Advertisement
ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯ 19 ವಿದ್ಯಾರ್ಥಿಗಳು ಅನ್ವೇಷಣೆ ಎನ್ನುವ ಶೀರ್ಷಿಕೆಯೊಂದಿಗೆ ಹೊಸತನದ ಹುಡುಕಾಟದಲ್ಲಿ ತೊಡಗಿ, ರಚಿಸಿದ 32 ಕಲಾಕೃತಿಗಳ ಪ್ರದರ್ಶನ ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ವಿಭೂತಿ ಆರ್ಟ್‌ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಮೊಹೆಂಜೊದಾರೊ, ಹರಪ್ಪಾ ಸಂಸ್ಕೃತಿಯ ಕಲೆ, ಸಿಂಧೂ ನಾಗರಿಕತೆಯ ಕಾಲದ ಕಲೆ, ತಾಳೆಗರಿಯಲ್ಲಿ ಚಿತ್ರಿಸಿದ ಪೌರಾಣಿಕ ಕಥಾಚಿತ್ರ, ಮಧುಬನಿ, ತೊಗಲುಗೊಂಬೆ ಶೈಲಿ, ಜನಪದ ಸಂಸ್ಕೃತಿ ಮುಂತಾದವುಗಳ ಅಧ್ಯಯನಪೂರ್ವಕ ಅನುಕರಣೆಯೊಂದಿಗೆ ಹಳೆ ನೆನಪು, ಜೂಜಾಟ, ನವಿರಾದ ಸ್ಪರ್ಶ, ಚಿಂತೆ, ಬೀದಿ ಮಕ್ಕಳ ಬದುಕು ಹೀಗೆ ಸಮಕಾಲೀನ ಚಿಂತನೆಗಳನ್ನು ಸಮೀಕರಿಸಿದ ಕಲಾಕೃತಿಗಳು ಸೊಗಸಾಗಿದ್ದವು. ಬಹಳ ಸೊಗಸಾದ ರೇಖಾ ವಿನ್ಯಾಸ, ಹಿನ್ನೆಲೆ ಮೈವಳಿಕೆ ಮತ್ತು ವರ್ಣ ಸಂಯೋಜನೆಗಳೊಂದಿಗೆ ಉತ್ತಮ ಅಭಿವ್ಯಕ್ತಿ ಇಲ್ಲಿತ್ತು. ಉಡುಪಿಯ ಕಲಾಪ್ರಿಯರಿಗೆ ಹೊಸತನದ ಕಲಾಕೃತಿಗಳನ್ನು ಪರಿಚಯಿಸಿದ ಕಲಾಶಾಲೆಯ ಕಾರ್ಯದರ್ಶಿ ಡಾ| ಯು.ಸಿ. ನಿರಂಜನ್, ಎರಡೂ ಕಲಾಶಾಲೆಗಳ ಪ್ರಾಂಶುಪಾಲರಾದ ರಾಜೇಂದ್ರ ತ್ರಾಸಿ ಮತ್ತು ಕೆ. ಪುರುಷೋತ್ತಮ್ ನಾಯಕ್ ಹಾಗೂ ಕಲಾವಿಭಾಗದ ಮುಖ್ಯಸ್ಥ ಖ್ಯಾತ ಕಲಾವಿದ ಎನ್.ಎಸ್. ಪತ್ತಾರ್ ಅಭಿನಂದನಾರ್ಹರು.
Advertisement
ಹೊಸತರ ಅನ್ವೇಷಣೆ
03:50 AM Mar 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.