Advertisement

ರಫೇಲ್‌ ಖರೀದಿ ತನಿಖೆಗೆ ಕೈ ಪಟ್ಟು

04:09 PM Sep 16, 2018 | |

ದಾವಣಗೆರೆ: ರಫೇಲ್‌ ಯದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಆ ಬಗ್ಗೆ ತನಿಖೆಗೆ ಜೆ.ಪಿ.ಸಿ. ಸಮಿತಿಗೆ ವಹಿಸಲು ಆಗ್ರಹಿಸಿ, ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಅಂಬೇಡ್ಕರ್‌ ವೃತ್ತದಲ್ಲಿ ಜಮಾವಣೆಗೊಂಡು ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಅಲ್ಲಿ ಮಾನವ ಸರಪಳಿ ರಚಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಇದೇ ವೇಳೆ ಮಾತನಾಡಿದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ಶಾಮನೂರು ಶಿವಶಂಕರಪ್ಪ, ದೇಶದಲ್ಲಿ ದಿನೇ ದಿನೇ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲದ ಬೆಲೆ ಹೆಚ್ಚಳವಾಗುತ್ತಿದ್ದರೂ ಕೇಂದ್ರ ಸರ್ಕಾರ ದರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ವ್ಯಾಪಕವಾಗಿ ಕುಸಿಯುತ್ತಿದೆ. ಆ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಸಿಬಿಐನವರು, ವಿಜಯ್‌ ಮಲ್ಯ ಸೇರಿದಂತೆ ಅನೇಕ ಉದ್ಯಮಿಗಳು ಸಾವಿರಾರು ಕೋಟಿ ರೂ. ಸಾಲ ಮಾಡಿ ದೇಶದಿಂದ ಪರಾರಿಯಾಗಲು ನೆರವಾಗಿದ್ದು, ಈ ಬಗ್ಗೆ ಜನತೆಗೆ ಅವರು ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದರು.

ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರ ಸರ್ಕಾರದ ಬಗ್ಗೆ ದೇಶದ ಬಹುತೇಕ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಒಂದು ಸೀಟು ಕೂಡ ಪಡೆಯುವುದಿಲ್ಲ. ಅವರಿಗೆ ಸಂಪೂರ್ಣ ಸೋಲು ಖಚಿತ ಎಂದು ಹೇಳಿದರು.

ಕಾಂಗ್ರೆಸ್‌ನವರ ಬಳಿ ಹಣ ಇಲ್ಲ. ಆದರೆ ಬಿಜೆಪಿಯವರ ಬಳಿ ಸಾವಿರಾರು ಕೋಟಿ ರೂ. ಇದೆ. ಆ ಹಣದಿಂದ ಅನ್ಯ ಪಕ್ಷದ ಶಾಸಕರನ್ನು ಖರೀದಿಸಿ ರಾಜ್ಯ ಸರ್ಕಾರದ ಅಸ್ತಿತ್ವ ಬುಡಮೇಲು ಮಾಡಲು ಹೊರಟಿದ್ದಾರೆ. ನಮ್ಮ ಕಡೆಗೆ 17 ಜನ ಬರುತ್ತಾರೆ.

Advertisement

ಅವರಿಗೆ ಮುಂಗಡ ಹಣ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕೂಡ ನಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಇಂತಹ ಮೂಢರು ಎಲ್ಲಿಯಾದರೂ ಸಿಕ್ತಾರಾ? ಎಂಬುದಾಗಿ ಯೋಚನೆ ಮಾಡಬೇಕಿದೆ ಎಂದರು.

ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿಯವರು, ಅದನ್ನು ಈಡೇರಿಸುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಜನ ಮೋದಿಯವರನ್ನು ಬೈಯ್ಯುತ್ತಿದ್ದಾರೆ. ಪ್ರಧಾನಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಇಂತಹ ಸರ್ವಾಧಿಕಾರಿಯನ್ನು ಅವರ ಪಕ್ಷದ ನಾಯಕರೇ ಮನೆಗೆ ಕಳಿಸಲು ನೋಡುತ್ತಿದ್ದಾರೆ.

ಇನ್ನೂ ಬಹುದಿನಗಳ ಕಾಲ ಈ ಸರ್ಕಾರ ಉಳಿಯುವುದಿಲ್ಲ. ಮತ್ತೆ ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಕಾಂಗ್ರೆಸ್‌ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಅಲ್ಲದೇ ಈ ಹಿಂದೆ ಯಾವ ಸರ್ಕಾರಗಳು ಮಾಡಿರದಷ್ಟು ಹಗರಣವನ್ನು ಈ ಸರ್ಕಾರ ಮಾಡಿದ್ದು, ಈ ಸರ್ಕಾರವನ್ನು ಮನೆಗೆ ಕಳಿಸುವ ಕಾಲ ದೂರವಿಲ್ಲ. ಇದಕ್ಕಾಗಿಯೇ ಕಾಂಗ್ರೆಸ್‌
ಬೃಹತ್‌ ಹೋರಾಟ ನಡೆಸುತ್ತಿದೆ ಎಂದರು.

ಪಾಲಿಕೆ ಸದಸ್ಯ ದಿನೇಶ್‌ ಕೆ.ಶೆಟ್ಟಿ, ಮುಖಂಡ ಸೈಯದ್‌ ಸೈಫುಲ್ಲಾ, ಎ. ನಾಗರಾಜ್‌ ಇತರರು ಮಾತನಾಡಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌, ಅಯೂಬ್‌ ಪೈಲ್ವಾನ್‌, ಉಪಮೇಯರ್‌ ಚಮನ್‌ ಸಾಬ್‌, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌, ಜಿ.ಪಂ.ಸದಸ್ಯ ಬಸವಂತಪ್ಪ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಕಳುಹಿಸಲು ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next