Advertisement

ಹೆಮ್ಮೆ ತಂದ ಜರ್ಮನ್‌ ಡ್ರಿಲ್‌

10:17 AM Jan 27, 2018 | Team Udayavani |

ಕಲಬುರಗಿ: ಇಲ್ಲಿನ ಪೊಲೀಸ್‌ ಮೈದಾನದಲ್ಲಿ 69ನೇ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಚಪ್ಪಾಳೆ ಗಿಟ್ಟಿಸಿದವು. ಇದರೊಂದಿಗೆ ಕಳೆದ 5 ವರ್ಷಗಳ ಗಣರಾಜ್ಯೋತ್ಸವದಲ್ಲಿ 69ನೇ ದಿನಾಚರಣೆ ಹೊಸದೊಂದು ನಿರೀಕ್ಷೆ ಹುಟ್ಟಿಸಿತು. ಕರ್ನಾಟಕ ಮೀಸಲು ಪೊಲೀಸ್‌ ಪಡೆ ನಡೆಸಿದ ಜರ್ಮನ್‌ ಡ್ರಿಲ್‌ ಜನರಿಗೆ ಭಾರಿ ಖುಷಿ ಕೊಟ್ಟಿತು. ಅಲ್ಲದೆ, ಪೊಲೀಸರು ಸಮಯ, ಚಾಕಚಕ್ಯತೆ ಮತ್ತು ಸಂಯೋಜಿತವಾಗಿ ಮಾಡಿದ ಡ್ರಿಲ್‌ ಜನರ ಚಪ್ಪಾಳೆ ಗಿಟ್ಟಿಸಿದವು. ಇದರೊಂದಿಗೆ ಪೊಲೀಸರ ಬಗ್ಗೆ ನೆರೆದಿದ್ದ ಪ್ರೇಕ್ಷಕರು, ದೇಶಾಭಿಮಾನಿಗಳಲ್ಲಿ ಅಭಿಮಾನ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಬಸವರಾಜ ಜಿಳ್ಳೆ, ಆರ್‌ ಎಸಐಗಳಾದ ಮಹಾಂತೇಶ ಮತ್ತು ಶ್ರೀಕಾಂತ ಅವರ ಶ್ರಮ ಎದ್ದು ಕಾಣುತ್ತಿತ್ತು.

Advertisement

ಶ್ರೀ ಗುರುವಿದ್ಯಾಪೀಠ ಖಣದಾಳದ ಮಕ್ಕಳು ನಡೆಸಿಕೊಟ್ಟ ನೃತ್ಯರೂಪಕವಂತೂ ಜನಮನ ಸೂರೆಗೊಂಡಿತು. ತಾಂತ್ರಿಕ ಮತ್ತು ಆಧುನಿಕತೆ ನಡುವೆ ಗ್ರಾಮೀಣ ಜನ ಜೀವನ ಮರೆತು ಹೋಗುತ್ತಿರುವ ದಿನಗಳಲ್ಲಿ ಹಳ್ಳಿಯ ಸೊಗಡಿನ.. ದೈನಂದಿನ ಚಟುವಟಿಕೆಗಳ ಚಿತ್ರಣವನ್ನು ಕಟ್ಟಿ ಕೊಟ್ಟದ್ದು ಭಾರಿ ಖುಷಿ ಕೊಟ್ಟಿತು. ಪೊಲೀಸ್‌ ಮೈದಾನದಲ್ಲಿ ಎತ್ತಿನ ಗಾಡಿ ಓಡುವಾಗಲಂತೂ ಜನರು ಸಿಳ್ಳೆ ಹೊಡೆದರು. ಮಕ್ಕಳ ಮಂತ್ರಮುಗ್ಧ ಅಭಿನಯದಲ್ಲಿ ಶಿಕ್ಷಕರ ಹಾಗೂ ಸಂಘಟಕರ ಶ್ರಮ ಎದ್ದು ಕಾಣಿಸಿತು. ಇನ್ನು ಫರ್ಹಾನ್‌ ಶಾಲೆಯ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಗೀತೆ ಜನರಲ್ಲಿ ಹೊಸ ಉಮೇದು ಸೃಷ್ಟಿ ಮಾಡುವಷ್ಟು ಮಕ್ಕಳು ಅಂದವಾಗಿ ಹೆಜ್ಜೆ ಹಾಕಿದರು. ಒಂದೇ ಹಾಡಿಗೆ 350 ಮಕ್ಕಳು ಶಿಸ್ತಿನಿಂದ ಸಂಗೀತಕ್ಕೆ ತಕ್ಕಂತೆ ಏಳು ನಿಮಿಷಗಳಲ್ಲಿ ವಿವಿಧ ಭಂಗಿಗಳನ್ನು ಪ್ರದರ್ಶನ ಮಾಡಿದರು. ಪ್ರೇಕ್ಷರಾಗಿದ್ದ ಮಕ್ಕಳು ಕೂಡ ಎದ್ದು ಕುಣಿದದ್ದು ಮಕ್ಕಳ ಆಕರ್ಷಣೆ ಹೆಚ್ಚಿಸಿತ್ತು.

ಕಲಬುರಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಏರ್ಪಡಿಸಲಾಗಿದ್ದ ವಿಷ ಅನಿಲ ಸೋರಿಕೆ ಹಾಗೂ ಮನೆಯಲ್ಲಿ ಅನಿಲ ಸೋರಿಕೆಯಿಂದ ಅನಾಹುತ ಸಂಭವಿಸಿದಾಗ ಹೇಗೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂಬ ಅಣುಕು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಭಗತ್‌ಸಿಂಗ್‌ ಗಲ್ಲಿಗೇರಿದ ಸಂದರ್ಭವನ್ನು ಹಾಡಿನ ಮೂಲಕ ಮತ್ತು ಲಂಬಾಣಿಗಳ ಸಂಸ್ಕೃತಿಗೆ ಬೆಳೆಕು ಚೆಲ್ಲುವ ಪ್ರಯತ್ನಗಳು ಕೂಡ ಖುಷಿ ಕೊಟ್ಟವು. ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಸಾಧನೆ ಹೇಳುವ ಸ್ತಬ್ದ ಚಿತ್ರಗಳು ಆಕರ್ಷಕವಾಗಿದ್ದವು. ಇದೇ ವೇಳೆ ನಗರದ ವಿವಿಧ ಶಾಲೆಗಳ 1240 ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಜರುಗಿದ ಅತ್ಯಾಕರ್ಷಕ ಮತ್ತು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶಭಕ್ತಿ ಮತ್ತು ತ್ಯಾಗ ಬಲಿದಾನಗಳ ವಿವಿಧ ರೋಮಾಂಚಕ ಸನ್ನಿವೇಶಗಳು ಪ್ರದರ್ಶಿತವಾದವು.

ಗೌರವ ಸನ್ಮಾನ : ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಿವಲಿಂಗಪ್ಪಾ ಬಸಲಿಂಗಪ್ಪಾ ಪಾಟೀಲ, ಅಣ್ಣಾರಾವ್‌ ಬಸವಂತರಾವ್‌ ಪಾಟೀಲ ಗೌಡಗಾಂವ ಅವರನ್ನು ಸನ್ಮಾನಿಸಲಾಯಿತು. ಅಪಘಾತ ರಹಿತ ವಾಹನ ಚಾಲನೆ ಮಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1 ಹಾಗೂ 2ರ ಒಟ್ಟು 27 ಜನ ವಾಹನ ಚಾಲಕರಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. 2017-18 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ 5 ಜನ ಕ್ರೀಡಾಪಟುಗಳಿಗೆ ಹಾಗೂ ಕರ್ನಾಟಕ ದೂರದೃಷ್ಟಿ (ವಿಜನ್‌) 2025ರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಧರ್ಮು ಗೋಪಿಚಿನ್ನಿ ರಾಠೊಡ ಹಾಗೂ ಆನಂದ ಬಳುರಗಿ ಅವರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸೂರ್ಯಕಾಂತ ಎಂ.ಜಮಾದಾರ 

Advertisement
Advertisement

Udayavani is now on Telegram. Click here to join our channel and stay updated with the latest news.

Next