ಕನಕಪುರ: ಋಣಮುಕ್ತ ಕಾಯ್ದೆಯಿಂದ ನಮೂನೆ ಅರ್ಜಿ ಪಡೆಯಲು ಕಂದಾಯ ಇಲಾಖೆ ಮುಂದೆ ನೂರಾರು ಜನರು ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಾದುಕುಳಿತಿದ್ದರು.
ಋಣಮುಕ್ತ ಕಾಯ್ದೆ ತಾಲೂಕಿನಲ್ಲಿ ಜಾರಿಯಾಗಿ ರುವ ವಿಷಯ ತಿಳಿಯುತ್ತಿದ್ದಂತೆ ತಾಲೂಕಾದ್ಯಂತ ಪ್ರತಿದಿನ ನೂರಾರು ಫಲಾನುಭವಿಗಳು ತಾಲೂಕು ಕಚೇರಿಯ ಕಂದಾಯ ಇಲಾಖೆ ಮುಂದೆ ಕಾದು ನಿಂತು ಅರ್ಜಿಗಳನ್ನು ಪಡೆಯುತಿದ್ದಾರೆ.
ಮಾಹಿತಿ ಕೊರತೆಯಿಂದ ಕೆಲವು ಖಾಸಗಿ ಬ್ಯಾಂಕು ರಾಷ್ಟ್ರೀಕೃತ ಬ್ಯಾಂಕು ಮತ್ತು ಮಣಪುರಂ ಗೋಲ್ಡ್ ಲೋನ್‌ನಲ್ಲಿ ಚಿನ್ನ ಅಡಮಾನವಿಟ್ಟು ಸಾಲ ಪಡೆದಿರುವ ರೈತರು ಮಹಿಳೆಯರು ಋಣಮುಕ್ತ ಕಾಯ್ದೆ ನಮೂನೆ ಅರ್ಜಿ ಪಡೆಯಲು ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಾದು ಕುಳಿತಿದ್ದು ನಮೂನೆ ಅರ್ಜಿ ಪಡೆದರು. ಆದರೆ ಬ್ಯಾಂಕುಗಳಲ್ಲಿ ಚಿನ್ನ ಅಡವಿಟ್ಟು ಪಡೆದಿರುವ ಸಾಲಕ್ಕೆ ಈ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ತಿಳಿದು ಬೇಸರಗೊಂಡರು.
ಪಡೆದ ಅರ್ಜಿ ಸಲ್ಲಿಸಿಲ್ಲ: ನಮೂನೆ ಅರ್ಜಿಪಡೆಯಲು ಬರುವ ಫಲಾನುಭವಿಗಳಿಗನುಗುಣವಾಗಿ ವಿತರಣೆ ಕೌಂಟರ್ ಗಳನ್ನು ತೆರೆಯಲಾಗಿದೆ. ಈ ಗಾಗಲೇ 4 ಸಾವಿರ ನಮೂನೆ ಅರ್ಜಿಗಳು ಪಡೆದುಕೊಂಡಿರುವ ಫಲಾನುಭವಿಗಳು ಈವರೆಗೆ ಒಂದು ಅರ್ಜಿಯು ಕಂದಾಯ ಇಲಾಖೆಗೆ ಸಲ್ಲಿಸಿಲ್ಲ
ತವರು ಜಿಲ್ಲೆಯಲ್ಲೇ ಮಂದಸ್ಥಿತಿ: ಋಣಮುಕ್ತ ಕಾಯ್ದೆ ಜಾರಿಯಾಗಿ ತಿಂಗಳುಗಳೇ ಕಳೆದರೂ ತಾಲೂಕಿನಲ್ಲಿ ಈ ಸೇವೆ ಲಭ್ಯವಿರಲಿಲ್ಲ. ಆದರೆ, ಮಂಡ್ಯ ಮೈಸೂರು ಜಿಲ್ಲೆಗಳಲ್ಲಿ ಈಗಾಗಲೇ ಫಲಾನುಭವಿಗಳು ನಮೂನೆ ಅರ್ಜಿಗಳನ್ನು ಪಡೆದು ಅರ್ಜಿಯ ಜತೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರ ತವರು ಜಿಲ್ಲೆ ಮತ್ತು ಪ್ರಭಾವಿ ರಾಜಕಾರಣಿಗಳ ಸ್ವ ಕ್ಷೇತ್ರದಲ್ಲಿ ಋಣಮುಕ್ತ ಕಾಯ್ದೆ ಇಷ್ಟು ತಡವಾಗಿ ಜಾರಿಯಾಗಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂಬಂತಿದೆ.