ಭಾಲ್ಕಿ: ಮುಂಗಾರು ಮಳೆ ಕೊರತೆಯಿಂದ ಕಂಗಾಲಾಗಿದ್ದ ತಾಲೂಕಿನ ರೈತರಿಗೆ, ಹಿಂಗಾರು ಬೆಳೆಯನ್ನಾದರೂ ಬೆಳೆಯಬಹುದು ಎನ್ನುವ ನಿರೀಕ್ಷೆಯೂ ಹುಸಿಯಾಗಿದ್ದು, ದಿಕ್ಕು ತೋಚದ ಸ್ಥಿತಿ ಎದುರಾಗಿದೆ.
ತಾಲೂಕಿನ ಬಹುತೇಕ ಕಡೆ ಹಿಂಗಾರು ಬೆಳೆಗೆ ಬೇಕಾಗುವಷ್ಟು ಮಳೆ ಬಾರದೇ ಭೂಮಿ ತೇವಗೊಂಡಿಲ್ಲ. ಖಟಕಚಿಂಚೋಳಿ ಹೋಬಳಿ ವ್ಯಾಪ್ತಿಯ ಏಣಕೂರ, ಡಾವರಗಾಂವ, ಬರದಾಪೂರ, ಭಾಗ್ಯನಗರ, ಕುರುಬಖೇಳಗಿ, ನಾವದಗಿ. ಭಾತಂಬ್ರಾ ಹೋಬಳಿಯ ಸಾಯಗಾಂವ, ಲಖಣಗಾಂವ, ಕಾಕನಾಳ, ಶಿವಣಿ, ಕಾಸರತೂಗಾಂವ, ಹಲಬರ್ಗಾ ಹೋಬಳಿಯ ಕೋಣ ಮೆಳಕುಂದಾ, ಧನ್ನೂರ(ಎಸ್), ನಿಟ್ಟೂರ(ಬಿ) ಸೇರಿದಂತೆ ತಾಲೂಕಿನ ಸುಮಾರು ಗ್ರಾಮಗಳಲ್ಲಿ ಕಪ್ಪು ಮಣ್ಣಿನ ಹೊಲಗಳಿದ್ದು, ಈ ಹೊಲಗಳಿಗೆ
ವಾರಕ್ಕೊಮ್ಮೆಯಾದರೂ ನೀರಿನ ಅವಶ್ಯಕತೆ ಇದೆ.
ಬಹುದಿನಗಳಿಂದ ಮಳೆ ಬೀಳದಿರುವುದರಿಂದ ಬಿತ್ತಿದ ಬಿಳಿಜೋಳ ಮೊಳಕೆ ಒಡೆದಿಲ್ಲ. ಮತ್ತು ಬೆಳೆದು ನಿಂತ ಕಡಲೆ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಅಲ್ಲದೇ ಮುಂಗಾರಿನಲ್ಲಿ ಬಿತ್ತಿದ ತೊಗರಿ ಬೆಳೆ ಸಂಪೂರ್ಣ ಒಣಗುತ್ತಿದೆ. ಮಳೆ ಇಲ್ಲದ ಕಾರಣ ನಮಗೆ ತುಂಬಾ ತೊಂದರೆಯಾಗಿದೆ. ದಿಕ್ಕು ತೋಚದಂತಹ ಸ್ಥಿತಿಯಲ್ಲಿದ್ದೇವೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಕೃಷಿ ಕೆಲಸಕ್ಕೆಂದೇ ರೈತರು ಬೇರೆ, ಬೇರೆ ಕಡೆ ಸಾಲ ಮಾಡಿರುತ್ತಾರೆ. ಇಂತಿಷ್ಟು ಅವಧಿಯಲ್ಲಿ ತೀರಿಸಬೇಕಾದ ಜವಾಬ್ದಾರಿ ಇರುತ್ತದೆ.
ಆದರೆ ಸಕಾಲಕ್ಕೆ ಮಳೆಯಾಗಿ ಬೆಳೆ ಬಂದರೆ ಆರ್ಥಿಕ ಸಮಸ್ಯೆ ಇರುವುದಿಲ್ಲ. ಬೇರೆ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ ಪ್ರಗತಿಪರ ರೈತ ಅಂಬೆಸಾಂಗವಿ ಗ್ರಾಮದ ಸುನೀಲ ಮಾನಕಾರಿ. ಕೆಲವು ರೈತರು ತಮ್ಮ ಹೊಲದಲ್ಲಿರುವ ಕೊಳವೆ ಬಾವಿ ಮತ್ತು ತೆರೆದ ಬಾವಿಯಲ್ಲಿರುವ ನೀರು ಬಿಳಿಜೋಳ, ತೊಗರಿ ಮತ್ತು ಕಡಲೆಗೆ ಹರಿಸಿ ಅಲ್ಪಸ್ವಲ್ಪ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಬಾವಿ ಇಲ್ಲದ ರೈತರ ಸ್ಥಿತಿ ಹೇಳತೀರದಂತಾಗಿದೆ ಎನ್ನುತ್ತಾರೆ ನಾವದಗಿ ಗ್ರಾಮದ ರೈತ ರಾಜಪ ಬೆಲೂರೆ.
ಪಸಕ್ತ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಗುರಿ 31,950 ಹೆಕ್ಟೇರ್ ಆಗಿದ್ದು, ಇದುವರೆಗೆ 7,500 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನ ಮಳೆ ಕೊರತೆಯಿಂದ ಶೇ.20 ಬಿತ್ತನೆ ಮಾತ್ರ ಮಾಡಲಾಗಿದೆ. ಇದರಲ್ಲಿ ಬಿಳಿಜೋಳ 500 ಹೆಕ್ಟೇರ್, ಕಡಲೆ ಮತ್ತು ಕುಸುಬಿ 5,500 ಹೆಕ್ಟೇರ್ ಬಿತ್ತನೆ ಮಾತ್ರ ನಡೆದಿದೆ. ಹಿಂಗಾರು ಹಂಗಾಮಿನ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಿರ್ಧಿಷ್ಠ ಗುರಿಯಂತೆ 272 ಎಂ.ಎಂ. ಮಳೆಯಾಗಬೇಕಿತ್ತು. ಆದರೆ ಬರೀ 39 ಎಂ.ಎಂ. ಮಳೆ ಮಾತ್ರ ಆಗಿದೆ. ಒಟ್ಟು ಶೇ. 86 ಮಳೆ ಕೊರತೆಯಾಗಿದೆ. ಹೀಗಾಗಿ ಬಿತ್ತನೆ ಗುರಿ ಕ್ಷೀಣಿಸಿದೆ ಎನ್ನುವುದು ಕೃಷಿ ಇಲಾಖೆಯ ಮಾಹಿತಿ.
ಜಿಲ್ಲೆಯ ಐದು ತಾಲೂಕುಗಳಲ್ಲಿ ಭಾಲ್ಕಿ ತಾಲೂಕಿನಲ್ಲಿಯೇ ಹೆಚ್ಚಿನ ಮಳೆ ಕೊರತೆ ಇದೆ. ಆದರೆ ಜಿಲ್ಲಾಡಳಿತ ಮತ್ತು ಇಲ್ಲಿಯ ಜನಪ್ರತಿನಿಧಿಗಳು ಭಾಲ್ಕಿ ತಾಲೂಕನ್ನು ಬರ ಪಟ್ಟಿಗೆ ಸೇರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ.
ಜಯರಾಜ ದಾಬಶೆಟ್ಟಿ