Advertisement

ಕರಾವಳಿಯ ಬ್ಯಾಂಕ್‌ಗಳಿಗೆ ತುಂಬಿ ತುಳುಕುತ್ತಿರುವ ಠೇವಣಿಗಳೇ ಸಮಸ್ಯೆ!

12:30 AM Jan 06, 2021 | Team Udayavani |

ಉಡುಪಿ/ಮಂಗಳೂರು: ಕರಾವಳಿಯ ಬ್ಯಾಂಕ್‌ಗಳು ಠೇವಣಿ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿವೆ ಎಂದರೆ ನಂಬಲೇಬೇಕು.

Advertisement

ವೈಯಕ್ತಿಕ‌ ಬದುಕಿನಲ್ಲಿ ಠೇವಣಿ ಹೆಚ್ಚಿದ್ದರೆ ಭರವಸೆ. ಆದರೆ ಬ್ಯಾಂಕ್‌ಗಳಿಗೆ ಸಮಸ್ಯೆ. ಆರ್‌ಬಿಐ ನೀತಿಯ ಪ್ರಕಾರ ಬ್ಯಾಂಕ್‌ಗಳು ಎಷ್ಟು ಠೇವಣಿ ಹೊಂದಿರುತ್ತವೆಯೋ ಅದರ ಶೇ. 60ರಷ್ಟನ್ನು ಸಾಲ ರೂಪದಲ್ಲಿ ವಿತರಿಸ ಬೇಕು. ಆದರೆ ಉಭಯ ಜಿಲ್ಲೆಗಳ ಬ್ಯಾಂಕ್‌ಗಳು ಹರಸಾಹಸ ಪಟ್ಟರೂ ಈ ಸಿಡಿ ಅನುಪಾತ (ಕ್ರೆಡಿಟ್‌ ಡಿಪಾಸಿಟ್‌) ತಲುಪಲು ಆಗುತ್ತಿಲ್ಲ.

ಸಿಡಿ ರೇಶಿಯೋ ಉಡುಪಿ ಜಿಲ್ಲೆಯಲ್ಲಿ ಶೇ.45 ಮೀರುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ಪರವಾಗಿಲ್ಲ, ಶೇ. 58.04ರಷ್ಟಿದೆ. ಒಂದು ಸಮಾಧಾನದ ಸಂಗತಿಯೆಂದರೆ ದ.ಕ.ದಲ್ಲಿ 0.09ರಷ್ಟು ಪ್ರಗತಿ ಇದೆ. ಆದರೂ ಸಾಲದ ವಿತರಣೆಯಲ್ಲಿ ಹಿಂದಿದೆ. ಈ ಹಿನ್ನೆಲೆಯಲ್ಲಿ ಸಾಲವನ್ನು ಹೆಚ್ಚು ವಿತರಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ.

ವಿದೇಶಗಳಲ್ಲಿ ಕರಾವಳಿಯವರು ಹೆಚ್ಚಿರುವುದು ಠೇವಣಿ ಹೆಚ್ಚಳ ವಾಗಲು ಒಂದು ಕಾರಣವಾದರೆ, ಕೆಲವು ರೂಪದ ಸಾಲ ಯೋಜನೆಗೆ ಜನರೇ ಮುಂದೆ ಬರುತ್ತಿಲ್ಲ ಎನ್ನುವುದು ಬ್ಯಾಂಕ್‌ನವರ ನೆಲೆಯಲ್ಲಿ ಸಿಗುವ ಮತ್ತೂಂದು ಕಾರಣ.

ಶೈಕ್ಷಣಿಕ ಸಾಲಕ್ಕೆ ಅರ್ಜಿಗಳೇ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಲ ವಿತರಣೆಯ ಗುರಿ 65 ಇದ್ದರೆ ಕೇವಲ 11 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಕೃಷಿ, ಸಣ್ಣ ಉದ್ದಿಮೆ, ವಸತಿ ಇತ್ಯಾದಿ ಕ್ಷೇತ್ರಗಳಿಗೆ ಹೋಲಿಸಿದರೆ ಶೈಕ್ಷಣಿಕ ಸಾಲದ ನಿರ್ವಹಣೆ ತೀರಾ ಕಳಪೆ. ಶೈಕ್ಷಣಿಕ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದರೆ, ಹಲವು ಬ್ಯಾಂಕುಗಳಿಗೆ ಅರ್ಜಿಗಳೇ ಬಂದಿಲ್ಲ. ಕಳೆದ ಆರು ತಿಂಗಳಲ್ಲಿ ಕೊರೊನಾ ಕಾರಣದಿಂದ ಸಾಲದ ವಿತರಣೆ ನಿರೀಕ್ಷೆಯಂತೆ ಆಗಲಿಲ್ಲ ಎಂದು ಹೇಳಲಾಗುತ್ತಿದೆ.

Advertisement

ದಕ್ಷಿಣ ಕನ್ನಡದಲ್ಲೂ ವಸತಿ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಾಲ ವಿತರಣೆ ಬಹಳಷ್ಟು ಹಿಂದಿದೆ. ವಸತಿ ಕ್ಷೇತ್ರಕ್ಕೆ ಅರ್ಧವಾರ್ಷಿಕ 650 ಕೋ.ರೂ. ಗುರಿಯಿದ್ದು, ವಿತರಣೆಯಾಗಿರುವುದು ಕೇವಲ 231.12 ಕೋ.ರೂ. (ಶೇ. 35.56). ಶೈಕ್ಷಣಿಕ ಸಾಲ ಯೋಜನೆಯಲ್ಲಿ ಅರ್ಧವಾರ್ಷಿಕ 76.95 ಕೋ.ರೂ. ಗುರಿಯಲ್ಲಿ 23.96 ಕೋ.ರೂ. ಸಾಲ (ಶೇ. 30.79) ಮಾತ್ರ ನಿರ್ವಹಣೆಯಾಗಿದೆ.

ಬಿಒಬಿ ಉತ್ತಮ ಸಾಧನೆ
ರಾಷ್ಟ್ರೀಕೃತ ಬ್ಯಾಂಕುಗಳ 274 ಶಾಖೆಗಳಲ್ಲಿ 21,369 ಕೋ.ರೂ. (ಶೇ. 77.54) ಠೇವಣಿ, 8,974 ಕೋ.ರೂ. (ಶೇ.72.26) ಸಾಲದ ಪ್ರಮಾಣವಿದ್ದರೆ ಉಳಿದ ಪಾಲನ್ನು ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಭರಿಸಿವೆ. ಸಿ ಡಿ ರೇಶಿಯೋದಲ್ಲಿ ಉತ್ತಮ ಸಾಧನೆ ಬ್ಯಾಂಕ್‌ ಆಫ್ ಬರೋಡಾದ್ದಾಗಿದೆ.

ದಕ್ಷಿಣ ಕನ್ನಡ : ಐಒಬಿ ಮುನ್ನಡೆ
ಸಿಡಿ ರೇಶಿಯೋ ಸಾಧನೆಯಲ್ಲಿ ಜಿಲ್ಲೆಯ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಶೇ. 74.18 ಸಾಧನೆಯ ಮೂಲಕ ಪ್ರಥಮ ಸ್ಥಾನದಲ್ಲಿದೆ. 19 ಶಾಖೆ ಗಳಲ್ಲಿ ಒಟ್ಟು 961.54 ಕೋ.ರೂ. ಠೇವಣಿಯಲ್ಲಿ 713.24 ಕೋ.ರೂ. ಸಾಲ ನೀಡಿದೆ.
ಬ್ಯಾಂಕ್‌ ಆಫ್‌ ಬರೋಡಾ 81 ಶಾಖೆಗಳಲ್ಲಿ 5047.20 ಕೋ.ರೂ. ಠೇವಣಿಯಲ್ಲಿ 3597.84 ಕೋ.ರೂ. ಸಾಲ ವಿತರಣೆಯಾಗಿದ್ದು, ಸಿಡಿ ರೇಶಿಯೋ ಶೇ. 71.28 ಇದೆ. ಜಿಲ್ಲಾ ಲೀಡ್‌ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ನ 156 ಶಾಖೆಗಳಲ್ಲಿ 13,894.66 ಕೋ.ರೂ. ಠೇವಣಿಯಲ್ಲಿ 6,391.36 ಕೋ.ರೂ.ಸಾಲ ವಿತರಿಸಿದ್ದು, ಸಿ ಡಿ ರೇಶಿಯೋ ಶೇ. 46 ಆಗಿದೆ.

ಸಾಲ ಠೇವಣಿ ಅನುಪಾತ ಏರಿಕೆಯಾಗಬೇಕೆಂದಿದೆ. ಇಲ್ಲಿ ಠೇವಣಿಗಳ ಪ್ರಮಾಣ ಹೆಚ್ಚಿದೆ. ಇದಕ್ಕೆ ಪರಿಹಾರ ಸಾಲ ವಿತರಣೆ ಹೆಚ್ಚಿಸುವುದು ಮಾತ್ರ. ಇಲ್ಲಿ ಮೀನುಗಾರಿಕೆ, ಗೋಡಂಬಿ, ವಸತಿ, ಶಿಕ್ಷಣ, ವಾಹನ, ಸ್ವಸಹಾಯ ಗುಂಪುಗಳಿಗೆ ಸಾಲ ಕೊಡಲು ಅವಕಾಶಗಳಿವೆ. ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಗರಿಷ್ಠ ಮಿತಿಯಲ್ಲಿ ವಿತರಿಸಲು ಎಲ್ಲ ಬ್ಯಾಂಕ್‌ಗಳಿಗೂ ಸೂಚಿಸಿದ್ದೇವೆ.
– ರುದ್ರೇಶ್‌ ಡಿ.ಸಿ., ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಬಂಧಕರು, ಉಡುಪಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿ ರೇಶಿಯೋ ಶೇ. 58.04 ಇದ್ದು, ಪಕ್ಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಆರ್‌ಬಿಐ ಮಾನದಂಡದಂತೆ ಶೇ. 60-40 ಇರಬೇಕಿದ್ದು, ಒಟ್ಟು ನಿರ್ವಹಣೆ ಇದಕ್ಕಿಂತ ಕೆಳಗಿದೆ. ಸಾಲದ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುವಂತೆ ಇತ್ತೀಚೆಗೆ ಜರಗಿದ ಜಿಲ್ಲಾ ಬ್ಯಾಂಕಿಂಗ್‌ ಪ್ರಗತಿ ಪರಿಶೀಲನ ಸಭೆಯಲ್ಲಿ ಎಲ್ಲ ಬ್ಯಾಂಕ್‌ಗಳನ್ನು ಕೋರಲಾಗಿದೆ.
ಪ್ರವೀಣ್‌ ಎಂ.ಪಿ., ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಬಂಧಕ


ಠೇವಣಿ ಇದೆ; ಸಾಲ ವಿತರಣೆಗೆ ಹಿನ್ನಡೆ
ದಕ್ಷಿಣ ಕನ್ನಡದಲ್ಲಿ ಖಾಸಗಿ ಒಟ್ಟು 640 ಬ್ಯಾಂಕ್‌ ಶಾಖೆಗಳಿವೆ. ಇವುಗಳಲ್ಲಿ ಸೆಪ್ಟಂಬರ್‌ ಅಂತ್ಯಕ್ಕೆ ಒಟ್ಟು ಠೇವಣಿ ಮೊತ್ತ 50,995.17 ಕೋ.ರೂ. ಇದರಲ್ಲಿ 29,597.49 ಕೋ.ರೂ. ಸಾಲ ನೀಡಲಾಗಿದೆ. ಠೇವಣಿಯಲ್ಲಿ ಶೇ. 9.34 ಹೆಚ್ಚಳವಾಗಿದ್ದರೂ ಸಾಲ ನೀಡಿಕೆ ಮೊತ್ತದಲ್ಲಿ ಶೇ. 0.09 ಮಾತ್ರ ಪ್ರಗತಿ ಸಾಧ್ಯವಾಗಿದೆ.

ಸಾಲ ನೀಡಿಕೆಗೆ ವಿಶೇಷ ಗಮನ ಹರಿಸಿ ಸಾಲ-ಠೇವಣಿ ಅನುಪಾತದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಇತ್ತೀಚೆಗೆ ಜರಗಿದ ಜಿಲ್ಲಾ ಬ್ಯಾಂಕಿಂಗ್‌ ವ್ಯವಹಾರ ಪ್ರಗತಿ ಪರಿಶೀಲನ ಸಭೆಯಲ್ಲಿ ಸಲಹೆ ನೀಡಿದ್ದೇನೆ. ಜಿಲ್ಲಾ, ತಾಲೂಕು ಮಟ್ಟದ ಸಾಲಮೇಳಗಳ ಆಯೋಜನೆ, ಸರಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಇದರಲ್ಲಿ ಸೇರಿದೆ.
-ಡಾ| ಆರ್‌. ಸೆಲ್ವಮಣಿ, ಸಿಇಒ, ದ.ಕ. ಜಿ.ಪಂ.

ವಿವಿಧ ಸಾಮಾಜಿಕ ನ್ಯಾಯದ ಯೋಜನೆ ಗಳಿಗೆ ಆದ್ಯತೆಯಲ್ಲಿ ಸಾಲ ವಿತರಿಸಬೇಕು. ಸಾಲ- ಠೇವಣಿ ಪ್ರಮಾಣವನ್ನು ಹೆಚ್ಚಿಸಲು ಸಾಲ ವಿತರಣೆ ಹೆಚ್ಚಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದ್ದೇನೆ.
-ಡಾ| ನವೀನ್‌ ಭಟ್‌ ವೈ., ಸಿಇಒ, ಜಿ.ಪಂ. ಉಡುಪಿ


ಉದಯವಾಣಿ ಟೀಮ್‌

Advertisement

Udayavani is now on Telegram. Click here to join our channel and stay updated with the latest news.

Next