Advertisement

ವಸತಿ ನಿಲಯ ಸಮಸ್ಯೆ ಪರಿಹಾರಕ್ಕೆ ಭರವಸೆ

01:12 PM Nov 08, 2019 | Suhan S |

ಹಾವೇರಿ: ರಾಜ್ಯದಲ್ಲಿ ವಸತಿ ನಿಲಯಗಳಿಗೆ ಅಗತ್ಯವಿರುವ ನಿವೇಶನಗಳ ಸಮಸ್ಯೆ ನಿವಾರಣೆ ಹಾಗೂ ಮಂಜೂರಾತಿ ಕುರಿತಂತೆ ಶೀಘ್ರವೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ನಿವಾರಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಹಾವೇರಿ ಜಿಲ್ಲೆ ಒಳಗೊಂಡಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟದಲ್ಲಿ ನಡೆಯಬಾರದು. ಖಾಸಗಿ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯಗಳು ನಡೆದರೆ ಮೂಲ ಸೌಕರ್ಯ ಕಲ್ಪಿಸಲು ಕಷ್ಟಸಾಧ್ಯ. ಎಲ್ಲ ವಸತಿ ನಿಲಯಗಳು ಸರ್ಕಾರಿ ಕಟ್ಟಡಗಳಲ್ಲೇ ನಡೆಯಬೇಕು. ಈ ನಿಟ್ಟಿನಲ್ಲಿ ನಿವೇಶನ ಇಲ್ಲದ ವಸತಿ ನಿಲಯಗಳಿಗೆ ನಿವೇಶ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳು ಆದ್ಯತೆ ಗಮನಹರಿಸಬೇಕು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕೋಟ್ಯಾಂತರ ರೂ. ಅನುದಾನ ಒದಗಿಸಲಾಗಿದೆ. ಆದರೆ, ಬಹಳಷ್ಟು ಕಡೆ ನಿವೇಶನ ಸಿಗದೆ ಭವನಗಳು ನಿರ್ಮಾಣವಾಗಿಲ್ಲ. ಅನುದಾನ ಕೊಳೆಯುತ್ತಿದೆ. ನಿವೇಶನ ಸಿಗದೆ ಕಟ್ಟಡ ಆರಂಭಿಸಿದ ಇಂತಹ ಭವನಗಳಿಗೆ ಬಿಡುಗಡೆಯಾದ ಅನುದಾನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇದ್ದರೆ ಪಟ್ಟಿ ಮಾಡಿ ಸಲ್ಲಿಸಿ ಅಥವಾ ಜಿಲ್ಲೆಯಲ್ಲಿ ಬೇರೆಡೆ ಸ್ಥಳಾಂತರಿಸಿ ಪ್ರಸ್ತಾವನೆ ಸಲ್ಲಿಸಿದರೆ ಮಂಜೂರಾತಿ ನೀಡುವುದಾಗಿ ತಿಳಿಸಿದರು.

ರಾಜ್ಯ ವಲಯದಲ್ಲಿ ಜಿಲ್ಲಾ ಪಂಚಾಯತ್‌ ಅಧೀನ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ಹೆಚ್ಚುವರಿ ಆಗಿದ್ದರೆ ಖರ್ಚು ಮಾಡುವ ಇಲಾಖೆಗೆ ಮರು ಹೊಂದಾಣಿಕೆ ಮಾಡಿಕೊಳ್ಳಿ. ಈ ಕುರಿತು ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು ಎಂದರು. ವಿದ್ಯಾರ್ಥಿ ನಿಲಯಗಳ ಸಮರ್ಪಕ ನಿರ್ವಹಣೆ ಮಾಡದ ಸ್ವತ್ಛತೆ, ಮೂಲಸೌಕರ್ಯ ಕಲ್ಪಿಸಲು ವಿಫಲವಾದ ಕಾವಲುಗಾರರು, ತಾಲೂಕು ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಅಂತಹ ಅಧಿಕಾರಿಗಳನ್ನು ಹೊರಹಾಕಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಇತರ ಇಲಾಖಾ ಅಧಿಕಾರಿಗಳು ತಮ್ಮ ಜಿಲ್ಲಾ ಪ್ರವಾಸ ವೇಳೆಯಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ಮಾಡಿ ಕಡ್ಡಾಯವಾಗಿ ಊಟ ಮಾಡಿ ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ನಿಲಯಗಳ ಎಸ್‌ಎಸ್‌ ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮವಹಿಸಿ, ಇಂಗ್ಲಿಷ್‌, ವಿಜ್ಞಾನ, ಗಣಿತ ವಿಷಯಗಳ ವಿಶೇಷ ಬೋಧನೆಗೆ ನಿವೃತ್ತ ಶಿಕ್ಷಕರ ನೇಮಕಕ್ಕೆ ಸಲಹೆ ನೀಡಿದರು. ಪರಿಶಿಷ್ಟ ವರ್ಗದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಗಣಕಯಂತ್ರ, ನರ್ಸಿಂಗ್‌, ಪ್ಯಾರಾಮೆಡಿಕಲ್‌, ಪ್ರಿಂಟಿಂಗ್‌ ನಂತಹ ಕೌಶಲ್ಯಾಧಾರಿತ ತರಬೇತಿಗೆ ಸೂಕ್ತ ವ್ಯವಸ್ಥೆ ಮಾಡಿ ತರಬೇತಿಗೆ ಬೇಕಾದ ಅಗತ್ಯ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

Advertisement

ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ಪದವಿ ಶಿಕ್ಷಣ ಮುಂದುವರಿಸಿದ್ದಾರಾ ಎಂಬುದನ್ನು ಸರ್ವೇಮಾಡಿ. ನಗರದಲ್ಲಿ ವಸತಿ ಸಮಸ್ಯೆ, ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಿದ್ದಾರಾ ಎಂಬುದನ್ನು ಪರಿಶೀಲಿಸಿ ಕಾರಣ ಸಹಿತ ವರದಿ ಸಲ್ಲಿಸಿ. ಈ ಮಕ್ಕಳು ಶಿಕ್ಷಣ ಮುಂದುವರಿಸಲು ಬೇಕಾದ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಇತರ ಸೌಕರ್ಯ ಒದಗಿಸಲು ಇಲಾಖೆಯಿಂದಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಬಹುಪಯೋಗಿ ಕಟ್ಟಡ, ದೇವಾಲಯಗಳು, ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣದಂತಹ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ವಿವಿಧ ಯೋಜನೆಗಳ ಕಲ್ಯಾಣ ಕಾರ್ಯಕ್ರಮಳ ಪ್ರಗತಿಯನ್ನು ಪರಿಶೀಲಿಸಿದರು. ಪ್ರಸಕ್ತ ಆರ್ಥಿಕ ವರ್ಷದ ಐದು ತಿಂಗಳು ಮಾತ್ರ ಬಾಕಿ ಇದೆ. ಬಿಡುಗಡೆಯಾದ ಅನುದಾನವನ್ನು ಕಡ್ಡಾಯವಾಗಿ ಖರ್ಚುಮಾಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ರಮೇಶ ದೇಸಾಯಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಭಾರ ಅಧಿ ಕಾರಿ ರಾಜು ಕೂಲೇರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next