೆ ಸಿಗುತ್ತದೆ ಎಂದು ಭಾವಿಸಿರುತ್ತಾರೋ ಅಲ್ಲಿಯೇ ಅವರಿಗೆ ರಕ್ಷಣೆ ಇಲ್ಲದಿದ್ದರೆ ಜೀವನವನ್ನು ನಡೆಸುವುದಾದರೂ ಹೇಗೆ? ನಮ್ಮ ದೇಶದಲ್ಲಿಯೇ ನಮಗೆ ರಕ್ಷಣೆ ಇಲ್ಲದಿರುವಾಗ ನಾವು ಬದುಕುವುದು ಹೇಗೆ?

ಸುಶ್ಮಿತಾ ಶೆಟ್ಟಿ ಪೆರುವಾಯಿ
ಪ್ರಥಮ ಬಿ. ಕಾಂ., ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next