ಕೊಳ್ಳೇಗಾಲ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೊಸ ಆಯಾಮದಲ್ಲಿ ಶಿಕ್ಷಣ ಒದಗಿಸುವ ಉದ್ದೇಶದಿಂದ ತಾಲೂಕಿನ ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆಯಲಾಗಿದೆ. ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು ಶ್ರಮಿಸಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್.ಮರಿಸ್ವಾಮಿ ಶನಿವಾರ ಮನವಿ ಮಾಡಿದರು. ತಾಲೂಕಿನ ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ಎರಡು ಕೋಟಿ ಅಂದಾಜಿನಲ್ಲಿ ನೂತನ ಕಟ್ಟಡ ಶಂಕುಸ್ಥಾಪನೆ ಮತ್ತು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಗಟ್ಟಿ ಬದುಕು ಸಾಧ್ಯ: ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ ತಾನು ಓದಿದ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. 1954ರಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಕುಳಿತುಕೊಳ್ಳಲು ಮರದ ಹಲಗೆ ನೀಡಲಾಗುತ್ತಿತ್ತು. ಮತ್ತು ಆಗ ಸ್ಲೇಟ್ ಮತ್ತು ಬಳಪ ಮಾತ್ರ ಇತ್ತು. ಈ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡಿದ ಪ್ರೌಢ ವಿದ್ಯಾಭ್ಯಾಸವನ್ನು ಎಂಜಿಎಸ್‌ವಿ ಪ್ರೌಢಶಾಲೆಯಲ್ಲಿ, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದು ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡಿದ್ದೆ ಎಂದು ಹೇಳಿದರು.
ಭಾಷಾ ಗೊಂದಲದಲ್ಲಿ ಸಿಲುಕುವುದು ಬೇಡ: ವಿದ್ಯಾರ್ಥಿಗಳಿಗೆ ಮೂಲಶಿಕ್ಷಣವನ್ನು ತಾಂತ್ರಿಕವಾಗಿ ಒದಗಿಸಿ, ತಳಮಟ್ಟದಿಂದಲೇ ಉನ್ನತೀಕರಿಸಬೇಕು. ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಈ ರೀತಿಯ ಪ್ರೋತ್ಸಾಹ ಮಕ್ಕಳಿಗೆ ಸಿಗದೆ ಭಾಷೆಯ ಗೊಂದಲದಲ್ಲಿ ಸಿಲುಕಿದ್ದಾರೆ. ಇಂತಹ ಗೊಂದಲಗಳು ಉಂಟಾಗಬಾರದು.ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಮುಖ್ಯವಾಹಿನಿಗೆ ತರುವ ಪ್ರಯತ್ನ ಗ್ರಾಮಸ್ಥರ ಮೇಲಿದೆ.
ಶಾಲೆ ಅಭಿವೃದ್ಧಿಗೆ ಸರ್ಕಾರವನ್ನೇ ಅವಲಂಬಿಸದೆ, ಗ್ರಾಮಸ್ಥರಿಂದಲೇ ಆಗಬೇಕು. ಅದರೊಂದ ಹೊಸ ಆಯಾಮ ದೊರೆಯುತ್ತದೆ ಎಂದು ಹೇಳಿದರು. ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನದ ಶಿಕ್ಷಣದ ಹಕ್ಕಿನಿಂದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಅವಶ್ಯವಿದ್ದು, ಗ್ರಾಮೀಣ ಪ್ರದೇಶ ಮಕ್ಕಳು ಮುಂದೆ ಇದ್ದು, ಪೋಷಕರನ್ನು ತಿರಸ್ಕಾರ ಮಾಡದೆ ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಹೊಂದಿ ಗ್ರಾಮಕ್ಕೆ ಕೀರ್ತಿ ತರಬೇಕೆಂದು ಹೇಳಿದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಮಠಮಾನ್ಯರು ಶಾಲೆಗಳನ್ನು ದತ್ತು ಪಡೆಯುತ್ತಿದ್ದರು. ಈಗ ಗ್ರಾಮದ ಮುಖಂಡರ ನೇತೃತ್ವದಲ್ಲಿ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್.ಮರಿಸ್ವಾಮಿರವರ ಸಮ್ಮುಖದಲ್ಲಿ ದತ್ತುಪಡೆಯುತ್ತಿರುವುದು ಮೆಚ್ಚುವಂತೆ ಆಗಿದ್ದು, ಶಾಲೆಯನ್ನು ದತ್ತುಪಡೆಯಲು ಮತ್ತಷ್ಟು ಮುಖಂಡರು ಮುಂದೆ ಬರಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರುಗದ ಮಣಿ, ತಾಪಂ ಅಧ್ಯಕ್ಷ ರಾಜೇಂದ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಸತ್ತೇಗಾಲ ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷ ರಾಜು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಬಿಇಒ ಚಂದ್ರಪಾಟೀಲ್, ಬಿಇಒ ನಾರಾಯಣ್, ಡಿವೈಎಸ್ಪಿ ನವೀನ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಪಿಡಿಒ ನಮಿತ ತೇಜೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಮುಖ್ಯ ಶಿಕ್ಷಕ ಮಹದೇವ ಹಾಗೂ ಶಿಕ್ಷಕರು ಇದ್ದರು.