Advertisement

ಪೌರತ್ವ ನೀಡುವುದೇ ಕಾಯ್ದೆ ಉದ್ದೇಶ

12:42 PM Mar 06, 2020 | Suhan S |

ಇಳಕಲ್ಲ: ಪೌರತ್ವ ನೀಡುವುದೇ ಪೌರತ್ವ ತಿದ್ದುಪಡಿ ಕಾಯ್ದೆ ಉದ್ದೇಶವಾಗಿದೆ ಹೊರತು ಕಿತ್ತುಕೊಳ್ಳುವುದಕ್ಕಲ್ಲ. ಕಾಂಗ್ರೆಸ್‌ನ ಒಡಕು ಮಾತುಗಳಿಗೆ ಕಿವಿಗೊಡದೇ ಕಾಯ್ದೆ ಬೆಂಬಲಿಸಬೇಕು ಎಂದು ಹಿದೂ ಜಾಗರಣ ವೇದಿಕೆಯ ಶ್ರೀಶೈಲಗೌಡ ಪಾಟೀಲ ಹೇಳಿದರು.

Advertisement

ಇಲ್ಲಿಯ ಎಸ್‌.ಆರ್‌. ಕಂಠಿ ವೃತ್ತದಲ್ಲಿ ಇಳಕಲ್ಲ ಹಾಗೂ ಹುನಗುಂದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಮನಮೋಹನಸಿಂಗ್‌ ಪ್ರಧಾನಿಗಳಾಗಿದ್ದಾಗ ಸೃಷ್ಟಿಗೊಂಡಿದ್ದೇ ಹೊರತು ಬಿಜೆಪಿಯವರಿಂದಲ್ಲ. ಅಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಎದೆಗಾರಿಕೆ ಪ್ರಧಾನಿಯವರಿಗೆ ಇಲ್ಲದ್ದರಿಂದ ಅದು ಜಾರಿಗೊಳ್ಳಲಿಲ್ಲ ಎಂದು ಹೇಳಿದರು.

ಕಾನೂನು ಸಂಚಾಲಕ ವಿವೇಕ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಆಡಳಿತ, ತೆಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರಗಳನ್ನು ಇಡೀ ಜಗತ್ತೇ ಭಾರತದತ್ತ ನೋಡುವಂತಾಗಿದೆ. ಕೆಲವು ಮುಸ್ಲಿಂ ರಾಷ್ಟಗಳು ಸಹಿತ ಇವರ ಆಡಳಿತ ಮೆಚ್ಚಿಕೊಂಡಿದ್ದಾರೆ. ಇದರಿಂದ ನಮ್ಮ ದೇಶದ ಮುಸ್ಲಿಂರು ನಮ್ಮನ್ನು ಕೈಬಿಟ್ಟು ಹೋಗುವರೋ ಎಂಬ ಭಯ ಕಾಂಗ್ರೆಸ್‌ನವರಿಗೆ ಶುರುವಾಗಿದೆ. ಮುಸ್ಲಿಂರಲ್ಲಿ ಭಯದ ವಾತಾವರಣ ಸೃಷ್ಟಿಸಿ ದೇಶ ಒಡೆಯುವಂತ ಕಾರ್ಯ ಮಾಡುತ್ತಿದ್ದಾರೆ. ಮುಸ್ಲಿಂರು ಕಾಂಗ್ರೆಸ್‌ನ ಬಣ್ಣದ ಮಾತಿಗೆ ಮರುಳಾಗಬೇಡಿ. ದೇಶದ ಭದ್ರತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಎಂದು ವಿನಂತಿಸಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪೌರತ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಧರ್ಮದ ಆಧಾರದ ಮೇಲೆ ಅಂದು ದೇಶವನ್ನು ವಿಭಜಿಸದಿದ್ದರೇ ಈ ಕಾಯ್ದೆಯ ಅವಶ್ಯಕತೆಯೇ ಇರಲಿಲ್ಲ ಎಂದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಏಕವಚನದಲ್ಲಿ ನನ್ನ ಬಗ್ಗೆ ಮಾತನಾಡಿರುವುದನ್ನು ಖಂಡಿಸಿ, ಅವರ ನಾಲಿಗೆಯಿಂದಲೇ ಅವರ ಸಂಸ್ಕೃತಿ ಸಂಸ್ಕಾರ ತಿಳಿಯುತ್ತದೆ ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಗ್ರಾಮೀಣ ಬಿಜೆಪಿ ಘಟಕ ಅಧ್ಯಕ್ಷ ಮಹಾಂತಗೌಡ ಪಾಟೀಲ, ಜಿ.ಪಿ. ಪಾಟೀಲ, ಲಕ್ಷ್ಮಣ ಗುರಂ, ಸಿದ್ದಣ್ಣ ಆಮದಿಹಾಳ ಉಪಸ್ಥಿತರಿದ್ದರು. ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ ಸ್ವಾಗತಿಸಿದರು. ಶ್ಯಾಮಸುಂದರ ಕರವಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next