Advertisement
2000ರಿಂದ ಇಲ್ಲಿವರೆಗೆ ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ಅರ್ಜಿದಾರರಾದ ಎಂ.ನಾಗರಾಜ್, ಬಿ.ಕೆ.ಪವಿತ್ರ ಮತ್ತಿತರರ ನಡುವೆ ವಿವಿಧ ಹಂತಗಳಲ್ಲಿ ನಡೆದ ಕಾನೂನು ಹೋರಾಟಕ್ಕೆ ಸುಪ್ರಿಂಕೋರ್ಟ್ ಮೇ 10ರಂದು ಅಂತಿಮ “ಷರಾ’ ಬರೆದಿದೆ. ಆದರೆ, ಈ ತೀರ್ಪು ಪ್ರಶ್ನಿಸಿ ಅರ್ಜಿದಾರರು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಅವಕಾಶ ಇನ್ನೂ ಮುಕ್ತವಾಗಿದೆ.
Related Articles
Advertisement
ಈ ಮಧ್ಯೆ, 1995ರಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ 77ನೇ ತಿದ್ದುಪಡಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕಾಲಮಿತಿ ಇಲ್ಲ ಎಂಬ ಬಗ್ಗೆ 81ನೇ ತಿದ್ದುಪಡಿ, ಅದೇ ರೀತಿ ಎಸ್ಸಿ, ಎಸ್ಟಿಗಳ ನೇಮಕಾತಿ ವೇಳೆ ವಯಸ್ಸು, ಶುಲ್ಕ ಇತ್ಯಾದಿಗಳಿಗೆ ಸಡಿಲಿಕೆ ತರುವ ಸಂಬಂಧ 82ನೇ ತಿದ್ದುಪಡಿ ತರಲಾಯಿತು. ಈ ನಾಲ್ಕು ತಿದ್ದುಪಡಿಗಳ “ಸಾಂವಿಧಾನಿಕ ಮಾನ್ಯತೆ’ ಹಾಗೂ ಕರ್ನಾಟಕ ಸರ್ಕಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ 2002ರಲ್ಲಿ ಜಾರಿಗೆ ತಂದಿದ್ದ ಕಾಯ್ದೆ ಪ್ರಶ್ನಿಸಿ, 2006ರಲ್ಲಿ ಎಂ.ನಾಗರಾಜ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂಕೋರ್ಟ್ ನಾಲ್ಕೂ ತಿದ್ದುಪಡಿಗಳು ಸರಿ ಇದೆ ಎಂದು ಹೇಳಿತ್ತು. ಜೊತೆಗೆ, ರಾಜ್ಯ ಸರ್ಕಾರದ 2002ರ ಕಾಯ್ದೆ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿ, ಅರ್ಜಿಯನ್ನು ಹೈಕೋರ್ಟ್‌ಗೆ ಕಳಿಸಿಕೊಟ್ಟಿತ್ತು. ರಾಜ್ಯ ಸರ್ಕಾರದ ಕಾಯ್ದೆ ಸರಿ ಇದೆ ಎಂದು 2010ರಲ್ಲಿ ಹೈಕೋರ್ಟ್ ತೀರ್ಪು ನೀಡಿತು. ಈ ಮಧ್ಯೆ, ಪ್ರಕರಣದ ತೀರ್ಪಿನಲ್ಲಿ ಬಡ್ತಿ ಮೀಸಲಾತಿ ನೀಡುವಾಗ “ಹಿಂದುಳಿವಿಕೆ, ಪ್ರಾತಿನಿಧ್ಯ ಹಾಗೂ ದಕ್ಷತೆ’ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಮಾನದಂಡಗಳನ್ನು ನಿಗದಿಪಡಿಸಿತ್ತು,
ಈ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಬಿ.ಕೆ.ಪವಿತ್ರ ಎಂಬುವರು ಸುಪ್ರೀಂಕೋರ್ಟ್‌ಗೆ ಮೊರೆ ಹೋದರು. 2017ರಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 2002ರ ರಾಜ್ಯ ಸರ್ಕಾರದ ಕಾಯ್ದೆಯನ್ನು ರದ್ದುಪಡಿಸಿ, ತೀರ್ಪು ನೀಡಿತು. 2002ರ ಕಾಯ್ದೆ ರದ್ದುಗೊಂಡ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಟಿ ನೌಕರರಿಗೆ ಬಡ್ತಿ ಮೀಸಲಾತಿಯಲ್ಲಿ ಆಗುವ ಅನ್ಯಾಯ ಸರಿದೂಗಿಸಲು 2017ರಲ್ಲಿ ರಾಜ್ಯ ಸರ್ಕಾರ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು. ಇದಕ್ಕೂ ಮೊದಲು, ಆಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿತ್ತು.
ಜತೆಗೆ, ಎಸ್ಸಿ, ಎಸ್ಟಿ ನೌಕರರ ಹಿಂದುಳಿವಿಕೆ, ಪ್ರಾತಿನಿಧ್ಯ, ಹಾಗೂ ದಕ್ಷತೆ’ ಕುರಿತು ಪರಿಶೀಲನೆ ನಡೆಸಿ, ವರದಿ ನೀಡಲು ಐಎಎಸ್ ಅಧಿಕಾರಿ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿ ಆಧರಿಸಿ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರದ ಕಾಯ್ದೆ ಎತ್ತಿ ಹಿಡಿದು, ಸುಪ್ರಿಂಕೋರ್ಟ್ ತೀರ್ಪು ಕೊಟ್ಟಿದೆ.
ಇದೊಂದು ಐತಿಹಾಸಿಕ ತೀರ್ಪು. ಸಿದ್ದರಾಮಯ್ಯ ಸರ್ಕಾರಕ್ಕೆ ನಾನು ಕೊಟ್ಟ ವರದಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ. ಇದು ದೇಶದ ಎಲ್ಲ ನೌಕರರಿಗೂ ಅನ್ವಯವಾಗಲಿದೆ. ಈ ವಿಷಯದಲ್ಲಿ ಸರ್ಕಾರದ ಪ್ರಯತ್ನ ಮತ್ತು ಕಠಿಣ ಶ್ರಮ ಫಲ ನೀಡಿದೆ. -ರತ್ನಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿ. ಸುಪ್ರೀಂಕೋರ್ಟ್ ತೀರ್ಪಿನಿಂದ ನಮಗೆ ಹಿನ್ನಡೆಯಾಗಿದೆ. ತೀರ್ಪಿನ ಅಧಿಕೃತ ಪ್ರತಿ ಕೈಗೆ ಸಿಕ್ಕ ಬಳಿಕ ವಕೀಲರೊಂದಿಗೆ ಸಮಾಲೋಚನೆ ನಡೆಸಿ, ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು.
-ಬಿ.ಕೆ.ಪವಿತ್ರ, ಮೇಲ್ಮನವಿದಾರ. ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವಾಗತಿಸುತ್ತೇವೆ. ರತ್ನಪ್ರಭಾ ವರದಿಯನ್ನು ಸುಪ್ರೀಂಕೋರ್ಟ್ ಶ್ಲಾ ಸಿದೆ. ರಾಜ್ಯ ಸರ್ಕಾರ ತಕ್ಷಣವೇ ಸುಪ್ರೀಂಕೋರ್ಟ್ ಆದೇಶದಂತೆ ಮುಂಬಡ್ತಿ ನೀಡಿ ಎಲ್ಲ ವರ್ಗದ ಹಿತ ಕಾಯಬೇಕು. ನಮ್ಮ ಪರವಾಗಿ ವಾದ ಮಾಡಿರುವ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸುತ್ತೇವೆ.
-ಶಿವಶಂಕರ್, ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಇದು ನಮಗೆ ವಿರುದ್ಧವಾಗಿದೆ. ಸುಪ್ರೀಂಕೋರ್ಟ್‌ನ ಪೂರ್ಣ ಆದೇಶ ಪಡೆದು, ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ. ನಮಗೆ ಅನ್ಯಾಯವಾಗಿರುವುದರಿಂದ ಎಲ್ಲ ರೀತಿಯ ಹೋರಾಟ ನಡೆಸುತ್ತೇವೆ.
-ಎಂ.ನಾಗರಾಜ್, ಅಹಿಂಸಾ ಸಂಘಟನೆ ಅಧ್ಯಕ್ಷ.