Advertisement
ವರ್ಗಾವಣೆ ಪ್ರಕ್ರಿಯೆ ನಡೆದು ಕೆಲವು ಶಾಲೆಗಳಲ್ಲಿ ಶೂನ್ಯ ಶಿಕ್ಷಕರು ಮತ್ತು ಶಿಕ್ಷಕರ ಭಾರೀ ಕೊರತೆಯ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಭಡ್ತಿ ಪ್ರಕ್ರಿಯೆಗೆ ಸರಕಾರ ಮುಂದಾಗಿರುವುದರಿಂದ ಇಂತಹ ಶಾಲೆಗಳಿಗೆ ಮುಖ್ಯೋಪಾಧ್ಯಾಯರು ಅಥವಾ ಮುಖ್ಯ ಗುರುಗಳು ಶೀಘ್ರವಾಗಿ ಲಭಿಸುವ ನಿರೀಕ್ಷೆಯಿದೆ.
ಆ.18ರಿಂದ 23ರ ವರೆಗೆ ಪ್ರಕಟಿತ ಜ್ಯೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ. 24ರಂದು ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪನಿರ್ದೇಶಕರಿಗೆ ದಾಖಲೆಗಳನ್ನು ಸಲ್ಲಿಸಬೇಕು. ಆ. 25ರಿಂದ 29ರ ವರೆಗೆ ಜ್ಯೇಷ್ಠತಾ ಪಟ್ಟಿಗೆ ಬಂದಿರುವ ಆಕ್ಷೇಪಣೆಗಳನ್ನು ಜಿಲ್ಲಾ ಕಚೇರಿಯಲ್ಲಿ ಪರಿಶೀಲಿಸಿ ಇತ್ಯರ್ಥಪಡಿಸಲು ಸಮಯಾವಕಾಶ ನೀಡಲಾಗಿದೆ. ಆ. 30ಕ್ಕೆ ಅಂತಿಮ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಆ. 31ಕ್ಕೆ ವೃಂದವಾರು ಖಾಲಿ ಹುದ್ದೆಗಳ ಪ್ರಕಟನೆ ನಡೆಯಲಿದೆ.
Related Articles
ವಿಕಲ ಚೇತನ ಅಭ್ಯರ್ಥಿಗಳ ಮೀಸಲಾತಿ ಪ್ರಕ್ರಿಯೆ ಇತ್ಯರ್ಥದ ಬಳಿಕ ಹಾಗೂ ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಬೇಕಿರುವುದರಿಂದ ಉಪನಿರ್ದೇಶಕರು ಭಡ್ತಿ ನೀಡಿ ಸ್ಥಳ ನಿಯುಕ್ತಿ ಆದೇಶ ನೀಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.
Advertisement
ಶಾಲಾ ಶಿಕ್ಷಣ ಇಲಾಖೆಯಲ್ಲಿ ಗ್ರೂಪ್ ಡಿ ಮತ್ತು ಗ್ರೂಪ್ ಸಿ ವೃಂದದ ಹುದ್ದೆಗಳಲ್ಲಿ ಬೋಧಕ ಮತ್ತು ಬೋಧಕೇತರ ವೃಂದದ ಹಲವು ಹುದ್ದೆಗಳಿವೆ. ಇದರಲ್ಲಿ ಶಾಲಾ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಾಲಾ ಶಿಕ್ಷಕರ ಹುದ್ದೆಗಳು ಒಳಗೊಂಡಿರುತ್ತವೆ. ಈ ಹುದ್ದೆಗಳಿಗೆ ಮೀಸಲಾತಿಗೆ ಪರಿಗಣಿಸಬಹುದಾದ ಮತ್ತು ಯಾವ ಅಂಗವೈಕಲ್ಯವುಳ್ಳ ಸಿಬಂದಿಗೆ ಯಾವೆಲ್ಲ ಹುದ್ದೆಗಳನ್ನು ಪರಿಗಣಿಸಬಹುದಾಗಿದೆ ಎಂಬ ಬಗ್ಗೆ ಆಡಳಿತ ಮತ್ತು ಸಿಬಂದಿ ಇಲಾಖೆಗೆ ಪತ್ರ ಬರೆಯಲಾಗಿದೆ. ಸರಕಾರದಿಂದ ಸೂಕ್ತ ನಿರ್ದೇಶನ ಬಂದ ಬಳಿಕ ಭಡ್ತಿ ಕೌನ್ಸೆಲಿಂಗ್ ನಡೆಸಲು ಸೂಚನೆ ನೀಡುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ. ಬಿ. ಕಾವೇರಿ ತಿಳಿಸಿದ್ದಾರೆ.2021ರಲ್ಲಿ 5,600 ಶಿಕ್ಷಕರಿಗೆ ಭಡ್ತಿ ಸಿಕ್ಕಿತ್ತು. ಈ ಬಾರಿ ನಾಲ್ಕರಿಂದ ಐದು ಸಾವಿರ ಶಿಕ್ಷಕರಿಗೆ ಭಡ್ತಿ ಸಿಗುವ ಸಾಧ್ಯತೆಯಿದೆ. 2021ರಲ್ಲಿ ಭಡ್ತಿ ಪ್ರಕ್ರಿಯೆ ನಡೆದಿತ್ತು. ಆ ಬಳಿಕ ಭಡ್ತಿ ಪ್ರಕ್ರಿಯೆ ನಡೆದಿರಲಿಲ್ಲ. ಶಿಕ್ಷಕರ ಭಡ್ತಿ ಪ್ರಕ್ರಿಯೆ ಸಮಯಕ್ಕೆ ಸರಿಯಾಗಿ ನಡೆಯಬೇಕು. ಸೆಪ್ಟಂಬರ್ 5ರೊಳಗೆ ಭಡ್ತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ.
-ಚಂದ್ರಶೇಖರ ನುಗ್ಗಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಭಡ್ತಿ ನಿರೀಕ್ಷೆಯಲ್ಲಿರುವವರಿಗೆ ಅತಂಕ
ಜಿಲ್ಲಾ ಮಟ್ಟದಲ್ಲಿ ಭಡ್ತಿ ಪ್ರಕ್ರಿಯೆ ನಡೆಯುವುದರಿಂದ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಭಡ್ತಿಯ ಮೂಲಕ ಶಿಕ್ಷಕರನ್ನು ವರ್ಗಾಯಿಸುವ ಅವಕಾಶ ಉಪನಿರ್ದೇಶಕರಿಗೆ ಲಭಿಸಿದೆ. ಆದರೆ ಇದು ಭಡ್ತಿ ನಿರೀಕ್ಷೆಯಲ್ಲಿರುವ ಕೆಲವು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ತಮ್ಮನ್ನು ಮೂಲಸೌಲಭ್ಯಗಳಿಲ್ಲದ, ದೂರದ ಶಾಲೆಗೆ ಭಡ್ತಿ ನೀಡಿ ವರ್ಗಾಯಿಸಬಹುದು ಎಂಬುದು ಚಿಂತೆಗೆ ಕಾರಣ.