Advertisement
ಕೆಲವು ಸಮಯದ ಹಿಂದೆ ಕೇಂದ್ರ ಸರಕಾರ ತನ್ನ ಅಸ್ತಿತ್ವದ ನಾಲ್ಕು ವರ್ಷಗಳ ಪೂರೈಕೆಯ ಸಂದರ್ಭದಲ್ಲಿ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದೇ ಸಂದರ್ಭದಲ್ಲಿ ಪ್ರಮುಖ ವಿರೋಧ ಪಕ್ಷ ಸರಕಾರದ ನ್ಯೂನತೆಗಳ ಪಟ್ಟಿ ಬಿಡುಗಡೆ ಮಾಡಿತು. ಹೀಗೆ ಪಕ್ಷಗಳು, ಸರಕಾರಗಳು, ವ್ಯಕ್ತಿಗಳು ಸತತವಾಗಿ ತಮ್ಮ ಸಾಧನೆಗಳನ್ನು ಬೇರೆಯವರ ವೈಫಲ್ಯಗಳನ್ನು ಜನರಿಗೆ ವಿವರಿಸುವುದರಲ್ಲಿ ತೊಡಗಿವೆ. ಕರ್ನಾಟಕದ ಚುನಾವಣೆಗಳು ಘೋಷಣೆಯಾಗುವ ಮೊದಲೂ ಹೀಗೆ ಆಗಿತ್ತು. ವ್ಯಕ್ತಿಗಳು ಮತ್ತು ಸರಕಾರ ತಮ್ಮ ಸಾಧನೆಗಳ ಕುರಿತು ವಿವರಣೆಯಲ್ಲಿ ತೊಡಗಿದ್ದವು. ರಸ್ತೆ ಬದಿಯ ಹೋರ್ಡಿಂಗ್‌ಗಳು, ಬಸ್ಸುಗಳ ಹಿಂಭಾಗಗಳಲ್ಲಿಯ ಜಾಹೀರಾತುಗಳು ಎಲ್ಲವೂ ಸರಕಾರದ/ಪಕ್ಷಗಳ/ಶಾಸಕರ/ಸಚಿವರ ಸಾಧನೆಗಳ ವಿವರಣೆಗಳಿಂದ ತುಂಬಿ ತುಳುಕುತ್ತಿದ್ದವು.
Related Articles
Advertisement
ಇಂತಹ ಮಾನ ದಂಡಗಳ ಅಗತ್ಯ ಏಕೆ ಇದೆ? ಏಕೆಂದರೆ ಮೌಲ್ಯ ಮಾಪನ ವ್ಯವಸ್ಥೆಗಳು ಸರಕಾರಗಳಲ್ಲಿ ಪರಸ್ಪರ ಸ್ಪರ್ಧೆಗಳನ್ನು ಉಂಟು ಮಾಡಿ ಒಳ್ಳೆಯ ಕಾರ್ಯ ಆಗುವಂತೆ ಪ್ರೇರೇಪಿಸ ಬಹುದು. ಅಲ್ಲದೆ ಇಂತಹ ವ್ಯವಸ್ಥೆಯ ಲಭ್ಯತೆ ಇದ್ದರೆ ಒಳ್ಳೆಯ ಅಭಿವೃದ್ಧಿ ಕಾರ್ಯ ಸಾಧಿಸಿದ ರಾಜಕಾರಣಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ.
ಈ ರೀತಿಯ ಮೌಲ್ಯಮಾಪನಕ್ಕೆ ಜಗತ್ತಿನಾದ್ಯಂತ ಮಾನದಂಡಗಳು ಇಂದು ಲಭ್ಯವಿವೆ. ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿ ಕೊಳ್ಳಲು, ಸತತವಾಗಿ ತಮ್ಮ ಕಾರ್ಯ ಶೈಲಿಯನ್ನು ಸುಧಾರಿಸಿಕೊಳ್ಳಲು ಹಾಗೂ ಎಲ್ಲ ಸಾಧನೆಗಳನ್ನೂ ಐತಿಹಾಸಿಕ ಆಸಕ್ತಿಯಿಂದ ಸಂರಕ್ಷಿಸಲು ಇಂದು ಜಗತ್ತಿನಾದ್ಯಂತ ದೊಡ್ಡ-ದೊಡ್ಡ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುನ್ನಡೆಯುತ್ತಿವೆ. ತಮ್ಮ ಕಾರ್ಯಾಚರಣೆಗಳಲ್ಲಿ ಜೀರೋ ಎರರ್ ಸ್ಟೇಟಸ್ ಸಾಧಿಸಲು ಅವು ಪ್ರಯತ್ನಿಸುತ್ತಿವೆ. ಈ ರೀತಿಯ ತಪ್ಪಿಲ್ಲದ ಕೆಲಸ ಎಷ್ಟೇ ಸಂಕೀರ್ಣವಾಗಿದ್ದರೂ ಸಾಧ್ಯವಿದೆ ಎಂಬುದನ್ನು ನಮಗೆ ಮುಂಬೈನ ಸಂಘಟನೆ ದ ಗ್ರೇಟ್ ಬಾಂಬೆ ಡಬ್ಟಾ ವಾಲಾ ತೋರಿಸಿಕೊಟ್ಟಿದೆ. ಸಾರ್ವಜನಿಕ ಆಡಳಿತದಲ್ಲಿ ಕೂಡಾ ಆ ರೀತಿಯ ವ್ಯವಸ್ಥೆ¿åನ್ನು ಜಾರಿಗೊಳಿಸಲು ಸಾಧ್ಯವಿದೆ ಎನ್ನುವುದೇ ನನ್ನ ಭಾವನೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಈ ರೀತಿಯ ಸೂತ್ರಗಳು ಅಭಿವೃದ್ಧಿಗೊಂಡಿವೆ. ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಅಕಾಡೆಮಿಕ್ ಆಡಿಟ್ ಇದೆ. ನ್ಯಾಕ್ ಇದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಹಲವು ರೀತಿಯ ಆಡಿಟ್‌ಗಳು, ಗ್ರೀನ್ ಆಡಿಟ್‌ಗಳು ಇವೆ. ಇಂತಹ ಆಡಿಟ್ ವ್ಯವಸ್ಥೆಯನ್ನು ಹಂತ ಹಂತವಾಗಿ ಸರಕಾರಗಳಿಗೆ ಮತ್ತು ಜನಪ್ರತಿ ನಿಧಿಗಳಿಗೂ ಅಳವಡಿಸಬಹುದಾಗಿದೆ. ಇದರಿಂದ ಜನತೆಗೆ ಅಷ್ಟೇ ಅಲ್ಲ. ಸರಕಾರಗಳಿಗೂ ಮತ್ತು ಜನಪ್ರತಿನಿಧಿಗಳಿಗೂ ಲಾಭವಿದೆ. ಸರಕಾರಗಳು, ಜನಪ್ರತಿನಿಧಿಗಳು ತಮ್ಮ ಸಾಧನೆಗಳನ್ನು ನೇರವಾಗಿ, ದಿಟ್ಟವಾಗಿ, ಆಧಾರಗಳ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿದರೆ ಅವರಿಗೆ ಚುನಾವಣೆಗಳನ್ನು ಎದುರಿಸಲು ಬಲವಾದ ಅಸ್ತ್ರಗಳು ಪ್ರಾಪ್ತವಾಗುತ್ತವೆ. ಅಷ್ಟೇ ಅಲ್ಲ, ಅವರಿಗೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ದೊರೆಯುತ್ತದೆ. ಇಂತಹ ವ್ಯವಸ್ಥೆಯಿಂದಾಗಿ ಒಳ್ಳೆಯ ಕೆಲಸ ಮಾಡಿದ ಜನಪ್ರತಿನಿಧಿಗಳಿಗೆ ಅಪಾರ ಗೌರವ ಜನ ಮನ್ನಣೆ ದೊರೆಯಬಹುದು. ಜನತೆಗೆ ಕೂಡಾ ಒಳ್ಳೆಯ ಕೆಲಸ ಮಾಡಿದವರನ್ನು, ಹಾಗೆಯೇ ಹಿಂದೆ ಬಿದ್ದವರನ್ನು ಸ್ಪಷ್ಟವಾಗಿ ಗುರುತಿಸಲು ಅವಕಾಶ ಸಿಗುತ್ತದೆ. ಇನ್ನೊಂದು ಮಾತು. ಇದು ನಮ್ಮ ಸಂವಿಧಾನದ ಸೂಚ್ಯ ಆಶಯ ಕೂಡ ಹೌದು. ನಮ್ಮ ಸಂವಿಧಾನ ಸರಕಾರಗಳ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳಲು ಕಾಂಪೊóàಲರ್ ಎಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಮಹಾಲೇಖಪಾಲ) ಎಂಬ ಶಾಸನ ಬದ್ಧ ಸಂಸ್ಥೆಯನ್ನು ರೂಪಿಸಿದೆ. ಇದು ಚುನಾವಣಾ ಆಯೋಗದ ಹಾಗೆಯೇ ಸಂವಿಧಾನದಡಿಯಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಒಂದು ಸಂಸ್ಥೆ. ಈ ಸಂಸ್ಥೆ ಸರಕಾರಗಳ ವಿತ್ತೀಯ ಶಿಸ್ತನ್ನು ಗಮನಿಸಲು ಹುಟ್ಟಿಕೊಂಡ ಸಂಸ್ಥೆ. ಅದು ಸಾರ್ವಜನಿಕ ಆಡಳಿತದ ಕ್ವಾಲಿಟಿ ಕಂಟ್ರೋಲ್‌ನ ಅವಶ್ಯಕತೆಗಳ ಒಂದು ಭಾಗವನ್ನು ಪೂರೈಸುತ್ತದೆ. ನಮಗೆ ಈಗ ಇರುವ ಅಗತ್ಯ ಸಂಪೂರ್ಣವಾಗಿ ಸಾರ್ವಜನಿಕ ಆಡಳಿತವನ್ನು ಮೌಲ್ಯಮಾಪನ ಕ್ಕೊಳಪಡಿಸಬಲ್ಲ ಒಂದು ಆಡಳಿತದ ಗುಣಮಟ್ಟದ ಮಾನಿಟರಿಂಗ್ ಸಂಸ್ಥೆ. ಸರಕಾರ ಈ ದಿಶೆಯಲ್ಲಿ ಆಲೋಚಿಸಿ ಕಾಂಪೊóàಲರ್ ಎಂಡ್ ಆಡಿಟರ್ ಜನರಲ್ ರೀತಿಯಲ್ಲಿಯೇ ಒಂದು ಸಾಂವಿಧಾನಿಕವಾದ ಕ್ವಾಲಿಟಿ ಕಂಟ್ರೋಲ್ ಸಂಸ್ಥೆಯನ್ನು ಹುಟ್ಟು ಹಾಕಬಹುದಾಗಿದೆ. ಇದರ ಉದ್ದೇಶ ಜನ ಪ್ರತಿನಿಧಿಗಳ ಹಾಗೂ ಸರಕಾರಗಳ ಮೌಲ್ಯಮಾಪನ.ಲೋಕಪಾಲ ಸಂಸ್ಥೆಗೆ ಮತ್ತು ಈ ಸಂಸ್ಥೆಗೆ ವ್ಯತ್ಯಾಸವಿದೆ. ಏನೆಂದರೆ ಇದು ಕೇವಲ ಕಂಪ್ಲೇಂಟ್ ಕೇಳುವ ಸಂಸ್ಥೆಯಲ್ಲ. ಕಂಪ್ಲೇಂಟ್‌ಗಳನ್ನು ಹ್ಯಾಂಡಲ್ ಮಾಡುವ ಸಂಸ್ಥೆಯೂ ಅಲ್ಲ. ಈ ಸಂಸ್ಥೆಯ ಕೆಲಸವೆಂದರೆ ವಾಸ್ತವಿಕ ಆಧಾರಗಳ ಮೇಲೆ ಮೌಲ್ಯಮಾಪನ ನಡೆಸಿ ಶ್ರೇಣಿಗಳನ್ನು, ಗ್ರೇಡಿಂಗ್‌ಗಳನ್ನು ಜನ ಪ್ರತಿನಿಧಿಗಳಿಗೆ ಹಾಗೂ ಸರಕಾರಗಳಿಗೆ ನೀಡುವುದು. ಹಾಗೆಯೇ ಈ ಸಂಸ್ಥೆ ಒಳ್ಳೆಯ ಆಡಳಿತದ ಮಾನದಂಡಗಳು ಏನು ಎನ್ನುವುದನ್ನು ಸೂಕ್ಷ್ಮವಾಗಿ ಚಲನಶೀಲವಾಗಿ, ಗುರುತಿಸಿಕೊಳ್ಳುತ್ತಾ ಹೋಗಬಹುದಾಗಿದೆ. ಬಹುಶಃ ಸರಕಾರಗಳನ್ನು ಇಂತಹದೊಂದು ಸಂಸ್ಥೆ ಅಳೆಯಬಹುದಾದ ಮಾನದಂಡಗಳೆಂದರೆ: (ಅ) ಆ ಸರಕಾರ ಆಡಳಿತಕ್ಕೆ ಬಂದ ನಂತರ ನೀತಿ ನಿರೂಪಣೆಯ ದಾರಿ ಸಂವಿಧಾನದ ಆಶಯಗಳಂತೆ ಇದೆಯೇ ಎನ್ನುವುದರ ಪರಿಶೀಲನೆ (ಬ) ನೀತಿ ನಿರೂಪಣೆಯ ವೇಗ ಮತ್ತು ಶ್ರೇಷ್ಠತೆ (ಕ) ನೀತಿಗಳನ್ನು ಕ್ರಿಯಾತ್ಮಕವಾಗಿ ಆಚರಣೆಗೆ ತರುವಿಕೆಯ ವೇಗ ಮತ್ತು ಶ್ರೇಷ್ಠತೆ ಹಾಗೂ ಪಾರದರ್ಶಕತೆ.
ಅಂತೆಯೇ ಮಾನದಂಡಗಳು ಕಾರ್ಯ ನಿರ್ವಹಣೆಯಲ್ಲಿನ ಪ್ರಾಮಾಣಿಕತೆ, ವೇಗ, ಪಾರದರ್ಶಕತೆ, ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ನ್ಯಾಯ ಪಾಲನೆಗಳನ್ನು ಹೊಂದಿರಬಹುದಾಗಿದೆ. ಅಂತೆಯೇ ಜನಪ್ರತಿನಿಧಿಗಳನ್ನು ನೀತಿ ನಿರೂಪಣೆಗೆ ಕೊಡುಗೆ, ಶಾಸನ ಸಭೆಗಳ ಭಾಗವಹಿಸುವಿಕೆಯ ಗುಣಮಟ್ಟ ಮತ್ತು ಜನ ಸ್ನೇಹಿ ಗುಣ ಮಟ್ಟ ಆಧಾರಗಳ ಮೇಲೆ ಕಾಲಕಾಲಕ್ಕೆ ಜನರ ಫೀಡ್‌ಬ್ಯಾಕ್ ಮೂಲಕ ಅಳೆಯಬಹುದಾಗಿದೆ. ಈ ರೀತಿಯಲ್ಲಿ ಸರಕಾರಗಳ ಜನಪ್ರತಿನಿಧಿಗಳ ಮೌಲ್ಯಮಾಪನೆ ಗಾಗಿ ಶಾಸನಬದ್ಧ ಸಂಸ್ಥೆಯೊಂದನ್ನು ಜಾರಿಗೆ ತಂದರೆ ಅದು ಜಾಗತಿಕ ಇತಿಹಾಸದಲ್ಲಿಯೇ ಒಂದು ಮಹತ್ವದ ಹೆಜ್ಜೆಯಾಗಲಿದೆ. ಇಂತಹ ಸಂಸ್ಥೆಯೊಂದರ ಕನಸು ಕಾಣುವುದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನ ತಿದ್ದುಪಡಿಯ ಮೂಲಕ ಇದನ್ನು ಸಾಧಿಸಬಹುದಾಗಿದೆ. ಕನ್‌ಫ್ಯೂಶಿಯಸ್ ಹೇಳುವಂತೆ ಸಾವಿರಾರು ಮೈಲಿಗಳ ಪಯಣ ಆರಂಭವಾಗುವುದು ಒಂದು ಚಿಕ್ಕ ಹೆಜ್ಜೆಯನ್ನು ಮುಂದಿಟ್ಟಾಗ ಮಾತ್ರ. – ಡಾ. ಆರ್.ಜಿ. ಹೆಗಡೆ