Advertisement
ಹೀಗಾಗಿ ಫೇಬ್ರವರಿ ತಿಂಗಳಲ್ಲಿ ನಮ್ಮ ವಿಭಾಗದ ವತಿಯಿಂದ 12 ದಿನಗಳ ಸುಧೀರ್ಘ ಪ್ರವಾಸ ಕೈಗೊಂಡು ಉತ್ತರಾಖಂಡ, ದಿಲ್ಲಿ ಮತ್ತು ಆಗ್ರಾಕ್ಕೆ ಹೋಗಿಬಂದೆವು. ಇಲ್ಲಿ ನಾನು ಉತ್ತರಖಂಡ ರಾಜ್ಯದ ಮಸ್ಸೂರಿಯಲ್ಲಾದ ಪ್ರವಾಸದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.
ಮೊದಲ ದಿನ ಮೊದಲು ಭೇಟಿ ಕೊಟ್ಟಿದ್ದೇ ಮಸ್ಸೂರಿಯಲ್ಲಿರುವ ಕೆಂಪ್ಟಿ ಫಾಲ್ಸ್‌ಗೆ ಮಸ್ಸೂರಿಯಲ್ಲಿ ಚಳಿ ಸ್ವಲ್ಪ ಜಾಸ್ತಿನೇ ಇತ್ತು. ರಸ್ತೆ ಪಯಣವಂತೂ ಮೈನವಿರೇಳಿಸುವಂತ್ತದ್ದು. ಇಕ್ಕಟ್ಟು ರಸ್ತೆಯಲ್ಲಿ ತಿರುವುಮುರವಾಗಿ ಹೋಗಬೇಕಿತ್ತು. ಒಂದು ಬದಿ ತುಂಬಾ ಆಳ. ಇನ್ನೊಂದು ಬದಿ ಎತ್ತರವಾದ ಬೆಟ್ಟಗಳು. ಘಾಟ್ ಅಂತಲೇ ಹೇಳಬಹುದು. ಮಾರ್ಗ ಮಧ್ಯೆ ಮಸ್ಸೂರಿಯ ಕ್ವೀನ್ ಆಫ್ ಹಿಲ್ಸ್ ಎಂದೇ ಕರೆಯುವ ಸ್ಥಳದಲ್ಲಿ ನಿಲ್ಲಸಲಾಯಿತು. ಗಗನ ಚುಂಬಿ ಬೆಟ್ಟಗಳು, ಪ್ರಕೃತಿ ವೈಭವವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಹೊರಟೆವು.
Related Articles
ಅಲ್ಲಿಂದ ಕೆಂಪ್ಟಿ ಫಾಲ್ಸ್‌ಗೆ ತಲುಪಿದೆವು. ಇಲ್ಲಿ ಎತ್ತರದಿಂದ ಹರಿಯುವ ನೀರನ್ನು ಬೀಳುವ ಸ್ಥಳದಲ್ಲೇ ಸ್ವಲ್ಪ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ನೀರಂತೂ ರಕ್ತ ಹೆಪ್ಪುಗಟ್ಟುವಷ್ಟು ತಂಪಾಗಿತ್ತು. ಸ್ನಾನಕ್ಕೆ ಅವಕಾಶವಿದ್ದರೂ, ಇನ್ನಷ್ಟು ಪ್ರವಾಸಿ ತಾಣಗಳಿಗೆ ಹೋಗಬೇಕಿದ್ದ ಕಾರಣ ಆರೋಗ್ಯ ಕೆಡಬಹುದೆಂಬ ದೃಷ್ಟಿಯಿಂದ ಸ್ನಾನ ಮಾಡದೆ ಜಲಧಾರೆಯನ್ನಷ್ಟೇ ಕಣ್ತುಂಬಿಕೊಂಡೆವು. ಕಣ್ಣು ಹಾಯಿಸಿದಷ್ಟೂ ಕಾಣುವ ಬೆಟ್ಟಗಳನ್ನು ಕಂಡು ವಾವ್ ಅಂದೆವು. ರೋಪ್ ವೇ, ವಿವಿಧ ಬಗೆಯ ವಸ್ತುಗಳು ಮಾರಾಟಕಿದ್ದವು. ಒಟ್ಟಿನಲ್ಲಿ ಕೆಂಪ್ಟಿ ಫಾಲ್ಸ್ ಸುಮಧುರ ಅನುಭವವನ್ನು ಕೊಟ್ಟಿತ್ತು. ಮೋಡ ಮುಸುಕಿದ ವಾತಾವರಣ ಇದ್ದಿದ್ದರಿಂದ ಊಟದ ಹೊತ್ತು ಬಂದದ್ದೇ ಗೊತ್ತಾಗಲಿಲ್ಲ. ಅಲ್ಲಿಯೇ ಭೋಜನ ಮುಗಿಸಿ ಮುಂದುವರೆದೆವು.
Advertisement
ಮಧ್ಯಾಹ್ನದ ಭೋಜನದ ಅನಂತರ ಭೇಟಿ ಕೊಟ್ಟದ್ದು ಹತ್ತಿರದಲ್ಲೇ ಇದ್ದ ಪ್ರಕಾಶೇಶ್ವರ ದೇವಾಲಯಕ್ಕೆ. ಇಲ್ಲಿನ ದೇಗುಲದ ಸಂಕೀರ್ಣ ತುಂಬಾ ಚಿಕ್ಕದಾಗಿದ್ದು, ನಿರ್ಮಾಣ ಬಲು ವಿಶೇಷವಾಗಿರುತ್ತದೆ. ದೇವರ ದರ್ಶನ ಪಡೆದು, ಇಲ್ಲಿನ ವಿಶೇಷ ಪ್ರಸಾದವನ್ನು ಸ್ವೀಕರಿಸಿ, ದೇಗುಲದ ಪಕ್ಕಕ್ಕೆ ಕಣ್ಣಾಯಿಸಿದಾಗ ಮಾರಾಟ ಮಳಿಗೆ ಕಣ್ಣಿಗೆ ಬಿತ್ತು. ಅಲ್ಲಿ ಒರಿಜಿನಲ್ ರುದ್ರಾಕ್ಷಿ ಮಾಲೆ, ಸ್ಫಟಿಕಗಳೆಲ್ಲ ಇತ್ತು. ಅವುಗಳ ಮೊತ್ತವನ್ನು ನೋಡಿಯೇ ಅಲ್ಲಿಂದ ವಾಪಸ್ ಬಂದು ನಮ್ಮ ಬಸ್ಸಿನಲ್ಲಿ ಕುಳಿತು ಕೊಂಡೆವು.
ದೇಗುಲದಿಂದ ಮುಂದೆ ಹೊರಟಿದ್ದು ಮಸ್ಸೂರಿ ಸರೋವರಕ್ಕೆ. ಸಣ್ಣದೊಂದು ಕಣಿವೆಯಲ್ಲಿ ಬರುವ ನೀರನ್ನು ಕೆರೆಯ ಹಾಗೆ ಮಾಡಿ ಅದರಲ್ಲಿ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಬಲು ವಿಶೇಷವಾಗಿದೆ. ಇದು ಮುಖ್ಯ ರಸ್ತೆ ಬದಿಯಲ್ಲೇ ಇರುವುದರಿಂದ ಮಸ್ಸೂರಿಗೆ ಆಗಮಿಸುವ ಪ್ರವಾಸಿಗರೆಲ್ಲ ಇಲ್ಲಿಗೆ ಭೇಟಿ ನೀಡುತ್ತಾರೆ. ಹಣ ಕೊಟ್ಟು ಟಿಕೆಟ್ ಪಡೆದರೆ ಸರೋವರದಲ್ಲಿ ಪೆಡಲಿಂಗ್ ಮಾಡಬಹುದು. ಇಲ್ಲಿ ಝಿಪ್ ಲೈನ್, ಹಾರರ್ ಹೌಸ್ ಕೂಡ ಇದೆ. ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಲು ಮಸ್ಸೂರಿ ಎಲ್ಲ ರೀತಿಯ ಮನೋರಂಜನ ವ್ಯವಸ್ಥೆ ಹೊಂದಿದೆ. ಅದಾಗಲೇ ಸೂರ್ಯ ಮುಳುಗುವ ಹೊತ್ತಾಗಿತ್ತು ಇಲ್ಲಿಂದ ಮುಂದೆ ನಾವು ತಂಗುವ ಹೊಟೇಲ್‌ಗೆ ಹೋದೆವು. ಮಸ್ಸೂರಿಯಲ್ಲಾದ ಪ್ರವಾಸದ ಅನುಭವ, ಅಲ್ಲಿನ ಚಳಿಯ ವಾತಾವರಣವಂತೂ ಎಂದಿಗೂ ಮರೆಯಲಾರೆವು. ಒಟ್ಟಿನಲ್ಲಿ ಮಸ್ಸೂರಿಯ ಪ್ರವಾಸದ ಅನುಭವ ಮನದಲ್ಲಿ ಅಚ್ಚಳಿಯದಂತೆ ಉಳಿಯಲಿದೆ.
ರೋಹಿತ್ ದೋಳ್ಪಾಡಿ, ಮಂಗಳೂರು ವಿ.ವಿ.