Advertisement
ಇದು ಜಿಲ್ಲಾ ಕೇಂದ್ರದಿಂದ ಬಹು ದೂರ ಇರುವ ಯಾವುದೋ ಕುಗ್ರಾಮದ ಮನೆಗಳ ಕಥೆಯಲ್ಲ. ಸ್ಮಾರ್ಟ್‌ಸಿಟಿಯಾಗುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆ 10ನೇ ವಾರ್ಡ್‌ನ ಕೆಲ ಮನೆಗಳವರ ಸ್ಥಿತಿ.
Related Articles
Advertisement
ಲಕ್ಷ್ಮೀಬಾಯಿಯ ಮನೆಯ ಗೋಡೆ ಚರಂಡಿ ನೀರಿನ ಸೆಳೆತಕ್ಕೆ ಸಿಕ್ಕು ಹಲವಾರು ಬಾರಿ ಕೊಚ್ಚಿ ಹೋಗಿದೆ. ಅವರಿವರ ಸಹಾಯದಿಂದ ಈಚೆಗೆ ಸಣ್ಣದ್ದಾಗಿ ಗೋಡೆ ಕಟ್ಟಿಕೊಂಡಿರುವ ಅವರು ಪ್ರತಿ ಕ್ಷಣವನ್ನೂ ಆತಂಕದಿಂದಲೇ ಕಳೆಯುತ್ತಿದ್ದಾರೆ. ಏಕೆಂದರೆ ಯಾವುದೇ ಸಂದರ್ಭದಲ್ಲಾದರೂ ಚರಂಡಿ ನೀರು ನುಗ್ಗಿ ಬರೀ ಗೋಡೆಯನ್ನೇ ಮಾತ್ರವಲ್ಲ ಇಡೀ ಮನೆಯನ್ನ ಆಪೋಶನ ತೆಗೆದುಕೊಂಡು ಹೊತ್ತೂಯ್ಯಬಹುದಾದ ಸ್ಥಿತಿ ಇದೆ. ಇದು ಲಕ್ಷ್ಮೀಬಾಯಿಯ ಮನೆಯ ಕಥೆಯೊಂದೇ ಅಲ್ಲ. ಬಸಮ್ಮ, ಅಮೀನಾಬೀ, ಜರೀನಾ ಬೀ ಮುಂತಾದವರ ಮನೆಗಳ ಕಥೆಯೂ ಹೌದು.
ಮಗ ಸತ್ತೇ ಹೋದ!: ಇಲ್ಲಿನ ಮನೆಗಳಿಗೆ ನಿರಾತಂಕವಾಗಿ ಹೋಗಿ ಬರಲು ಅಸಲಿಗೆ ರಸ್ತೆಯೇ ಇಲ್ಲ. ರಾಜಕಾಲುವೆಗೆ ಅಡ್ಡಲಾಗಿ ಹಾಕಲಾಗಿರುವ ಪೈಪ್‌ಗ್ಳೇ ಸಂಪರ್ಕ ದಾರಿ. ಕೆಲವು ದಿನಗಳ ಹಿಂದೆ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ ಲಕ್ಷ್ಮಿಬಾಯಿಯ ಮಗ ಶಿವು… ಎಂಬಾತ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ ಎಂದರೆ ಇಲ್ಲಿ ಎಂತಹ ವಾತಾವರಣ ಇರಬಹುದು ಎಂದು ಲೆಕ್ಕ ಹಾಕಬಹುದು.
ಕೈಗೆ ಬಂದಿದ್ದ ಮಗ ನೀರು ತರುವಾಗ ಪೈಪ್ ಮೇಲೆ ಕಾಲಿಟ್ಟಿದ್ದಾನೆ. ಇದ್ದಕ್ಕಿದ್ದಂಗೆ ಜಾರಿದ್ದಾನೆ. ಪಕ್ಕೆ, ಮುಖ, ತಲೆ… ಬೇರೆ ಕಡೆ ಹೊಡೆತ ಬಿದ್ದು ಸತ್ತೇ ಹೋದ. ಅವನ ಹೆಣ ಹಾಕಿಕೊಳ್ಳಲಿಕ್ಕೂ ಮನೆ ಮುಂದೆ ಜಾಗ ಇರಲಿಲ್ಲ, ಈಗಲೂ ಇಲ್ಲ. ನಾನೊಬ್ಬಳೇ ರಾತ್ರಿಯಿಡೀ ಹೆಣ ಹಾಕ್ಕೊಂಡು ಹಂಗೇ ಕುಂತಿದೀನಿ. ನನ್ ಗಂಡ ಇದೇ ಮನ್ಯಾಗೆ ಸತ್ತು ಹೋದ್ರು. ಈಗ ಮಗನೂ ಸತ್ತು ಹೋದ. ಇಷ್ಟಾದರೂ ಯಾರೂ ಏನು ಸಹಾಯ ಮಾಡಲಿಲ್ಲ. ನಮ್ಮಂತ ಬಡವರು ಬದುಕೋದೇ ತಪ್ಪಾ ಎಂದು ಪ್ರಶ್ನೆ ಕೇಳುವ ಲಕ್ಷ್ಮೀಬಾಯಿಗೆ ಸಂಬಂಧಿತರು ಉತ್ತರ ಕೊಡಬೇಕು.
ಅಲ್ಲಿ ಇಲ್ಲಿ ಹೋಟೆಲ್‌ನಾಗೆ ಕಸ-ಮುಸುರಿ ಕೆಲಸ ಮಾಡ್ಕೊಂಡು, ಇರೋ ಒಬ್ಬ ಮಗನ ಮಖ ನೋಡ್ಕೊಂಡು ಜೀವ್ನ ನಡೆಸಬೇಕಾಗಿದೆ. ಅದನ್ನು, ಇದನ್ನ ಮಾಡುತ್ತೇವೆ ಅಂತಾ ಹೇಳ್ತಾರೆ. ನಮ್ಮಂತ ಬಡವರಿಗೆ ಏನಾದರೂ ಅನುಕೂಲ ಮಾಡಿಕೊಟ್ರೆ ಹೆಂಗೋ ಜೀವ್ನ ಮಾಡ್ಕೋತೀವಿ… ಎನ್ನುತ್ತಾರೆ ಲಕ್ಷ್ಮೀಬಾಯಿ.
ಮನೆಯಿಂದ ಹೊರಗೆ ಬಂದರೆ ಸಾಕು ಯುಜಿಡಿ ನೀರು ಬರೋದೇ ಕಾಣುತ್ತೆ. ಗಬ್ಬು ವಾಸನೆ ಬೇರೆ. ಇದರಲ್ಲೇ ಜೀವನ ಮಾಡಬೇಕಾಗೈತೆ. ಬೇರೆ ಕಡೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿ ಹೋದವರು, ಅವರ ಮಾತುಗಳಿಗೆ ಲೆಕ್ಕವೇ ಇಲ್ಲ. ಆದರೆ, ಈವರೆಗೆ ಏನೂ ಆಗೇ ಇಲ್ಲ. ಸಾಯೋ ತನಕ ಹಿಂಗೇ ಇರಬೇಕೋ ಏನೋ.. ಅನ್ನೋದೆ ಗೊತ್ತಾಗುತ್ತಾ ಇಲ್ಲ ಎಂದು ಲಕ್ಷ್ಮೀಬಾಯಿ ಮನೆಯ ಮುಂದಿನ ನಿವಾಸಿ ಬಸಮ್ಮ ಹೇಳುತ್ತಾರೆ.
ಸ್ಮಾರ್ಟ್‌ಸಿಟಿ, ಸುಂದರ, ಸ್ವಚ್ಛ ದಾವಣಗೆರೆಯ ಬಗ್ಗೆ ಹೇಳುವಂತಹವರು ಮಹಾನಗರ ಪಾಲಿಕೆಯ 10ನೇ ವಾರ್ಡ್‌ನ ನಿವಾಸಿಗಳಿಗೆ ಕನಿಷ್ಟ ಪಕ್ಷ ಬದುಕುವ ವಾತಾವರಣವನ್ನಾದರೂ ಕಲ್ಪಿಸಬೇಕಾಗಿದೆ.