ಹುಣಸೂರು: ಕೃಷಿ ಪಂಪ್‌ಸೆಟ್‌ಗೆ ಅಸಮರ್ಪಕ ವಿದ್ಯುತ್ ಪೂರೈಕೆ, ಸಕಾಲದಲ್ಲಿ ಟೀಸಿ ಅಳವಡಿಸದಿರುವ ಸೆಸ್ಕ್ ವಿರುದ್ಧ ರಾಜ್ಯ ರೈತ ಸಂಘವು ಗುರುವಾರ ಜಿಲ್ಲೆಯ ಎಲ್ಲಾ ತಾಲೂಕುಗಳ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ವ್ಯತ್ಯಯ ಆಗುವುದರಿಂದ ಟೀಸಿಗಳು ಸುಟ್ಟು ಹೋಗುತ್ತಿವೆ. ಕೃಷಿ ಚಟುವಟಿಕೆಗಾಗಿ ಅಳವಡಿಸಿರುವ ಟೀಸಿ ಸುಟ್ಟು ಹೋದಲ್ಲಿ 72 ಗಂಟೆಯಲ್ಲೇ ಬದಲಾಯಿಸುವ ನಿಯಮವಿದೆ. ಆದರೆ, ತಿಂಗಳಾದರೂ ಬದಲಾಯಿಸುತ್ತಿಲ್ಲ. ರೈತರು ಉಚಿತವಾಗಿ ವಿದ್ಯುತ್ ಬೇಡಿಕೆ ಇಟ್ಟಿರಲಿಲ್ಲ. ದರ ನಿಗದಿಗೊಳಿಸಿ ಹಗಲು ವೇಳೆಯಲ್ಲೇ ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಅಕ್ರಮ ಸಕ್ರಮ ಯೋಜನೆಯಡಿ ಬೆಂಕಿಪುರ ರೈತರು ವಿದ್ಯುತ್ ಪರಿವರ್ತಕಕ್ಕಾಗಿ ಹಣ ಪಾವತಿಸಿಮೂರು ತಿಂಗಳಾಗಿದೆ. ಇನ್ನು ಹೊಸೂರಿನ 18 ರೈತರು 2 ತಿಂಗಳಿನಿಂದ ಟೀಸಿಗಾಗಿ ಕಾಯುತ್ತಿದ್ದಾರೆ. ಗುತ್ತಿಗೆದಾರರಿಗೆ 20-25 ಸಾವಿರ ರೂ. ನೀಡಿದಲ್ಲಿ ಕೂಡಲೇ ಅಳವಡಿಸುತ್ತಾರೆ. ಟೀಸಿಗಾಗಿ ಉಳಿದವರು ಕಚೇರಿಗೆ ಅಲೆದಾಡುವಂತಾಗಿದೆ. ಇಂಜಿನಿಯರ್‌ಗಳ ಜೇಬು ತುಂಬುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ವಿವಿಧ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಬಡವರಿಗೆ 5 ರಿಂದ 10 ಸಾವಿರ ರೂ.ವರೆಗೆ ವಿದ್ಯುತ್ ಬಿಲ್‌ನೊಂದಿಗೆ ಇದೀಗ ಮನೆ ಬಾಗಿಲಿಗೆ ಪೊಲೀಸರನ್ನು ಕಳುಹಿಸುತ್ತಿದ್ದಾರೆ.
ಇನ್ನು ಸೌಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಿಗೆ ಈವರೆಗೂ ವಿದ್ಯುತ್ ಸೌಲಭ್ಯ ಕಲ್ಪಿಸದೆ ಹಣ ನೀಡಿದವರಿಗೆ ಮಾತ್ರ ಸಂಪರ್ಕ ಕಲ್ಪಿಸುತ್ತಿದ್ದಾರೆಂದು ಆರೋಪಿಸಿದರು. ಸಂಘದ ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ, ಮುಖಂಡರಾದ ಈರತ್ತಯ್ಯನಕೊಪ್ಪಲಿನ ರಾಜೇಗೌಡ, ರಾಮೇಗೌಡ ಉಪಸ್ಥಿತರಿದ್ದರು.