Advertisement

ಕೃಷಿ ವಿವಿಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

11:35 AM Apr 25, 2019 | pallavi |

ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ 1872 ಮತಗಟ್ಟೆಗಳ ಮತಯಂತ್ರಗಳು ಬುಧವಾರ ಬೆಳಗಿನ ಜಾವದವರೆಗೂ ಕೃಷಿ ವಿವಿಯ ಮತ ಎಣಿಕೆ ಕೇಂದ್ರಕ್ಕೆ ತಲುಪಿದವು.

Advertisement

ಬಳಿಕ ಮಧ್ಯಾಹ್ನದವರೆಗೂ ಅವುಗಳನ್ನು ಭದ್ರತಾ ಕೊಠಡಿಯಲ್ಲಿರಿಸಿ ಬೀಗಮುದ್ರೆ ಹಾಕುವ ಕಾರ್ಯ ಕೇಂದ್ರ ಚುನಾವಣಾ ಆಯೋಗದ ವೀಕ್ಷಕ ಭಾನುಪ್ರಕಾಶ ಏಟೂರು ಹಾಗೂ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ್‌ಗಳ ಸಮ್ಮುಖದಲ್ಲಿ ಜರುಗಿತು. ಲೋಕಸಭಾ ಕ್ಷೇತ್ರವ್ಯಾಪ್ತಿ ಎಂಟೂ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕವಾಗಿ ಭದ್ರತಾ ಕೊಠಡಿಯಲ್ಲಿರಿಸಲಾಗಿದೆ. ಈ ಕೊಠಡಿಗಳ ಪಕ್ಕದಲ್ಲಿಯೇ

ಆಯಾ ಕ್ಷೇತ್ರಗಳ ಮತ ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದೆ. ಚುನಾವಣೆ ಕಾರ್ಯಕ್ಕೆ ಒಟ್ಟು 2208 ಕಂಟ್ರೋಲ್ ಯೂನಿಟ್‌ಗಳು, 2820 ವಿವಿಪ್ಯಾಟ್‌ಗಳು, 4408 ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಿಕೊಳ್ಳಲಾಗಿದ್ದು, ಮತದಾನ ನಂತರ ಕರ್ತವ್ಯನಿರತ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿದ್ದ ಡಿಮಸ್ಟರಿಂಗ್‌ ಕೇಂದ್ರಗಳಿಗೆ ಮತಯಂತ್ರಗಳನ್ನು ತಲುಪಿಸಿದರು. ಡಿಮಸ್ಟರಿಂಗ್‌ ಕೇಂದ್ರಗಳಿಂದ ಕೃಷಿ ವಿವಿಯ ಮತಎಣಿಕಾ ಕೇಂದ್ರಕ್ಕೆ ಸೂಕ್ತ ಭದ್ರತೆಯೊಂದಿಗೆ ಮತಯಂತ್ರಗಳನ್ನು ಕಳುಹಿಸಿ ಕೊಡಲಾಯಿತು. ಬುಧವಾರ ಬೆಳಗಿನ ಜಾವ 3:00 ಗಂಟೆಯಿಂದ 6:00 ಗಂಟೆಯವರೆಗೂ ಕೃಷಿ ವಿಶ್ವವಿದ್ಯಾಲಯಕ್ಕೆ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಂದ ಮತಯಂತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆಯಿತು. ಮತಯಂತ್ರಗಳನ್ನು ಭದ್ರತಾ ಕೊಠಡಿಗಳಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು. ಮೇ 23ರಂದು ಮತಎಣಿಕೆ ಕಾರ್ಯ ನಡೆಯಲಿದೆ. ಅಲ್ಲಿಯವರೆಗೂ ಭದ್ರತಾ ಕೊಠಡಿಗಳಿಗೆ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬಿಗಿಭದ್ರತೆ

ಕೃಷಿ ವಿವಿಯಲ್ಲಿ ಇರಿಸಲಾಗಿರುವ ಮತಯಂತ್ರಗಳಿಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಬರುವ ಮೇ 23ರವರೆಗೆ ಇವುಗಳ ಪಹರೆಗೆ ಹಿರಿಯ ಅಧಿಕಾರಿಗಳು, ಪೊಲೀಸ್‌, ಅರೆಸೇನಾಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ದಿನ ಮೂರು ಸರದಿಗಳಲ್ಲಿ ಇವರು ಕಾರ್ಯ ನಿರ್ವಹಿಸಲಿದ್ದಾರೆ. ಅಭ್ಯರ್ಥಿಗಳು-ಏಜೆಂಟರು ಕೂಡಾ ಮತ ಎಣಿಕೆ ಕೇಂದ್ರಕ್ಕೆ ನಿರಂತರ ಭೇಟಿ ನೀಡಿ ಭದ್ರತಾ ವ್ಯವಸ್ಥೆ ವೀಕ್ಷಿಸಬಹುದು. ಭದ್ರತಾ ಕಾರ್ಯ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next