Advertisement

ತಾಯ್ನಾಡಿಗೆ ಮರಳೀತೆ ಕಿತ್ತೂರು ರಾಣಿ ಚೆನ್ನಮ್ಮ ಖಡ್ಗ?

11:37 AM Oct 09, 2017 | |

ಧಾರವಾಡ: ಬ್ರಿಟಿಷರ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ (1824) ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಎಂದ ಕೂಡಲೇ ಕುದುರೆ ಏರಿ, ಖಡ್ಗ ಝಳಪಿಸುವ ಚಿತ್ರ ಎಲ್ಲರ ಕಣ್ಮುಂದೆ ಬರುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿದ
ಈ ವೀರನಾರಿ ಹಿಡಿದ ಖಡ್ಗ ಈಗ ಎಲ್ಲಿದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.

Advertisement

ಚೆನ್ನಮ್ಮಾಜಿ ಹಿಡಿದ ಖಡ್ಗ ಮತ್ತು ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಬಳಸಿದ ಇತರ ಉಪಕರಣಗಳನ್ನು ನೋಡುವ ಭಾಗ್ಯ ಮಾತ್ರ ಕನ್ನಡಿಗರಿಗೆ ಈವರೆಗೂ ಸಿಕ್ಕುತ್ತಿಲ್ಲ. ಅವೆಲ್ಲವೂ ಲಂಡನ್‌ನ ವಸ್ತು ಸಂಗ್ರಹಾಲಯದಲ್ಲಿದೆ. ಅವುಗಳನ್ನು ಮರಳಿ ತರುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಯಥಾ ಪ್ರಕಾರ ಮುಂದುವರಿದಿದೆ. ಪ್ರತಿ ವರ್ಷ ಅ.24 ರಂದು ಕಿತ್ತೂರು ವಿಜಯೋತ್ಸವ ಸ್ಮರಣಾರ್ಥ ನಡೆಯುವ ಕಿತ್ತೂರು ಉತ್ಸವದಲ್ಲಿ ಚೆನ್ನಮ್ಮಾಜಿ ಖಡ್ಗದ ವಿಚಾರ ಜನಪ್ರತಿನಿಧಿಗಳ ಭಾಷಣದ ವಿಷಯ ವಸ್ತುವಾಗಿದೆ. ಇದೀಗ ಮತ್ತೂಂದು ಕಿತ್ತೂರು ಉತ್ಸವ ಬಂದಿದ್ದು, ಈ ಬಾರಿಯಾದರೂ ಸರ್ಕಾರ ಚೆನ್ನಮ್ಮನ ಖಡ್ಗ ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದೇ ಎಂಬ ಪ್ರಶ್ನೆ ಚೆನ್ನಮ್ಮಾಜಿ ಅಭಿಮಾನಿಗಳನ್ನು ಕಾಡುತ್ತಿದೆ.

ಫಲಕೊಡದ ಪ್ರಯತ್ನ: ದಕ್ಷಿಣ ಭಾರತದಲ್ಲಿಯೇ ಸುಂದರವಾಗಿದ್ದ ಕಟ್ಟಿಗೆ ಅರಮನೆ ಮತ್ತು ದೈತ್ಯ ಕೋಟೆಯನ್ನು ಕಿತ್ತೂರು ಯುದ್ಧದ ನಂತರ ಅಂದಿನ ಬ್ರಿಟಿಷ್‌ ಸಾಮ್ರಾಜ್ಯದ ದಕ್ಷಿಣ ಭಾರತದ ಆಯುಕ್ತ ಚಾಪ್ಲಿನ್‌ ಅಧಿಕೃತ ಒಪ್ಪಿಗೆ ಮೇರೆಗೆ ಬರೋಬ್ಬರಿ 3 ತಿಂಗಳ ಕಾಲ ಕೊಳ್ಳೆ ಹೊಡೆಯಲಾಯಿತು. ನಂತರ ತುಪಾಕಿ ಬಳಸಿ ಛಿದ್ರಗೊಳಿಸಲಾಯಿತು. ಈ ವೇಳೆ ಯುದ್ಧದಲ್ಲಿ ಸೆರೆಯಾದ ಚೆನ್ನಮ್ಮ ಯುದ್ಧಕ್ಕೆ ಬಳಿಸಿದ್ದ ಖಡ್ಗ ಮತ್ತು ಇತರ ಯುದ್ಧ ಸಲಕರಣೆಗಳನ್ನು 1838ರ ಸುಮಾರಿಗೆ ಬ್ರಿಟಿಷರು ಲಂಡನ್ನಿನ ಅರಮನೆಗೆ ರವಾನಿಸಿದ್ದು, ಇಂದಿಗೂ ಅವು ಲಂಡನ್‌ ನಗರದ ಪಾರಂಪರಿಕ ವಸ್ತು ಸಂಗ್ರಹಾಲಯದಲ್ಲಿವೆ. 2012ರಲ್ಲಿ ಕಿತ್ತೂರು ಉತ್ಸವ ನಡೆಯುವ ವೇಳೆ ಚೆನ್ನಮ್ಮಾಜಿಯ ಖಡ್ಗ ಮತ್ತು ಲಂಡನ್‌ ವಸ್ತುಸಂಗ್ರಹಾಲಯದಲ್ಲಿರುವ ಕಿತ್ತೂರು ಯುದ್ಧಕ್ಕೆ ಸಂಬಂಧಿಸಿದ ಎಲ್ಲಾ ಯುದ್ಧ ಸಲಕರಣೆಗಳನ್ನು ಮರಳಿ ರಾಜ್ಯಕ್ಕೆ ತರಲು ಹಿರಿಯ ಸಂಶೋಧಕ ಡಾ|ಎಂ.ಎಂ.ಕಲಬುರ್ಗಿ ಅವರ ನೇತೃತ್ವದಲ್ಲಿ ಸಮಿತಿ
ರಚಿಸುವುದಾಗಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು ಘೋಷಣೆ ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಡಾ|ಕಲಬುರ್ಗಿ ಅವರನ್ನು ಮಾತನಾಡಿಸಲೇ ಇಲ್ಲ. ನಂತರ 2013ರಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ, ಅಂದಿನ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರಿಗೆ ಪತ್ರ ಬರೆದು, ಚೆನ್ನಮ್ಮಾಜಿ ಯುದ್ಧಕ್ಕೆ ಬಳಸಿಕ ಖಡ್ಗ ಮತ್ತು ಇತರ ಯುದೊœàಪಕರಣಗಳನ್ನು ಮರಳಿ ರಾಜ್ಯಕ್ಕೆ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರಿದ್ದರು. ಆದರೆ ಈ ಪ್ರಯತ್ನವೂ ಫಲ ಕೊಡಲೇ ಇಲ್ಲ.

ವಿದೇಶಾಂಗ ಸಚಿವರ ಪ್ರಯತ್ನ ಮುಖ್ಯ:
ಚೆನ್ನಮ್ಮಾಜಿಯ ಖಡ್ಗ ತರಲು ಕೋಹಿನೂರ್‌ ವಜ್ರ ಮರಳಿ ತರಲು ಮಾಡಿದಷ್ಟು ದೊಡ್ಡ ಪ್ರಯತ್ನವನ್ನೇನು ಭಾರತ ಸರ್ಕಾರ ಮಾಡಬೇಕಿಲ್ಲ. ವಿಜಯ ಮಲ್ಯ, ಟಿಪ್ಪು ಸುಲ್ತಾನ್‌ ಖಡ್ಗವನ್ನು 2003 ರಲ್ಲಿ 1.57 ಕೋಟಿ ರೂ. ಕೊಟ್ಟು ಮರಳಿ ರಾಜ್ಯಕ್ಕೆ ತಂದಿದ್ದಾರೆ. ಇದೀಗ ಚೆನ್ನಮ್ಮಳ ಖಡ್ಗವನ್ನು ಖಾಸಗಿ ವ್ಯಕ್ತಿಗಳು ಕೊಂಡುಕೊಳ್ಳುವ ಮುಂಚೆಯೇ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಖಡ್ಗ ಮತ್ತು ಇತರ ಯುದ್ಧದ ವಸ್ತುಗಳನ್ನು ಮರಳಿ ತಾಯ್ನಾಡಿಗೆ ತರಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.

ಹೀಗಿದೆ ರಾಣಿ ಚೆನ್ನಮ್ಮನ ಖಡ್ಗ
ಚೆನ್ನಮ್ಮಾಜಿಯ ಖಡ್ಗದ ಬಗ್ಗೆ ಹಿರಿಯ ಸಂಶೋಧಕ ಡಾ|ಸದಾಶಿವ ಒಡೆಯರ್‌ ತಮ್ಮ ಸಂಶೋಧನಾ ಬರಹಗಳಲ್ಲಿ ವಿವರಿಸಿದ್ದಾರೆ. ಚೆನ್ನಮ್ಮ ಖಾಸಗಿ ದರಬಾರು, ರಾಣಿ ಪೋಷಾಕುಗಳಲ್ಲಿ ರತ್ನ ಖಚಿತ ಖಡ್ಗವನ್ನು ಬಳಸುತ್ತಿದ್ದರು. ಆದರೆ ಬ್ರಿಟಿಷರ ವಿರುದ್ಧದ ಯುದ್ಧಕ್ಕೆ ಮಾತ್ರ, ಕಿತ್ತೂರು ಸಂಸ್ಥಾನದಲ್ಲಿ ತಲೆತಲಾಂತರದಿಂದ ಬಳಕೆ ಮಾಡಿಕೊಂಡು ಬಂದಿದ್ದ ಬಿಗಿಯಾದ ಹಿಡಿಕೆ, ಹಿಡಿಕೆಯ ಮೇಲೆ ಚಿತ್ತಾರದ ಮಾದರಿಯ ಕುಸುರಿ ಕೆತ್ತನೆ, ಎರಡು ಅಲಗುಗಳು  ಮಿಂಚುವಂತೆ ಹರಿತವಾಗಿದ್ದ ದೈತ್ಯ ಖಡ್ಗವನ್ನೇ ಬಳಸಿದ್ದರು. ಹೀಗಾಗಿ ಚೆನ್ನಮ್ಮ ಕುದುರೆ ಮೇಲೆ ಏರಿ ಬ್ರಿಟಿಷರ ವಿರುದ್ಧ ಎತ್ತ ಖಡ್ಗ ಬೀಸಿದರೂ ಅವರ ಹೆಣಗಳು ರಾಶಿ ರಾಶಿಯಾಗಿ ಬೀಳುತ್ತಿದ್ದವು ಎಂದು ಡಾ|ಒಡೆಯರ್‌ ಖಡ್ಗದ ವಿವರಣೆ ಮಾಡಿದ್ದಾರೆ.

Advertisement

ರಾಣಿ ಚೆನ್ನಮ್ಮ ಯುದ್ಧಕ್ಕೆ ಬಳಸಿದ ಖಡ್ಗ ಕನ್ನಡಿಗರ ಭಾವನಾತ್ಮಕ ವಿಚಾರ. ಇಂದಿನ ಯುವಕರಿಗೆ ವಿಶೇಷವಾಗಿ ಯುವತಿಯರಿಗೆ ಚೆನ್ನಮ್ಮಾಜಿಯ ಶೌರ್ಯ, ಸಾಹಸಗಳ ಪರಿಚಯವಾಗಬೇಕಿದೆ. ಚೆನ್ನಮ್ಮನ ಖಡ್ಗ ಮರಳಿ ತಾಯ್ನಾಡಿಗೆ ಬಂದರೆ ಅದೊಂದು ಸೌಭಾಗ್ಯ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಡಾ|ಎಂ.ಚಿದಾನಂದಮೂರ್ತಿ, ಹಿರಿಯ ಸಂಶೋಧಕ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next