Advertisement

ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಸಿಲ್ಲ

11:06 AM Apr 12, 2019 | Team Udayavani |

ಅರಸೀಕೆರೆ: ಕೇಂದ್ರದ ನರೇಂದ್ರ ಮೋದಿ ಸರ್ಕಾರ 5ವರ್ಷದ ಅವಧಿಯಲ್ಲಿ ಜನರಿಗೆ ಕೊಟ್ಟ ಯಾವುದೇ ಭರವಸೆಯನ್ನು ಈಡೇರಿಸದೆ ನಂಬಿಕೆ ದ್ರೋಹವೆಸಗಿದ್ದಾರೆ. ಈ ದೇಶ ಕಂಡ ಮಹಾನ್‌ ಸುಳ್ಳುಗಾರ ನರೇಂದ್ರ ಮೋದಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಾ ಪ್ರಹಾರ ನಡೆಸಿದರು.

Advertisement

ತಾಲೂಕಿನ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಸನ ಲೋಕಸಭೆ ಕ್ಷೇತ್ರದ ಮೈತ್ರಿಪಕ್ಷದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಮತ ಯಾಚನೆ ಮಾಡಿ ಗುರುವಾರ ಮಾತನಾಡಿದರು.

ಲೂಟಿಕೋರರಿಗೆ ಅಚ್ಚೇದಿನ್‌: ಅಚ್ಚೇದಿನ್‌ ಆಯೇ ಗಾ ಎಂದು ಹೇಳಿದ್ದರು ಅಚ್ಚೇದಿನ್‌ ರೈತರಿಗೆ ಬಡವರಿಗೆ, ದೀನದಲಿತರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಬರಲೇ ಇಲ್ಲ. ಅದು ಬಂದಿದ್ದು ಶ್ರೀಮಂತ ರಾದ ನೀರವ್‌ ಮೋದಿ, ವಿಜಯ್‌ ಮಲ್ಯ, ಅಂಬಾನಿ ಅಂತಹವರಿಗೆ ಎಂದು ವ್ಯಂಗ್ಯವಾಡಿದರು.

ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಸಂವಿಧಾನವನ್ನು ಬದಲಾಯಿಸಲು ತಾವು ಬಂದಿರುವುದಾಗಿ ಹೇಳುತ್ತಾ ಡಾ.ಅಂಬೇಡ್ಕರ್‌ ನೀಡಿರುವ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲಾ ಸಮುದಾಯ, ಎಲ್ಲಾ ಧರ್ಮದವರಿಗೆ ಸಮಾನ ಅವಕಾಶವನ್ನು ನೀಡಿದ್ದು, ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಎಲ್ಲರಿಗೂ ಅಧಿಕಾರವನ್ನು ನೀಡಿದೆ ಇದನ್ನು ಬದಲಾಯಿಸಲು ಹೊರಟಿರುವ ಬಿಜೆಪಿ ಅಭ್ಯರ್ಥಿಗಳನ್ನು ಮನೆಗೆ ಕಳುಹಿಸದಿದ್ದರೆ ಮುಂದೆ ನರೇಂದ್ರ ಮೋದಿ ಒಬ್ಬ ಸರ್ವಾಧಿಕಾರಿಯಾಗಿ ಬೆಳೆಯುವುದರಲ್ಲಿ
ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಸಿದರು.

ಶ್ರೀಮಂತರ ಸಾಲ ಮನ್ನಾ: ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಲಿಲ್ಲ. ಬದಲಾಗಿ ಕೆಲವು ಶ್ರೀಮಂತ ಕುಳಗಳ ಮೂರೂವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಲಿಲ್ಲ ನಾನು ಸಹಕಾರ ಸಂಘಗಳ 50 ಸಾವಿರ ರೂ. ಸಾಲಮನ್ನಾ ಮಾಡಿದೆ ಎಚ್‌. ಡಿ.ಕುಮಾರಸ್ವಾಮಿ 45ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕ್‌ ಗಳ ಸಾಲಮನ್ನಾ ಮಾಡಲು ಹೊರಟಿದ್ದಾರೆ ಪ್ರತಿಯೊಬ್ಬರಿಗೆ 7ಕೇಜಿ ಅಕ್ಕಿಯನ್ನು ನಾನು ಕೊಟ್ಟೆ ಬಡವರಿಗೆ ಕಡಿಮೆ ದುಡ್ಡಿನಲ್ಲಿ ಊಟ ಸಿಗಬೇಕೆಂದು ಇಂದಿರಾ ಕ್ಯಾಂಟಿನ್‌ ಮಾಡಿದೆ. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌,ಸದಾನಂದ ಗೌಡ ರೈತ ಸಾಲ ಮನ್ನಾ ಮಾಡಿದ್ದಾರೆಯೇ,ಅಕ್ಕಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

Advertisement

ಕೋಮುವಾದಿಗಳನ್ನು ಸೋಲಿಸಿ: ಕೋಮುವಾದಿ ಭಾರತೀಯ ಜನತಾ ಪಕ್ಷವನ್ನು ಈ ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಛಲದೊಂದಿಗೆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಪ್ರಜ್ವಲ್‌ ರೇವಣ್ಣವರನ್ನು ಭಾರೀ ಬಹುಮತಗಳಿಂದ ಜಯಗಳಿಸಲು ತಾವುಗಳೆಲ್ಲಾ ಒಮ್ಮತದಿಂದ ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ
ಸಿದ್ಧರಾಮಯ್ಯ ವಿನಂತಿಸಿದರು.

ಎ.ಮಂಜು ವಿರುದ್ಧ ವಾಗ್ಧಾಳಿ: ಎ.ಮಂಜು ಅವರೇ ನಿಮ್ಮನ್ನು ಶಾಸಕನಾಗಿ, ಮಂತ್ರಿಯನ್ನಾಗಿ ಮಾಡಿದ್ದು ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿಯವರ ಕಾಂಗ್ರೆಸ್‌ ಪಕ್ಷ,  ಈಗ ಪಕ್ಷಕ್ಕೆ ದ್ರೋಹ ಬಗೆದು ದೇಶವನ್ನು ಹಾಳು ಮಾಡಲು ಹೊರಟಿರುವ ನರೇಂದ್ರ ಮೋದಿಯನ್ನು ಪ್ರಧಾನಿ ಮಂತ್ರಿ ಮಾಡಲು
ಹೊರಟಿದ್ದೀರಿ ಎ.ಮಂಜು ನಿನಗೆ ನನ್ನ ಧಿಕ್ಕಾರವಿರಲಿ ದಯಾಮಾಡಿ ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ಬಿಜೆಪಿಗೆ ಎ.ಮಂಜುಗೆ ಮತ ನೀಡಬೇಡಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರಿಗೆ ಮತನೀಡಿ ಎಂದು ಮತದಾರಲ್ಲಿ ವಿನಂತಿಸಿಕೊಂಡರು.

ಮೈತ್ರಿ ಸರ್ಕಾರ ಭರವಸೆ ಈಡೇರಿಸಿದೆ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮಾತನಾಡಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎಚ್‌.
ಡಿ.ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಸಾಲ ಮನ್ನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನ ಕಾರ್ಯಗತಕ್ಕೆ ತರುವ ಜೊತೆಗೆ ಕಳೆದ ಕಾಂಗ್ರೆಸ್‌ ಸರಕಾರದ ಜನಪರ ಯೋಜನೆಗಳನ್ನ ಮುಂದುವರಿಸುವ ಮೂಲಕ ಮೈತ್ರಿ ಧರ್ಮದ ಪಾಲನೆಯ ಜೊತೆಗೆ ನಾಡಿನ ಜನತೆಯ ವಿಶ್ವಾಸ ಉಳಿಸಿ ಕೊಂಡಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ. ಶಿವಲಿಂಗೇ ಗೌಡ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಗಾಯತ್ರಿ ಶಾಂತೇಗೌಡ ,ಮಾಜಿ ಸಚಿವ ಬಿ.ಶಿವರಾಂ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌,ಉಪಾಧ್ಯಕ್ಷ ಮಲ್ಲೇನಹಳ್ಳಿ ಶಿವಶಂಕರ ಸ್ವಾಮಿ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ಶಶಿಧರ್‌, ಜೆಡಿಎಸ್‌ ಮುಖಂಡರಾದ ಬಿಳಿ ಚೌಡಯ್ಯ, ಹನುಮಪ್ಪ, ಮೋಹನ್‌ ಕುಮಾರ್‌, ತಾಪಂ ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next