Advertisement

ಆಧ್ಯಾತ್ಮದ ಸವಿಯೂಟವೇ ಜಾತ್ರೆ ಉದ್ದೇಶ

11:04 AM Apr 08, 2019 | Team Udayavani |
ಉಪ್ಪಿನಬೆಟಗೇರಿ: ಜೀವನದಲ್ಲಿ ಕೇವಲ ಸುಖ ಬಯಸದೇ ದುಃಖದ ಸನ್ನಿವೇಶಕ್ಕೆ ಪಾತ್ರರಾಗಬೇಕು. ಸಮಾಜದಲ್ಲಿ ದೊಡ್ಡವರನ್ನು ನೋಡಿ ಸಮಾಧಾನ ಪಡದೇ, ಬಡವರನ್ನು ನೋಡಿ ಸಮಾಧಾನ ಪಡಬೇಕು ಎಂದು ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮೂರುಸಾವಿರ ವಿರಕ್ತಮಠದಲ್ಲಿ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಪ್ರಾರಂಭವಾದ “ಲವಣಗಿರಿ ಉತ್ಸವ’ದಲ್ಲಿ ಅವರು ಆಧ್ಯಾತ್ಮಿಕ ಪ್ರವಚನ ನೀಡಿದರು. ಸುಖ, ಶಾಂತಿ, ನೆಮ್ಮದಿಯಿಂದ ಬಾಳಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯಾವಾಗಲೂ ಗುರುವಿನ ಆಶೀರ್ವಾದ ಒಂದಿದ್ದರೆ ಮಾತ್ರ ತತ್ವದರ್ಶನವಾಗುತ್ತದೆ ಎಂದು ಹೇಳಿದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ನಿಮಿತ್ತ ಉಪ್ಪಿನಬೆಟಗೇರಿಯಲ್ಲಿ ಪ್ರತಿವರ್ಷ ಶ್ರೀ ಅಲ್ಲಮ ಪ್ರಭುಗಳ ಜಯಂತಿ ಆಚರಿಸುವದು ಸಂತಸದ ಸಂಗತಿ. ನಮ್ಮ ಭಾರತೀಯ ಸಂಸ್ಕೃತಿ ಗುರು-ಹಿರಿಯರನ್ನು ಗೌರವಿಸಿ ಆದರಿಸುವ ಉತ್ಕೃಷ್ಟ ಅಂಶಗಳನ್ನು ಹೊಂದಿದೆ. ಎಲ್ಲರೂ ಪುರಾಣ-ಪ್ರವಚನವನ್ನು ಕೇಳಬೇಕು. ಪ್ರವಚನ ಮುಖಾಂತರ ಜನರ ತೊಂದರೆಗಳು ನಿರ್ಮೂಲನೆಯಾಗುತ್ತವೆ. ಭಕ್ತರ ಪುಣ್ಯದ ಫಲದಿಂದ ನಾಡಿಗೆ ಮಳೆ ಆದರೆ ಬೆಳೆ ಬರುತ್ತದೆ. ಇದರಿಂದ ರೈತ ಬಾಂಧವರು ಸುಖ-ಸಮೃದ್ಧಿಯಿಂದ ಬಾಳಲಿ ಎಂದು ಆಶೀರ್ವದಿಸಿದರು.
ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತ್ರಾ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಧ್ಯಾತ್ಮದ ಸವಿಯನ್ನು ಉಣಬಡಿಸಿ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದೇ ಜಾತ್ರೆಗಳ ಸದುದ್ದೇಶ. ಆಸೆ ಇರಬೇಕು, ಅತೀ ಆಸೆ ಇರಬಾರದು. ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದರ ಕುರಿತು ವಿಸ್ತಾರವಾಗಿ ಶ್ರೀಗಳು ತಮ್ಮ ಮೊದಲ ದಿನದ ಪ್ರವಚನದಲ್ಲಿ ತಿಳಿಸಿದ್ದಾರೆ. ಸ್ವಾಮಿಗಳಾದ ನಾವು ಪಾಠ, ಪ್ರವಚನ, ಉತ್ಸವ ಮತ್ತು ಜಾತ್ರೆಗಳನ್ನು ಸಮಾಜದ ಅಭ್ಯುದಯಕ್ಕಾಗಿ ಮಾಡುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಶ್ರೀಗಳು ಭಕ್ತರಲ್ಲಿ ಕೋರಿದರು.
ಪ್ರಸಾದ ಸೇವೆ ಮಾಡಿದ ಯಲ್ಲಪ್ಪ ಲಗಮಣ್ಣವರ ಅವರನ್ನು ಶ್ರೀಗಳು ಸನ್ಮಾನಿಸಿದರು. ಜಿಪಂ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಎಪಿಎಂಸಿ ಸದಸ್ಯ ಚನ್ನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ವೀರಣ್ಣಾ ಪರಾಂಡೆ, ಮಂಜುನಾಥ ಸಂಕಣ್ಣವರ, ರವಿ ಯಲಿಗಾರ, ಬಸವರಾಜ ಮಸೂತಿ, ಧರೇಪ್ಪ ಬೊಬ್ಬಿ, ಕಲ್ಲಪ್ಪ ಹಟ್ಟಿ, ಕೃಷ್ಣಾ ಬುದ್ನಿ ಉಪಸ್ಥಿತರಿದ್ದರು. ಅನಂತಯ್ಯ ಶಹಪುರಮಠ ಹಾಗೂ ಇಂಗಳಗಿ ಗ್ರಾಮದ ಮನೋಜ ಅವರಿಂದ ಸಂಗೀತ ಸೇವೆ ಜರುಗಿತು. ಫಕ್ಕೀರಪ್ಪ ಮಡಿವಾಳರ ನಿರೂಪಿಸಿದರು. ಸಂಜಯ್ಯ ಕೊಡಿ ಸ್ವಾಗತಿಸಿ, ವಂದಿಸಿದರು.
ಋಷಿ-ಮುನಿಗಳಿಂದ ನಮ್ಮ ದೇಶದ ಶ್ರೇಷ್ಠ ಪರಂಪರೆ ಇನ್ನೂ ಅಚ್ಚಳಿಯದೇ ಉಳಿದಿದೆ. ಗುರುವಿನ ಸಾನ್ನಿಧ್ಯದಲ್ಲಿ ಕುಳಿತು ಗುರುವಿನ ಉಪದೇಶದ ಆಧ್ಯಾತ್ಮದ ಸಿಂಚನವನ್ನು ಪಡೆದಾಗ ನಾವು ಜೀವನದಲ್ಲಿ ಆರಾಮವಾಗಿ ಬದುಕಲು ಸಾಧ್ಯ.
ಶ್ರೀ ಮುರುಘೇಂದ್ರ ಸ್ವಾಮೀಜಿ ಮುನವಳ್ಳಿ ಸೋಮಶೇಖರ ಮಠ
Advertisement

Udayavani is now on Telegram. Click here to join our channel and stay updated with the latest news.

Next