Advertisement

ಮಳೆಕೊಯ್ಲಿಗೆ ಮನ ಮಾಡಿದ ಸಾರ್ವಜನಿಕರು

07:11 PM Jul 26, 2019 | Sriram |

ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಡಿಮೆ. ಏಕೆಂದರೆ ಪುರಸಭಾ ವ್ಯಾಪ್ತಿ ಮನೆಗಳಿಗೆ ಜಪ್ತಿಯಿಂದ ವಾರಾಹಿ ನದಿಯ ಉಪನದಿ ಜಂಬೂ ನದಿಯ ನೀರು ನೇರ ದೊರೆಯುತ್ತದೆ. ಆದ್ದರಿಂದ ಈವರೆಗೆ ನೀರಿನ ಅಭಾವ ತಲೆದೋರಲಿಲ್ಲ. ಆದರೆ ಅನೇಕರು ಇಲ್ಲಿ ಸ್ವಂತ ನೀರಿನಾಶ್ರಯ ಹೊಂದಿದ ಕಾರಣ ಪುರಸಭಾ ನೀರಿನ ಸಂಪರ್ಕ ಪಡೆದಿಲ್ಲ. ಅಂತಹ ಕೆಲವರಿಗೆ ನೀರಿನ ಅಭಾವ ಕಾಣಿಸಿದ್ದು ಈ ಬಾರಿಯ ಬೇಸಗೆಯಲ್ಲಿ. ಕರಾಳ ಬೇಸಗೆ ತನ್ನ ಬಿರುಬಿಸಿಲ ದಿನಗಳನ್ನು ಕಳೆಯಲು ನೀರಿಲ್ಲದಂತೆ ಮಾಡಿ ಹಾಕಿತ್ತು. ಕುಂದಾಪುರದ ಗ್ರಾಮಾಂತರ ಭಾಗಗಳಂತಯೇ ನಗರದಲ್ಲೂ ನಳ್ಳಿ ನೀರಿನ ಸಂಪರ್ಕ ಹೊಂದದ ಅನೇಕರು ಬಾವಿ ಆಶ್ರಯವನ್ನು ನಂಬಿಕೊಂಡವರು ಕಡುಬೇಸಗೆಯ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗಿ ಬಂತು. ಉದಯವಾಣಿ ಜಲಸಾಕ್ಷರ ಅಭಿಯಾನ ಆರಂಭಿಸಿದ ಬಳಿಕ ಸಾಕಷ್ಟು ಜನರಲ್ಲಿ ನೀರಿನ ಜಾಗೃತಿ ಮೂಡಿದ್ದು, ಮಳೆ ಕೊಯ್ಲು ಅಳವಡಿಕೆ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.


ಪುರಸಭೆಯಲ್ಲಿ ಸರೋಜಾ ವಿಷ್ಣು ಮೂರ್ತಿ ಅವರು ಪುರಸಭಾ ಕಚೇರಿ ಕಟ್ಟಡದ ಹಿಂದೆಯೇ ಇರುವ ಮೀನು ಮಾರುಕಟ್ಟೆ ರಸ್ತೆ ಬದಿ ಮನೆ ಹೊಂದಿದವರು. ಬಾವಿಯಿದ್ದ ಕಾರಣ ನೀರಿನ ಸಮಸ್ಯೆ ಈವರೆಗೆ ತಲೆದೋರಿರಲಿಲ್ಲ. ಆದರೆ ಈ ಬಾರಿ ಮಾರ್ಚ್‌ ಕೊನೆಗೆ 25 ಅಡಿ ಆಳದ ಬಾವಿಯಲ್ಲಿ ನೀರು ಕಡಿಮೆಯಾಯಿತು. ಶುದ್ಧಜಲ ದೊರೆಯುವುದು ಕಷ್ಟವಾಯಿತು. ಕೆಂಪು ನೀರು ಮಾತ್ರ ದೊರೆಯತೊಡಗಿತು. ಹಾಗಾಗಿ ನೀರಿಂಗಿಸುವ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ. ಜು.23ರಂದು ಅವರು ತಾರಸಿ ಮನೆಗೆ ಪೈಪ್‌ಲೈನ್‌ ಅಳವಡಿಸಿ ಬಾವಿಗೆ ನೀರು ಹರಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. 200 ಲೀ. ನ ಡ್ರಮ್‌ಗೆ ಮಾಳಿಗೆ ಮನೆಯ ನೀರು ಪೈಪ್‌ ಮೂಲಕ ಬಿದ್ದು ಫಿಲ್ಟರ್‌ ಆಗಿ ಬಾವಿಗೆ ಸೇರುವ ಜುಳುಜುಳು ಸದ್ದು ಕೇಳತೊಡಗಿದಾಗ ಅವರಿಗೆ ಮನದೊಳಗೆ ಸಂತೋಷ ಉಕ್ಕುತ್ತಿತ್ತು.

Advertisement

ಕೋಣಿಯಲ್ಲಿ
ಕೋಣಿ ನಿವಾಸಿ
ಶಶಿಕಾಂತ್‌ ಎಸ್‌. ಕೆ. ಅವರು ಕಳೆದ ಎರಡು ವರ್ಷಗಳ ಹಿಂದೆಯೇ ಮಳೆಕೊಯ್ಲು ಮಾಡಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಅದರ ಸತ#ಲವನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಇವರ ಮನೆಯಲ್ಲಿ ಮಳೆಕೊಯ್ಲು ವೀಕ್ಷಿಸಿ 7 ಮಂದಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಇವರ ನೆಗಳೆ.

ಕೆನ್ನೀರ ಸಮಸ್ಯೆ
ಶಶಿಕಾಂತ್‌ ಅವರ ಬಾವಿಯಲ್ಲಿ ಕೆಂಪು ನೀರಿನ ಸಮಸ್ಯೆಯಿತ್ತು. ಮಾರ್ಚ್‌, ಎಪ್ರಿಲ್‌ ವೇಳೆಗೆ ನೀರು ಖಾಲಿಯಾಗುತ್ತಾ ಬರುತ್ತಿತ್ತು. ಬಾವಿಯಲ್ಲಿ ಕೆಂಪು ನೀರು ಮಾತ್ರ. ಅದೂ ಎರಡು ಮೂರು ಅಡಿಯಷ್ಟು ಇರುತ್ತಿತ್ತು. ಜತೆಗೆ ಇನ್ನೊಂದು ಸಮಸ್ಯೆ ತಲೆದೋರಿತ್ತು. ಬಾವಿ ನೀರಿನಲ್ಲಿ ತೈಲದಂಶ. ಜಿಡ್ಡಿನಂತಹ ಅಂಶ ಇದ್ದ ಕಾರಣ ಕುಡಿಯಲು ಬಳಕೆಗೆ ಕಷ್ಟವಾಗುತ್ತಿತ್ತು. ಇದೆಲ್ಲ ಸಮಸ್ಯೆಗೆ ಪರಿಹಾರವಾಗಿ ಅವರು ಮಳೆಕೊಯ್ಲುವಿಗೆ ಮುಂದಾದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಸ್ರೂರು ಒಕ್ಕೂಟ ಅಧ್ಯಕ್ಷರಾಗಿದ್ದ ಅವರಿಗೆ ಯೋಜನೆಯ ತಾಂತ್ರಿಕ ಪರಿಣತರು ನೆರವಾದರು.

ಅವರ ಮಾಹಿತಿಯಂತೆ
ಮನೆ ಮಾಡಿಗೆ ಪೈಪ್‌ ಅಳವಡಿಸಿ ಡ್ರಮ್‌ ಮೂಲಕ ನೀರು ಸೋಸಿ ಬಾವಿಗೆ ಹರಿಯುವಂತೆ ಮಾಡಿದರು. ಕಳೆದ ವರ್ಷ ಬಾವಿಯಲ್ಲಿ ಆರೂವರೆ ಅಡಿಗಿಂತ ಹೆಚ್ಚು ನೀರು ದಟ್ಟ ಬೇಸಗೆಯಲ್ಲೂ ಇತ್ತು ಎಂದು ಹೆಮ್ಮೆಯಿಂದ
ಹೇಳಿಕೊಳ್ಳುತ್ತಾರೆ.

ಮೊದಲು ಬೇಸಗೆಯಲ್ಲಿ ಬಾವಿ ನೀರಿನಲ್ಲಿ ಶೇ.75ರಷ್ಟು ಕೆಂಪು ಮಣ್ಣಿನ ಅಂಶ ಇದ್ದರೆ ಈ ಬಾರಿ ಅದರ ಪ್ರಮಾಣ ಶೇ.30ಕ್ಕೆ ಬಂದಿದೆ. ತೈಲದಂಶ ಮಾಯವಾಗಿದೆ ಎನ್ನುತ್ತಾರೆ. ಅವರ ಇಂತಹ ಸ್ಫೂರ್ತಿದಾಯಕ ಮಾತಿನ ಪ್ರೇರಣೆಯೇ ಇನ್ನೊಂದಷ್ಟು ಮಂದಿ ಮಳೆಕೊಯ್ಲು ಅಳವಡಿಸಲು ಪ್ರೇರಣೆಯಾಗುತ್ತಿದೆ.

Advertisement

ಎಲ್ಲರೂ ಮಾಡಬೇಕು
ನಮಗೆ ಈ ಬಾರಿ ನೀರಿನ ಸಮಸ್ಯೆ ಬರಲಿಲ್ಲ. “ಉದಯವಾಣಿ’ ಜಲಸಾಕ್ಷರ ಅಭಿಯಾನದಿಂದ ನಾವೆಲ್ಲರೂ ಪ್ರೇರೇಪಣೆ ಹೊಂದಿದ್ದೇವೆ. ಮಳೆಕೊಯ್ಲು ಅಳವಡಿಸಿದರೆ ನಾವು ನೀರು ಭೂಮಿಗೆ ಇಂಗಿಸಿದರೆ ನೀರು ಉಳಿಸಿದಂತೆ. ಎಲ್ಲರೂ ಇಂತಹ ಪ್ರಯತ್ನ ಮಾಡಬೇಕು.
-ಶಶಿಕಾಂತ್‌ ಎಸ್‌.ಕೆ ಕೋಣಿ

ಪ್ರಯೋಗ ನೋಡಬೇಕು
ಪರಿಚಿತರು ಮನೆಗಳಲ್ಲಿ ನೀರಿಂಗಿಸುವ ಮೂಲಕ ಜಲಸೆಲೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಮಳೆಕೊಯ್ಲಿಗೆ ಮುಂದಾಗಿದ್ದೇವೆ. ಪ್ರಯೋಗ ಹೇಗೆ ಯಶಸ್ವಿಯಾಗುತ್ತದೆ ಎಂದು ನೋಡಬೇಕು.
-ಸರೋಜಾ ವಿಷ್ಣುಮೂರ್ತಿ,
ಕುಂದಾಪುರ

ನೀವೂ ಅಳವಡಿಸಿ,
ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7 6 1 8 7 7 4 5 2 9

Advertisement

Udayavani is now on Telegram. Click here to join our channel and stay updated with the latest news.

Next