ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪರೀಕ್ಷೆಯ ಪ್ರಶ್ನೆಪತ್ರಿಕೆ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳಿಗಾಗಿ ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲೇ ಎಲ್ಲ ವಾರ್ಷಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸುಲಭವಾಗಿ ಸಿಗುತ್ತದೆ.
ವಿಜ್ಞಾನ ಮತ್ತು ಗಣಿತ ವಿಷಯಕ್ಕೆ 2012-13ರಲ್ಲಿ ರಾಷ್ಟ್ರಮಟ್ಟದ ಪಠ್ಯಕ್ರಮ ಪರಿಚಯಿಸಲಾಗಿತ್ತು. ರಾಷ್ಟ್ರೀಯ ಪಠ್ಯಕ್ರಮ ಹೇಗಿದೆ ಎಂಬುದರ ಮಾಹಿತಿಯೂ ಇಲ್ಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ವಶ್ಚನ್ ಬ್ಯಾಂಕ್(ಪ್ರಶ್ನೆಪತ್ರಿಕೆಗಳ ಸಂಗ್ರಹ)ನ್ನು ಇಲಾಖೆಯಿಂದಲೇ ಸಿದ್ಧಪಡಿಸಲಾಗಿದೆ.
2018-19ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯು ಪ್ರಶ್ನೆಪತ್ರಿಕೆಗಳು, ಪ್ರಥಮ ಪಿಯು ವಿದ್ಯಾರ್ಥಿಗಳ ಕಾರ್ಯ ಮತ್ತು ಕನಿಷ್ಠ ಕಲಿಕಾ ಮಟ್ಟದ ಮಾಹಿತಿ, ಪ್ರಥಮ ಪಿಯು ವಿದ್ಯಾರ್ಥಿಗಳ ಪ್ರಾಯೋಗೀಕೇತರ ವಿಷಯದ ಪ್ರಶ್ನೆಪತ್ರಿಕೆ, 2014-15ನೇ ಸಾಲಿನ ವಿಜ್ಞಾನ ವಿದ್ಯಾರ್ಥಿಗಳ ಮಾದರಿ ಪ್ರಶ್ನೆಪತ್ರಿಕೆ, ಕಲಾ, ವಾಣಿಜ್ಯ ಹಾಗೂ ಭಾಷಾ ವಿಷಯದ ಮಾದರಿ ಪ್ರಶ್ನೆಪತ್ರಿಕೆಗಳು, 2016ನೇ ಸಾಲಿನ ಮಾದರಿ ಪ್ರಶ್ನೆಪತ್ರಿಕೆಗಳು, ಎನ್‌ಸಿಇಆರ್‌ಟಿ ಪಠ್ಯಕ್ರಮದ ಮಾಹಿತಿಯೂ ಇಲ್ಲಿ ಸಿಗಲಿದೆ.
ಪ್ರಶ್ನೆಪತ್ರಿಕೆಗಳ ಮಾಹಿತಿಯ ಜತೆ, ಜತೆಗೆ ಪಾಲಕ, ಪೋಷಕರಿಗೆ ಮತ್ತು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ ಕೆಲವೊಂದು ಉಪಯುಕ್ತ ಸಂದೇಶವನ್ನು ಇಲ್ಲಿ ನೀಡಲಾಗಿದೆ. ಪಿಯು ವೆಬ್‌ಸೈಟ್
//pue.kar.nic.in ಗೆ ಭೇಟಿ ನೀಡಿ, ಪ್ರಶ್ನೆಪತ್ರಿಕೆ ಹಾಗೂ ಪಠ್ಯಕ್ರಮದ ಎಲ್ಲ ಮಾಹಿತಿಯನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೇ 20ರಿಂದ ಪಿಯು ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳು ಆರಂಭದ ದಿನಗಳಿಂದಲೇ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ, ಮಾದರಿ ಪ್ರಶ್ನೆಪತ್ರಿಕೆಗಳ ಆಧಾರದಲ್ಲಿ ಅಧ್ಯಯನ ಆರಂಭಿಸಿದರೆ, ಮುಂಬರುವ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ.