ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಕಿತ್ತಾಟ ಬಯಲಾಗಿದ್ದು, ಪ್ರಾಧ್ಯಾಪಕರೊಬ್ಬರಿಗೆ ಮತ್ತೊಬ್ಬ ಪ್ರಾಧ್ಯಾಪಕ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ.
ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ ಡಾ.ಜಿ.ಎಂ.ವಿದ್ಯಾಸಾಗರ ಅವರಿಗೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಪಿ. ಮೇಲಕೇರಿ ಕಪಾಳಮೋಕ್ಷ ಮಾಡಿದ್ದಾರೆ. ಸಸ್ಯಶಾಸ್ತ್ರ ವಿಭಾಗದ ಕಚೇರಿಗೆ ಬಂದು ಹಲ್ಲೆ ಮಾಡಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಪ್ರೊ.ಎಸ್.ಪಿ.ಮೇಲಕೇರಿ ಮತ್ತು ಡಾ.ಪ್ರತಿಮಾ ಮಠ ವಿರುದ್ಧ ವಿವಿ ಪೊಲೀಸ್ ಠಾಣೆಯಲ್ಲಿ ಡಾ.ಜಿ.ಎಂ.ವಿದ್ಯಾಸಾಗರ ದೂರು ದಾಖಲಿಸಿದ್ದಾರೆ. ಹಲ್ಲೆಗೆ ಕುಮ್ಮಕ್ಕು ನೀಡಿರುವ ಆರೋಪದಡಿ ಡಾ.ಪ್ರತಿಮಾ ಮಠ ವಿರುದ್ಧ ಕೂಡ ದೂರು ದಾಖಲಾಗಿದೆ. ಡಾ.ಪ್ರತಿಮಾ ಮಠ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾಗಿದ್ದು, ಹಲ್ಲೆ ಮಾಡುವುದರ ಜತೆಗೆ ಜೀವ ಬೆದರಿಕೆ ಹಾಕಿರುವ ಆರೋಪವನ್ನೂ ಡಾ.ವಿದ್ಯಾಸಾಗರ ಮಾಡಿದ್ದಾರೆ.
ಪ್ರೊ.ಮೇಲಕೇರಿ ಅವರ ಸಹೋದರ ಪುತ್ರರೊಬ್ಬರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಪಿಲ್ ಮಾಡುತ್ತಿದ್ದು, ಆತನ ವಿಚಾರದಲ್ಲಿ ಇಬ್ಬರು ಪ್ರಾಧ್ಯಾಪಕರ ನಡುವೆ ಈ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.