Advertisement

ಪೇದೆಯ ಕಳಪೆ ಹೆಲ್ಮೆಟ್‌ ಒಡೆದು ಹಾಕಿದ ಸಾರ್ವಜನಿಕರು!

12:27 PM Jan 04, 2018 | Team Udayavani |

ಮೈಸೂರು: ಪೊಲೀಸ್‌ ಪೇದೆಯ ಕಳಪೆ ಹೆಲ್ಮೆಟನ್ನೇ ಕಿತ್ತು ಒಡೆದು ಹಾಕುವ ಮೂಲಕ ಕಳಪೆ ಹೆಲ್ಮೆಟ್‌ಗಳ ವಿರುದ್ಧ ಸಮರ ಸಾರಿರುವ ಪೊಲೀಸರಿಗೇ ಸಾರ್ವಜನಿಕರು ಬಿಸಿ ಮುಟ್ಟಿಸಿದ್ದಾರೆ.

Advertisement

ನಗರದ ಚೆಲುವಾಂಬ ಪಾರ್ಕ್‌ಬಳಿ ಪೊಲೀಸ್‌ ಪೇದೆ ತನ್ನ ದ್ವಿಚಕ್ರ ವಾಹನದಲ್ಲಿ ಕಳಪೆ ಹೆಲ್ಮೆಟ್‌ ಇಟ್ಟಿರುವುದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ಪೇದೆಯೊಂದಿಗೆ ಮಾತಿನ ಚಕಮಕಿ ನಡೆಸಿ, ಹೆಲ್ಮೆಟನ್ನು ಒಡೆದು ಹಾಕಿದ್ದಾರೆ.

ಈ ವೇಳೆ ಪೇದೆ ಸಮಜಾಯಿಷಿ ನೀಡಿ ನಾನು ಹೆಲ್ಮೆಟ್‌ ಧರಿಸಿಲ್ಲ ತನ್ನ ಬೈಕ್‌ನಲ್ಲಿ ಇರಿಸಿದ್ದೇನೆ ಅಷ್ಟೆ ಎಂದು ವಾದಿಸತೊಡಗಿದಾಗ ಹೆಲ್ಮೆಟ್‌ ಕಿತ್ತು ಒಡೆದು ಹಾಕಿದ ಸಾರ್ವಜನಿಕರು, ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಈಗ ಹೇಗೆ ಹೋಗುತ್ತೀರಿ ಎಂದು ಪ್ರಶ್ನಿಸಿದಾಗ ಜನರು ಕಣ್ಮರೆಯಾಗುವವರೆಗೂ ಪೊಲೀಸ್‌ ಪೇದೆ ತನ್ನ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗಿರುವ ಘಟನೆ ನಡೆದಿದೆ.

ಐಎಸ್‌ಐ ಮುದ್ರೆ ಇಲ್ಲದ ಅರ್ಧ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನ ಓಡಿಸುವವರ ವಿರುದ್ಧ ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, 15,501 ಕಳಪೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದ್ದರು.

ಹೆಲ್ಮೆಟ್‌ ಖರೀದಿಸಲು ಎರಡು ದಿನ ಕಾಲಾವಕಾಶ
ಮೈಸೂರು:
ಗುಣಮಟ್ಟದ ಹೆಲ್ಮೆಟ್‌ ಖರೀದಿಸಲು ಎರಡು ದಿನಗಳ ಕಾಲಾವಕಾಶ ನೀಡಿರುವ ಪೊಲೀಸರು, ಜನವರಿ 6ರಿಂದ ಆಪರೇಷನ್‌ ಸೇಫ್ ರೈಡ್‌ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಬಿಐಎಸ್‌/ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಖರೀದಿಸಿ ಇನ್ನು ಮುಂದೆ ಅವುಗಳನ್ನೇ ಕಡ್ಡಾಯವಾಗಿ ಧರಿಸಲು ಜ.5ರವರೆಗೆ ಸಾರ್ವಜನಿಕರಿಗೆ ಕಾಲಾವಕಾಶ ನೀಡಲಾಗಿದೆ.

Advertisement

ಆಪರೇಷನ್‌ ಸೇಫ್ ರೈಡ್‌ ಆರಂಭವಾದ ಮೇಲೆ ಸಾರ್ವಜನಿಕರು ಬಿಐಎಸ್‌/ಐಎಸ್‌ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ಹೆಚ್ಚಾಗಿ ಖರೀದಿಸಲು ಅರಂಭಿಸಿರುವ ಹಿನ್ನಲೆಯಲ್ಲಿ ಕೆಲವು ವರ್ತಕರು ಹೆಲ್ಮೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ದೂರುಗಳು ಕೇಳಿಬರುತ್ತಿದ್ದು, ಈ ರೀತಿ ಕಂಡು ಬಂದಲ್ಲಿ ಸಾರ್ವಜನಿಕರು ಇದರ ಬಗ್ಗೆ ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡುವುದು.

ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧ ಈಗಾಗಲೇ ಕ್ರಮಕೈಗೊಂಡು ಅಂತಹ ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತಿದೆ. ಇಂತಹ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಗಳು ಇದ್ದಲ್ಲಿ ಅಂತಹ ಮಾಹಿತಿಯನ್ನು ಸಾರ್ವಜನಿಕರು ಪೊಲೀಸರಿಗೆ ನೀಡುವುದು.

ಆಪರೇಷನ್‌ ಸೇಫ್ ರೈಡ್‌ ಕಾರ್ಯಾಚರಣೆಯು ಸಂಪೂರ್ಣವಾಗಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ನಡೆಯುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ನಗರ ಪೊಲೀಸ್‌ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್‌ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next