ದಾವಣಗೆರೆ: ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಸಮರ್ಪಕ ಕುಡಿಯುವ ನೀರು ಒದಗಿಸಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ಮೆರವಣಿಗೆ ನಡೆಸಿದೆ. ಕೆ.ಬಿ. ಬಡಾವಣೆಯ ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಪಿ.ಬಿ. ರಸ್ತೆ ಮೂಲಕ ತಹಶೀಲ್ದಾರ್ ಕಚೇರಿ ತಲುಪಿ, ರಾಜ್ಯಪಾಲರಿಗೆ ಕಳುಹಿಸಲು ಮನವಿ ಸಲ್ಲಿಸಿದರು.
ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಕೇಂದ್ರ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಲು 1,800 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೆ ರೈತರಿಗೆ ಪರಿಹಾರ ಧನ ನೀಡಲು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ಸಂಪೂರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದರೂ ರೈತರ ಸಣ್ಣ ಪುಟ್ಟ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿ ಆಗಿದ್ದರೂ ಅವರ ನೆರವಿಗೆ ಬರುತ್ತಿಲ್ಲ. ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಬೆಳೆ ಸಿಕ್ಕಿಲ್ಲ. ಮಳೆ ಪ್ರಮಾಣ ಅತೀ ಕಡಮೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಜನ, ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಆದರೂ ರಾಜ್ಯ ಸರ್ಕಾರ ಮೌನವಾಗಿದೆ. ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆಯಿಂದ ಕೈಗೊಂಡಿರುವ ಬೆಳೆನಷ್ಟ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದರು. ಮುಂದಿನ ದಿನಮಾನಗಳಲ್ಲಿ ಇಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಬೇಕು.
ಮಳೆಗಾಲದಲ್ಲಿ ನೀರು ಸಂರಕ್ಷಣೆಗೆ, ಅಂತರ್ಜಲ ವೃದ್ಧಿಗೆ ಒತ್ತುಕೊಡಬೇಕು. ರೈತರಿಗೆ 24 ತಾಸು ಸಮರ್ಪಕ, ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಶೀಘ್ರವಾಗಿ ಬರ ಪರಿಹಾರದ ಹಣ ನೀಡಬೇಕು ಎಂದು ಅವರು ಆಗ್ರಹಿಸಿದರು. ಪಕ್ಷದ ಮುಖಂಡರಾದ ಎಚ್.ಎನ್. ಶಿವಕುಮಾರ್, ಬಿ. ರಮೇಶನಾಯ್ಕ,
ತಾಪಂ ಸದಸ್ಯ ಆಲೂರು ನಿಂಗರಾಜ, ರೈತ ಮೋರ್ಚಾದ ಚನ್ನಬಸಪ್ಪ, ಬೇತೂರು ಬಸವರಾಜ, ಶಿವನಗೌಡ ಟಿ. ಪಾಟೀಲ್, ಸೋಗಿ ಶಾಂತಕುಮಾರ್, ಅಕ್ಕಿ ಪ್ರಭು, ಪಿ.ಸಿ. ಶ್ರೀನಿವಾಸ, ಕೆ. ಹೇಮಂತಕುಮಾರ, ಎ.ಎಂ. ಶಿವಪ್ರಕಾಶ್, ಎಲ್.ಡಿ. ಗೋಣೆಪ್ಪ, ಎಚ್.ಎನ್. ಜಗದೀಶ್, ಎನ್. ಮನು, ಟಿಂಕರ್ ಮಂಜಣ್ಣ, ಕೆ.ಎನ್. ಓಂಕಾರಪ್ಪ, ಆನಂದಪ್ಪ ಮೆರವಣಿಗೆ ನೇತೃತ್ವ ವಹಿಸಿದ್ದರು.