Advertisement

ಜಾಗದ ಖಾತೆ ಕ್ಯಾತೆ, ಸಾರ್ವಜನಿಕರಿಗೆ ಚಿಂತೆ!

09:35 PM Aug 10, 2020 | mahesh |

ಕಾರ್ಕಳ: ಜಾಗದ ಖಾತೆಗೆ ಸಂಬಂಧಿಸಿ ಸರಕಾರದ ನಿಯಮಗಳಲ್ಲಿನ ತೊಡಕಿನಿಂದ 2ಕ್ಕೂ ಅಧಿಕ ವರ್ಷಗಳಿಂದ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿನ ಖಾತೆ ಬದಲಾವಣೆ ಕಡತಗಳು ವಿಲೇ ಆಗದೆ, ನಿವೇಶನ, ಮನೆ, ಕಾಂಪ್ಲೆಕ್ಸ್‌ ಮೊದಲಾದ ಆಸ್ತಿಗಳ ಕ್ರಯ, ವಿಕ್ರಯ, ಪೌತಿ ಬದಲಾವಣೆ ಆಗದೇ ಜನಸಾಮಾನ್ಯರಿಗೆ ತೊಂದರೆಯಾಗಿದೆ.

Advertisement

ಪುರಸಭಾ ವ್ಯಾಪ್ತಿಯಲ್ಲಿ 2 ವರ್ಷಗಳಿಂದ ಜಾಗದ ಖಾತೆ ಸಿಗುತ್ತಿಲ್ಲ. ನಾಗರಿಕರು ಜಾಗ ಮಾರಾಟ ಮಾಡಲು, ಮನೆ ಕಟ್ಟಲು, ವಿಭಾಗ ಪತ್ರ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವ್ಯಾಪಾರ ವಹಿವಾಟು ಇಲ್ಲದೆ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿವೆ. ನಗರಾಭಿವೃದ್ಧಿ ಪ್ರಾಧಿಕಾರದ ಕೆಲ ಕಾಯ್ದೆ- ಕಾನೂನುಗಳಿಂದ ಈ ಗೊಂದಲ ಏರ್ಪಟ್ಟಿದೆ.

ಕಾನೂನಿನ ತೊಡಕು ನಿವಾರಿಸುವಂತೆ ಸಾರ್ವಜನಿಕರ ದೂರಿನನ್ವಯ ಇಲ್ಲಿನ ಬಳಕೆದಾರರ ಹಿತಾರಕ್ಷಣಾ ವೇದಿಕೆ ಕಳೆದ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸಿದೆ. ಹಿರಿಯರಾದ ಗಣಪತಿ ಕಾಮತ್‌ ಮತ್ತು ಅರುಣ್‌ಕುಮಾರ್‌ ಪುರಾಣಿಕ್‌ ಅವರು ಸರಕಾರ, ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದಾರೆ. ಈಗಿನ ನಿಯಮದಿಂದ ಜನರಿಗೆ ತೊಡಕಾಗುವ ಸಮಸ್ಯೆಗಳನ್ನು ನಿವಾರಿಸುವಂತೆ ಸಲ್ಲಿಸಿದ ಮನವಿಗೂ ಸ್ಪಂದನೆ ಸಿಕ್ಕಿಲ್ಲ.

ಕಾರ್ಕಳ ಪುರಸಭೆ ಒಂದರಲ್ಲೇ ಸುಮಾರು 300ಕ್ಕೂ ಅಧಿಕ ಕಡತಗಳು ಜಾಗದ ಖಾತೆಗಾಗಿ ಹಾಗೂ 200ಕ್ಕೂ ಅಧಿಕ ಕಡತಗಳು ಕಟ್ಟಡ ಪರವಾನಿಗೆ ಪಡೆಯಲು ಕಾಯುತ್ತಿವೆ. ಕಟ್ಟಡ ಕಾಮಗಾರಿಗಳು ನಿಂತಿವೆ. ಮಕ್ಕಳ ಮದುವೆ, ಆರೋಗ್ಯ ಸಮಸ್ಯೆಗೆಂದು ಆಸ್ಪತ್ರೆಯ ಖರ್ಚು ಇತ್ಯಾದಿಗಳಿಗೆ ಹಣ ಹೊಂದಿಸಲು ಜಾಗ ಮಾರಾಟ ಮಾಡಲು ಉದ್ದೇಶಿಸಿದವರು ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಭೂ ಪರಿವರ್ತನೆಯಾಗಿರುವ ಜಮೀನುಗಳನ್ನು ಯಾವುದೇ ಈಗಿನ ನಿಬಂಧನೆಗಳಿಗೆ ಒಳಪಡಿಸದೇ ವಿಂಗಡಿಸಿ, ಮಾರಾಟ ಮಾಡಲು ಅಥವಾ ಗೃಹ ನಿರ್ಮಾಣ ಮಾಡಲು ಖಾತೆಯನ್ನು ನೀಡುವಂತೆ ಒತ್ತಾಯವಿದ್ದು, ಉದ್ಯೋಗ ಸೃಷ್ಟಿ ಹಾಗೂ ದಿನಕೂಲಿ ನೌಕರರಿಗೆ ಇದರಿಂದ ಅನುಕೂಲವಾಗಲಿದೆ.

Advertisement

ತೊಡಕು ನಿವಾರಣೆಗೆ ಪ್ರಯತ್ನ
ಜಾಗದ ಖಾತೆ ಬದಲಾವಣೆಗೆ ಸಂಬಂಧಿಸಿ ಸ್ಥಳೀಯವಾಗಿ ಅಂದರೆ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ತೊಡಕುಗಳು ಇದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ. ಸರಕಾರದ ಮಟ್ಟದಲ್ಲಿ ಆಗುವಂತಹ ಪ್ರಕರಣವಾಗಿದ್ದರೆ ಸರಕಾರದ ಗಮನಕ್ಕೆ ತರಬೇಕಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವೆ
-ಜಗದೀಶ್‌ ಜಿ., ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ

ಪ್ರಧಾನಿಗೆ ಪತ್ರ
ಖಾತೆ ಬದಲಾವಣೆ ವಿಚಾರದಲ್ಲಿ ಈಗಿನ ಕಾನೂನಿನಿಂದ ಆಗುವ ಅನಾನುಕೂಲವನ್ನು ಸರಳವಾಗಿಸಿ, ಜನರಿಗೆ ಅನುಕೂಲವಾಗುವಂತೆ ನಿಯಮ ಸಡಿಲಿಸುವಂತೆ ಸರಕಾರ ಮತ್ತು ಪ್ರಧಾನಿಗೆ ಕಳೆದ ಮಾರ್ಚ್‌ನಲ್ಲಿ ಪತ್ರ ಬರೆದಿದ್ದೇವೆ. ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ.
-ಅರುಣ್‌ಪುರಾಣಿಕ್‌, ಬಳಕೆದಾರರ ಹಿತರಕ್ಷಣೆ ವೇದಿಕೆ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next