Advertisement

ಹೃದಯಭಾಗದಿಂದಲೇ ಸಬ್‌ಅರ್ಬನ್‌ ಯೋಜನೆಗೆ ಚಾಲನೆ?

01:18 AM Jun 16, 2019 | Lakshmi GovindaRaj |

ಬೆಂಗಳೂರು: ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯನ್ನು ಬೆಂಗಳೂರು ನಗರದ ಹೃದಯ ಭಾಗದಿಂದಲೇ ಆರಂಭಿಸಲು ಚಿಂತನೆ ನಡೆದಿದ್ದು, ಉದ್ದೇಶಿತ ಈ ಮಾರ್ಗವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.

Advertisement

ಈ ಮೊದಲು ಹೀಲಳಿಗೆಯಿಂದ ಯಲಹಂಕ ಮೂಲಕ ದೇವನಹಳ್ಳಿ ಮಧ್ಯೆ ಉಪನಗರ ರೈಲು ಯೋಜನೆಯ ಮೊದಲ ಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರವು ಈ ಮಾರ್ಗವನ್ನು ಕೈಬಿಟ್ಟು, ಸಿಟಿ ರೈಲು ನಿಲ್ದಾಣ- ದೇವನಹಳ್ಳಿ ನಡುವಿನ ಮಾರ್ಗವನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಇದರಿಂದ ಹೆಚ್ಚು ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಮನದಟ್ಟು ಮಾಡಿದೆ.

ಇದಕ್ಕೆ ರೈಲ್ವೆ ಇಲಾಖೆಯಿಂದಲೂ ಪೂರಕ ಸ್ಪಂದನೆ ದೊರಕಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 2019ರ ಜ. 15ರಂದೇ ಈ ಸಂಬಂಧ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅಲ್ಲದೆ, ಈಚೆಗೆ ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ರೈಲ್‌ ಇಂಡಿಯಾ ಟೆಕ್ನಿಕಲ್‌ ಆಂಡ್‌ ಎಕನಾಮಿಕ್ಸ್‌ ಸರ್ವಿಸ್‌ (ರೈಟ್ಸ್‌) ಅಧಿಕಾರಿಗಳೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ,

ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಅಧಿಕಾರಿಗಳು ನಡೆಸಿದ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ಅಷ್ಟಕ್ಕೂ ಪ್ರಧಾನಮಂತ್ರಿ ಕಚೇರಿಯಿಂದಲೂ ಪ್ರಸ್ತುತ ಮಾರ್ಗವನ್ನು ಮರುಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಪರಿಷ್ಕರಿಸಿದ ಮಾರ್ಗ ಪ್ರಸ್ತಾವಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಪೂರಕ ಸ್ಪಂದನೆ; ವಿಶ್ವಾಸ: “ಸಿಟಿ ರೈಲ್ವೆ ನಿಲ್ದಾಣ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಉಪನಗರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾವು ಸಲ್ಲಿಸಿದ ಪ್ರಸ್ತಾವನೆಗೆ ಯಾವುದೇ ತಕರಾರುಗಳು ಬಂದಿಲ್ಲ. ಪ್ರಧಾನಮಂತ್ರಿ ಕಚೇರಿಯಿಂದ ಬಂದ “ಮರುಪರಿಶೀಲನೆ ಪತ್ರ’ಕ್ಕೂ ಈ ಪ್ರಸ್ತಾವನೆ ಪೂರಕವಾಗಿದೆ. ಏಕೆಂದರೆ, ಈಗಾಗಲೇ ಹೀಲಳಿಗೆ-ದೇವನಹಳ್ಳಿ ಮಾರ್ಗದಲ್ಲಿ ಮೆಟ್ರೋ ಹಾದುಹೋಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರಸ್ತಾವನೆಗೆ ಪೂರಕವಾಗಿ ಯೋಜನೆ ಕೈಗೆತ್ತಿಕೊಳ್ಳುವ ವಿಶ್ವಾಸ ಇದೆ’ ಎಂದು ಡಿಯುಎಲ್‌ಟಿ ಆಯುಕ್ತ ವಿ. ಪೊನ್ನುರಾಜ್‌ ತಿಳಿಸಿದರು.

Advertisement

“ನಮ್ಮ ಮೆಟ್ರೋ’ ಯೋಜನೆ ಅಡಿ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಿರುವ ಮಾರ್ಗವು ಸೆಂಟ್ರಲ್‌ ಸಿಲ್ಕ್ ಬೋರ್ಡ್‌- ಕೆ.ಆರ್‌. ಪುರ- ಹೆಬ್ಬಾಳ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಬರಲಿದೆ. ಆದರೆ, ಹೆಬ್ಬಾಳದಿಂದ ನಗರದ ನಡುವೆ ಸಂಪರ್ಕ ಕಲ್ಪಿಸುವ ಯಾವುದೇ ರೈಲ್ವೆ ಅಥವಾ ಮೆಟ್ರೋದಂತಹ ಸಮೂಹ ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ದಕ್ಷಿಣ, ಕೇಂದ್ರ ಭಾಗದ ಜನ ವಂಚಿತರಾಗಲಿದ್ದಾರೆ. ಅಷ್ಟಕ್ಕೂ ಕೂಡಿಗೇಹಳ್ಳಿಯಿಂದ ದೇವನಹಳ್ಳಿವರೆಗಿನ 30 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲ್ವೆ ಭೂಮಿ ಲಭ್ಯವಿದೆ. ಯೋಜನೆ ಅನುಷ್ಠಾನವೂ ತ್ವರಿತವಾಗಿ ಆಗಲಿದೆ ಎಂಬ ವಾದ ಅಧಿಕಾರಿಗಳು ಮತ್ತು ಸಾರ್ವಜನಿಕರದ್ದಾಗಿದೆ.

ಸ್ವಾಗತಾರ್ಹ ಬೆಳವಣಿಗೆ: ಸಿಟಿ ರೈಲು ನಿಲ್ದಾಣಕ್ಕಿಂತ ಕೂಡಿಗೇಹಳ್ಳಿಯಿಂದಲೇ ಯೋಜನೆ ಆರಂಭಿಸುವುದು ಉತ್ತಮ. ಯಾಕೆಂದರೆ, ಯೋಜನೆ ಪ್ರಕಾರ ನಗರದ ಹೃದಯಭಾಗದಿಂದ ಕೂಡಿಗೇಹಳ್ಳಿವರೆಗೆ ಉಪನಗರ ರೈಲು ಎತ್ತರಿಸಿದ ಮಾರ್ಗದಲ್ಲಿ ಬರಲಿದೆ. ಕೂಡಿಗೇಹಳ್ಳಿಯಿಂದ ದೇವನಹಳ್ಳಿಗೆ ನೆಲಮಟ್ಟದಿಂದ ಸಾಗುತ್ತದೆ. ಈಗಾಗಲೇ ಲಭ್ಯ ಇರುವ ಭೂಮಿಯಲ್ಲಿ ಮಾರ್ಗ ನಿರ್ಮಾಣ ಸಾಧ್ಯವಾದರೆ, ಹತ್ತಿರದ ಯಶವಂತಪುರ ಮತ್ತೂಂದು ಕಡೆ ಇರುವ ಚನ್ನಸಂದ್ರ ಎರಡೂ ಕಡೆಯಿಂದ ರೈಲು ಸೇವೆ ಒದಗಿಸಬಹುದು ಎಂದು ಪ್ರಜಾರಾಗ್‌ ಸಂಸ್ಥೆಯ ಸದಸ್ಯ ಸಂಜೀವ್‌ ದ್ಯಾಮಣ್ಣವರ ಅಭಿಪ್ರಾಯಪಟ್ಟರು.

ದೇವನಹಳ್ಳಿ ಮಾರ್ಗದಲ್ಲಿ ರೈಲುಗಳ ಸಂಚಾರ ವಿರಳವಾಗಿದೆ. ಈ ಹಳಿಯು ವಿಮಾನ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಿದೆ. ನಿಲ್ದಾಣದ ನಿಗಮ ಕೂಡ ಭೂಮಿ ನೀಡಲು ಒಪ್ಪಿದೆ. ಅಲ್ಲದೆ, ನಗರದ ಬಹುತೇಕ ಜನ ಮೆಜೆಸ್ಟಿಕ್‌ಗೆ ಬಂದು ಹೋಗುತ್ತಾರೆ. ಬೇರೆ ಊರುಗಳಿಂದ ಬರುವವರೂ ಹೃದಯಭಾಗದಲ್ಲೇ ಬಂದಿಳಿಯುತ್ತಾರೆ. ಜಯನಗರ, ಬನಶಂಕರಿ, ವಿಜಯನಗರ, ಯಶವಂತಪುರ, ರಾಜಾಜಿನಗರ ಸೇರಿದಂತೆ ಹತ್ತಾರು ಭಾಗದ ಜನರಿಗೆ ಅನುಕೂಲ ಆಗಲಿದೆ ಎಂದು ಮೆಟ್ರೋ-ಉಪನಗರ ಪ್ರಯಾಣಿಕರ ಸಂಘದ ಅಧ್ಯಕ್ಷ ಪ್ರಕಾಶ್‌ ಮಂಡೂತ್‌ ತಿಳಿಸಿದರು.

ಎಮು ರೈಲು ಸೂಕ್ತ: ಪ್ರಸ್ತುತ ಮೆಮು (ಮೇನ್‌ಲೈನ್‌ ಎಲೆಕ್ಟ್ರಿಕಲ್‌ ಮಲ್ಟಿಪಲ್‌ ಯೂನಿಟ್‌) ರೈಲುಗಳ ಸೇವೆ ಇದೆ. ಆದರೆ, ಇದಕ್ಕಿಂತ ಎಮು (ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌) ರೈಲು ಸೇವೆ ಸೂಕ್ತ ಹಾಗೂ ಈ ಮಾದರಿಯ ರೈಲುಗಳನ್ನೇ ಉಪನಗರ ರೈಲು ಯೋಜನೆಯಡಿ ಕಲ್ಪಿಸಬೇಕು ಎಂದು ಹೋರಾಟಗಾರರ ಆಗ್ರಹವಿದೆ.

ಮೆಮುಗಿಂತ ಎಮು ರೈಲು ಹೆಚ್ಚು ಸಾಮರ್ಥ್ಯ ಹೊಂದಿದೆ. ಉದಾಹರಣೆಗೆ “ಮೆಮು’ನಲ್ಲಿ ಒಟ್ಟಿಗೆ ಸಾವಿರ ಜನ ಪ್ರಯಾಣಿಸಿದರೆ, ಎಮು ರೈಲಿನಲ್ಲಿ ಒಂದೂವರೆ ಸಾವಿರ ಜನ ಓಡಾಡಬಹುದು. ಎಂಜಿನ್‌ ಕೂಡ ಹೆಚ್ಚು ಪವರ್‌ಫ‌ುಲ್‌ ಆಗಿರುತ್ತದೆ. ಆದರೆ, ಪ್ರವೇಶದ್ವಾರದಲ್ಲಿ ಮೆಟ್ಟಿಲುಗಳಿರುವುದಿಲ್ಲ. ಹಾಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್‌ಫಾರಂಗಳನ್ನು ತುಸು ಎತ್ತರಿಸಬೇಕಾಗುತ್ತದೆ ಎಂದು ಸಂಜೀವ್‌ ದ್ಯಾಮಣ್ಣವರ ತಿಳಿಸಿದರು.

ಪ್ರಸ್ತುತ ಕಾರಿಡಾರ್‌ಗಳು
-ವೈಟ್‌ಫೀಲ್ಡ್‌-ಬೆಂಗಳೂರು ಸಿಟಿ-ಕೆಂಗೇರಿ
-ಬೆಂಗಳೂರು ಸಿಟಿ-ಯಲಹಂಕ-ರಾಜಾನುಕುಂಟೆ
-ನೆಲಮಂಗಲ-ಮತ್ತಿಕೆರೆ-ಬೈಯಪ್ಪನಹಳ್ಳಿ
-ಹೀಲಳಿಗೆ-ಯಲಹಂಕ-ದೇವನಹಳ್ಳಿ

ರಾಜ್ಯದ ಪ್ರಸ್ತಾವಿತ ಕಾರಿಡಾರ್‌
-ಸಿಟಿ ರೈಲು ನಿಲ್ದಾಣ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
-ಕೆಂಗೇರಿ- ವೈಟ್‌ಫೀಲ್ಡ್‌
-ಬೈಯಪ್ಪನಹಳ್ಳಿ-ಚಿಕ್ಕಬಾಣಾವರ-ತುಮಕೂರು
-ಹೀಲಳಿಗೆ-ರಾಜಾನುಕುಂಟೆ

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next