Advertisement

ರಂಜಿಸಿದ ಕಂಬಳ ಕೋಣ ಸೌಂದರ್ಯ ಸ್ಪರ್ಧೆ

08:51 AM Dec 02, 2017 | |

ವಿದ್ಯಾಗಿರಿ, ಮೂಡಬಿದಿರೆ: ಆಳ್ವಾಸ್‌ ನುಡಿಸಿರಿಯ ಕೃಷಿ ಸಿರಿಯ ಅಂಗವಾಗಿ ಶುಕ್ರ ವಾರ ಆಯೋಜಿಸಿದ್ದ ವಿನೂತನ ಪರಿಕಲ್ಪನೆ ಕಂಬಳ ಕೋಣಗಳ ಸೌಂದರ್ಯ ಸ್ಪರ್ಧೆಯಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ ಅವರ ಕಂಬಳದ ಕೋಣಗಳಾದ “ಕುಟ್ಟಿ -ಕುದ್ರಾಡಿ’ ಜೋಡಿ ಪ್ರಥಮ ಪ್ರಶಸ್ತಿ ಗಳಿಸಿ 50,000 ರೂ. ನಗದು ಪುರಸ್ಕಾರವನ್ನು ಪಡೆದುಕೊಂಡಿದೆ. ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್‌ ಅವರ ಕಂಬಳದ ಕೋಣ ಗಳಾದ “ಕುಂಞ-ಕಾಜ’ ದ್ವಿತೀಯ ಪ್ರಶಸ್ತಿ ಯೊಂದಿಗೆ 30,000 ರೂ. ನಗದು ಪುರಸ್ಕಾರಕ್ಕೆ ಪಾತ್ರವಾಯಿತು.

Advertisement

ಕೋಣಗಳ ದೇಹ ಸೌಂದರ್ಯ, ಅಲಂಕಾರ, ನಡಿಗೆಯ ಗತ್ತು ಮುಂತಾದ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ ಅವರ ಕಂಬಳದ ಕೋಣಗಳಾದ ಕುಟ್ಟಿ – ಕುದ್ರಾಡಿ ಜೋಡಿಗೆ ಇದೀಗ ಆರು ವರ್ಷ ಪ್ರಾಯ. ಇದರಲ್ಲಿ ಕುದ್ರಾಡಿ ನೂರಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದೆ. ಕುಟ್ಟಿ ಸುಮಾರು 60 ಪ್ರಶಸ್ತಿಗಳನ್ನು ಜಯಿಸಿದೆ. ದ್ವಿತೀಯ ಪ್ರಶಸ್ತಿ ಪಡೆದ ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್‌ ಅವರ ಕಂಬಳದ ಕೋಣಗಳಾದ ಕುಂಞ-ಕಾಜ ಕೋಣಗಳಿಗೆ ಇದೀಗ ಆರು ವರ್ಷ. ಈ ಕೋಣಗಳು ಹಗ್ಗ ವಿಭಾಗದಲ್ಲಿ ಭಾಗವಹಿಸಿ ಸುಮಾರು 9 ಪ್ರಶಸ್ತಿಗಳನ್ನು ಗಳಿಸಿವೆ.

ಓಟಗಾರರ ಸೌಂದರ್ಯ ಸ್ಪರ್ಧೆ
ಓಟಗಾರರಿಗೆ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಕೊಳಕೆ ಇರ್ವತ್ತೂರು ಆನಂದ ಪ್ರಥಮ ಹಾಗೂ ಶಂಕರ ವಾಲ್ಪಾಡಿ ಅವರು ದ್ವಿತೀಯ ಪ್ರಶಸ್ತಿ ಗಳಿಸಿದರು. ವಿಜೇತರಿಗೆ ಕ್ರಮವಾಗಿ 10,000 ರೂ. ಹಾಗೂ 7,000 ರೂ. ನಗದು ಪುರಸ್ಕಾರ ನೀಡಲಾಯಿತು.

ವಿಶೇಷ ಪ್ರಶಸ್ತಿ
ಬೋಳಂತೂರು ಗುತ್ತು ದಿ| ಗಂಗಾಧರ ರೈಗಳ ಪ್ರಶಸ್ತಿ ವಿಜೇತ ಕಂಬಳದ ಕೋಣ “ಕಾಟಿಗೆ’ ವಿಶೇಷ ಪ್ರಶಸ್ತಿ ನೀಡಲಾಯಿತು. 
ಕಯ್ನಾರ ಕಿಂಞಣ್ಣ ರೈ ವೇದಿಕೆಯಲ್ಲಿ ಜರಗಿದ ತುಳು ಐಸಿರಿಯಲ್ಲಿ ಆಳ್ವಾಸ್‌ ನುಡಿ ಸಿರಿಯ ರೂವಾರಿ ಡಾ| ಮೋಹನ್‌ ಆಳ್ವ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಶಾಸಕ ಅಭಯ ಚಂದ್ರ, ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ| ಬಿ.ಎ.ವಿವೇಕ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಮಾಜಿ ಅಧ್ಯಕ್ಷರುಗಳಾದ ಡಾ| ವಾಮನ ನಂದಾವರ, ಸೀತಾರಾಮ ಕುಲಾಲ್‌, ಉಮಾನಾಥ ಕೋಟ್ಯಾನ್‌, ಉದ್ಯಮಿ ಐಕಳ ಹರೀಶ್‌ ಶೆಟ್ಟಿ, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಉಪಸ್ಥಿತರಿದ್ದರು.

ವರ್ಣರಂಜಿತ ಮೆರವಣಿಗೆಯಲ್ಲಿ ಕೋಣಗಳ ಗತ್ತಿನ ಹೆಜ್ಜೆ 
ಕೃಷಿಸಿರಿ ಆವರಣದಿಂದ ತುಳು ಐಸಿರಿ ಆವರಣಕ್ಕೆ ಗಣ್ಯರ ಉಪಸ್ಥಿತಿಯೊಂದಿಗೆ ಕಂಬಳದ ಕೋಣಗಳ ವರ್ಣರಂಜಿತ ಮೆರವಣಿಗೆ ನಡೆಯಿತು. ವಾದ್ಯ, ಬ್ಯಾಂಡ್‌, ಕೊಂಬು ನಾದಕ್ಕೆ ಕಂಬಳದ ಕೋಣಗಳು ಗತ್ತಿನಿಂದ ಹೆಜ್ಜೆ ಹಾಕಿದವು. ಪಾವಡೆ ಹಾಕಿ, ನೊಗ, ನೆತ್ತಿಬಲ್‌ , ಕರಿಗೊಂಡೆ ಬಿಗಿದು ಅವುಗಳನ್ನು ಅಲಂಕರಿಸಲಾಗಿತ್ತು. ಡೊಳ್ಳುವಾದನ, ಆಟಿಕಳೆಂಜ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

Advertisement

 ಕೃಷಿಸಿರಿಗೆ ಜನಸಾಗರ
ಆಳ್ವಾಸ್‌ ನುಡಿಸಿರಿಯಲ್ಲಿ ಕೃಷಿಸಿರಿ ಪ್ರಧಾನ ಆಕರ್ಷಣೆಯಾಗಿದ್ದು ಜನಸಾಗರ ಹರಿದು ಬಂತು. ತರಕಾರಿ, ಹೂವುಗಳ ನೈಜಕೃಷಿ, ವಿವಿಧ ಧಾನ್ಯ ಗಳು, ಔಷಧೀಯ ಸಸ್ಯಗಳು, ಹಲವಾರು ತಳಿಯ ಗಡ್ಡೆಗಳು, ಸುಮಾರು 44 ವಿಧದ ಬಿದಿರಿನ ತಳಿಗಳು, ತರಕಾರಿಯಿಂದ ರಚಿಸಿದ ಕಲಾಕೃತಿಗಳು, ಬೊನ್ಸಾಯಿ, ಪಕ್ಷಿಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಮೀನು ಹಾಗೂ ಚಿಪ್ಪುಗಳ ಪ್ರದರ್ಶನ ವನ್ನು ಆಪಾರ ಸಂಖ್ಯೆಯ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next