ಭಟ್ಕಳ: ಕಟ್ಟಡ ಕಾರ್ಮಿಕರಿಗೆ ಆನ್‌ಲೈನ್ ವ್ಯವಸ್ಥೆಯಿಂದ ಅನ್ಯಾಯ ಆಗುತ್ತಿದ್ದು, ಶೀಘ್ರ ಗೊಂದಲ ನಿವಾರಿಸಿ ಕಟ್ಟಡ ಕಾರ್ಮಿಕರಿಗೆ ಸರಕಾರದ ಸೌಲಭ್ಯ ಸಿಗುವಂತಾಗಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನಕಾರ್ಯದರ್ಶಿ ಜಿ.ಎನ್. ರೇವಣಕರ ತಿಳಿಸಿದ್ದಾರೆ.
ಪಟ್ಟಣದ ಖಾಸಗಿ ಹೊಟೆಲ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನವರೆಗೂ ಕಟ್ಟಡ ಕಾರ್ಮಿಕರ ಅರ್ಜಿಗಳನ್ನುಮೆನ್ಯುವಲ್ ಆಗಿ ಸ್ವೀಕರಿಸುತ್ತಿದ್ದರಿಂದ ಶೀಘ್ರ ಅರ್ಜಿ ಪರಿಶೀಲನೆ ಆಗಿ ತ್ವರಿತ ರೀತಿಯಲ್ಲಿ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿತ್ತು. ಆದರೆ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವುದು ಮಾಡಿದ ದಿನದಿಂದ ಇಲ್ಲಿಯವರೆಗೂ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಸಿಗುತ್ತಿಲ್ಲ. ಆನಲೈನ್ ಅರ್ಜಿಗಳನ್ನು ಪರಿಶೀಲಿಸಲು ಮೂರ್‍ನಾಲ್ಕು ದಿನ ವಿಳಂಬ ಮಾಡಲಾಗುತ್ತಿದೆ.
ಒಮ್ಮೆ ಪರಿಶೀಲಿಸಿದರೂ ಅರ್ಜಿಯನ್ನು ಇಲ್ಲದ ಸಬೂಬು ಹೇಳಿ ತಿರಸ್ಕರಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಕಾರ್ಮಿಕ ಕಚೇರಿಯಲ್ಲಿ ಪ್ರಶ್ನಿಸಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದ ಅವರು ಆನ್‌ಲೈನ್ ವ್ಯವಸ್ಥೆಯಿಂದ ಕಟ್ಟಡ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ಎಲ್ಲಿ ಅರ್ಜಿ ಹಾಕಲಾಗಿದೆಯೋ ಅಲ್ಲಿಯೇ ಅವರ ವಿವರ ಪರಿಶೀಲಿಸಬೇಕಿದೆ. ಅದನ್ನು ಬಿಟ್ಟು ಬೇರೆ ಕಡೆಗೆ ಪರಿಶೀಲಿಸಿಲು ಹೋದರೆ ಯಾವುದೇ ವಿವರ ಸಿಗುತ್ತಿಲ್ಲ. ಆನ್‌ಲೈನ್ ವ್ಯವಸ್ಥೆಯಲ್ಲೇ ನಿಗೂಢತೆ, ಗೊಂದಲವಿದ್ದು, ಆದಷ್ಟು ಬೇಗ ಸರಿಪಡಿಸಬೇಕು, ಕಟ್ಟಡ ಕಾರ್ಮಿಕರ ಕೆಲಸ ಆಗಲು ಹಾಗೂ ಸರಕಾರದಿಂದ ಸೌಲಭ್ಯ ತ್ವರಿತಗತಿಯಲ್ಲಿ ಸಿಗುವಂತಾಗಲು ಈ ಮೊದಲಿನಂತೆಯೇ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲೇ ಅರ್ಜಿ ಸ್ವೀಕಾರ ಮಾಡಬೇಕು.
ಅಧಿಕೃತ ಸಂಘಟನೆ ಕಚೇರಿಯಲ್ಲಿ ಮಾತ್ರ ಕಾರ್ಮಿಕರ ಅರ್ಜಿ ಸ್ವೀಕೃತವಾಗಬೇಕು ಎಂದು ಹೇಳಿದ ಅವರು, ಕಾರ್ಮಿಕರ ಪಿಂಚಣಿ, ಮದುವೆ ಸಹಾಯಧನ ಕಳೆದ ನಾಲ್ಕು ವರ್ಷಗಳಿಂದ ಬಿಡುಗಡೆಯಾಗಿಲ್ಲ. ಸರಕಾರ ಈ ಬಗ್ಗೆಯೂ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು. ಸಿಐಟಿಯು ತಾಲೂಕು ಅಧ್ಯಕ್ಷ ಪುಂಡಲೀಕ ನಾಯ್ಕ, ಸಿಐಟಿಯು ಕಾರ್ಯದರ್ಶಿ ಶ್ರೀಧರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.