ಬೆಂಗಳೂರು: ಕನ್ನಡ ಸಿನಿಮಾಗಳ ಗುಣಮಟ್ಟ ಕುಗ್ಗುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿ ಕ್ರಿಯಾಶೀಲವಾಗಬೇಕಿದೆ. ಆ ಮೂಲಕ ಶಂಕರ್ ನಾಗ್ ಅವರಂಥ ಪ್ರತಿಭೆಗಳು ಹೊರಹೊಮ್ಮುವ ಅಗತ್ಯವಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ರಂಗಪಯಣ ಸಂಸ್ಥೆ ಹಮ್ಮಿಕೊಂಡಿದ್ದ ಶಂಕರ್‌ನಾಗ್ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಚಲನಚಿತ್ರ ರಂಗ ವರ್ಷಕ್ಕೆ 200ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸುತ್ತಿದ್ದರೂ ಗುಣಮಟ್ಟದ ವಿಚಾರದಲ್ಲಿ ಕುಗ್ಗುತ್ತಿದೆ. ಹೀಗಾಗಿ ರಂಗಭೂಮಿಯನ್ನು ನಾವೆಲ್ಲರೂ ಸೇರಿ
ಕ್ರಿಯಾಶೀಲ ಮಾಡಬೇಕಿದೆ ಎಂದು ಹೇಳಿದರು.
ನಗರದಲ್ಲಿ ಇಂದು 400ಕ್ಕೂ ಹೆಚ್ಚು ಸ್ಟುಡಿಯೋಗಳಿವೆ. ಇದಕ್ಕೆ ಅಡಿಪಾಯ ಹಾಕಿದವರು ಶಂಕರನಾಗ್. ಆದರೆ ಅವರು ಮೊದಮೊದಲು ಬೆಂಗಳೂರಿನಲ್ಲಿ ಸಂಕೇತ್ ಸ್ಟುಡಿಯೋ ಆರಂಭಿಸಿದಾಗ ಅನೇಕರು ಟೀಕಿಸಿದ್ದರು. ಇನ್ನು ವ್ಯಕ್ತಿತ್ವದ ವಿಚಾರದಲ್ಲಿ ಶಂಕರ್‌ನಾಗ್ ಅವರು ಡಾ.ರಾಜ್‌ಕುಮಾರ್ ಅವರಿಗೆ ಸಮನಾಗಿದ್ದರು. ತಮ್ಮ ಬೆಳೆವಣಿಗೆ ಜತೆ, ನಾಡು-ನುಡಿ ಬೆಳವಣಿಗೆಗೆ ಸದಾ ಹಂಬಲಿಸುತ್ತಿದ್ದರು ಎಂದು ಶಂಕರ್‌ನಾಗ್ ಅವರ ಜತೆಗಿದ್ದ ದಿನಗಳನ್ನು ಹಂಸಲೇಖ ಸ್ಮರಿಸಿದರು.
ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ಶಂಕರ್‌ನಾಗ್ ಎಷ್ಟೇ ಎತ್ತರಕ್ಕೆ ಬೆಳೆದರೂ ಅವರ ವ್ಯಕ್ತಿತ್ವದಲ್ಲಿ ಒಂದಿಷ್ಟು ಬದಲಾಗಲಿಲ್ಲ. ಎಂದಿಗೂ ತಮ್ಮೊಂದಿಗೆ ಕೆಲಸ ಮಾಡುವವರನ್ನು ಅವರು ಮರೆಯುತ್ತಿರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಕೇವಲ ರಂಗಭೂಮಿ ಅಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳ ಬೆಳವಣಿಗೆ ಬಗೆಗೂ ತಮ್ಮದೇ ಆದ ಕನಸುಗಳನ್ನು ಹೊಂದಿದ್ದರು ಎಂದರು. ಪತ್ರಕರ್ತೆ ಡಾ. ಜಯಾ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗ ಪ್ರತಿಭೆಗಳಿಗೆ ಶಂಕರ್‌ನಾಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು.