ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ರವಿವಾರ ಶ್ರೀ ಶಂಕರ ಜಯಂತಿಯನ್ನು ಆಚರಿಸಲಾಯಿತು. ಶಂಕರ ಜಯಂತಿ ಅಂಗವಾಗಿ ಶಂಕರಾಚಾರ್ಯ ದೇಗುಲದಲ್ಲಿ ಉಭಯ ಜಗದ್ಗುರುಗಳು ವಿಶೇಷ ಪೂಜೆ ನೆರವೇರಿಸಿದರು.
ಪಂಚಾಮೃತಾಭಿಷೇಕ, ಶತರುದ್ರಾಭಿಷೇಕ, ಶ್ರೀ ಸೂಕ್ತ, ಪುರುಷ ಸೂಕ್ತ ಮಂತ್ರದೊಂದಿಗೆ ಕನಕಾಭಿಷೇಕ ನಡೆಯಿತು. ಮಹಾ ಮಂಗಳಾರತಿ ನಡೆದ ಬಳಿಕ ಉಭಯ ಜಗದ್ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳು ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿದರು. ಧಾರ್ಮಿಕ ವಿಧಿ- ವಿಧಾನವನ್ನು ಶ್ರೀಮಠದ ಪುರೋಹಿತರು ನೆರವೇರಿಸಿದರು.
ಶ್ರೀಮಠದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಹಾಗೂ ಅಕ್ಷರಾಭ್ಯಾಸ ನಡೆಯಿತು. ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ವಿಧುಶೇಖರ ಭಾರತೀ ಸ್ವಾಮೀಜಿ ಗಳು ಸಂದೇಶ ನೀಡಿ, ಅವಿಚ್ಛಿನ್ನ ಗುರು ಪರಂಪರೆ ಹೊಂದಿರುವ ಶಾರದಾ ಪೀಠದಲ್ಲಿ ಶಂಕರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಸರಕಾರವು ಶಂಕರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ ಎಂದರು.
ಸೋಮವಾರ ಶಂಕರ ಜಯಂತಿ ಅಂಗವಾಗಿ ಶಂಕರ ರಥೋತ್ಸವ ನಡೆಯಲಿದ್ದು, ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿಗಳು ರಥೋತ್ಸವ ದಲ್ಲಿ ಪಾಲ್ಗೊಳ್ಳಲಿದ್ದಾರೆ.