ಕಲಬುರಗಿ: ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಕೇವಲ ಮಹಿಳೆಯರದ್ದಷ್ಟೇ ಅಲ್ಲ, ಅದು ಇಡೀ ಸಮಾಜದ ಸಮಸ್ಯೆ ಎಂದು ಹೋರಾಟಗಾರ ಡಾ| ಪ್ರಭು ಖಾನಾಪುರೆ ಹೇಳಿದರು.
ನಗರದ ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ವಿವಿಧ ಮಹಿಳಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಅರಿವಿನ ಪಯಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆ ಕೇವಲ ಮಹಿಳೆಯಾಗಿರದೇ ಪುರುಷ ಪ್ರಧಾನ ಸಮಾಜದ ಚಲಾವಣೆ ವ್ಯಕ್ತಿಯಾಗಿದ್ದಾಳೆ. ಆಕೆ ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಮತ್ತು ಇತರೆಲ್ಲ ಸಂದರ್ಭದಲ್ಲಿ ಕಷ್ಟ ಸಹಿಷ್ಣುವಾಗಿ ಮನೆ ನಿಭಾಯಿಸುತ್ತಾಳೆ ಮತ್ತು ಕುಟುಂಬ ನಿರ್ವಹಣೆ ಮಾಡುತ್ತಾಳೆ. ಆದ್ದರಿಂದ ಆಕೆ ಎದುರಿಸುವ ಸಮಸ್ಯೆಗಳು ಕೇವಲ ಆಕೆಯದ್ದಲ್ಲ. ಅದು ಸಮಾಜದ್ದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ರಾಜೇಂದ್ರ ಕೊಂಡಾ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ ಹಾಡು, ನಾಟಕ, ಸಂವಾದ, ಕಥೆಗಳ ಮೂಲಕ ಲಿಂಗ ಸಂವೇದನಾಶೀಲತೆ ಮೂಡಿಸುವುದು ಹೆಚ್ಚು ಪರಿಣಾಮಕಾರಿ. ನೂರು ಉಪದೇಶಗಳಿಗಿಂತ ಒಂದು ಸಂವಾದ ಮನುಷ್ಯರನ್ನು ಸಾಕಷ್ಟು ಬದಲಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಪ್ರೊ| ಎನ್.ಜಿ. ಪಾಟೀಲ ಮಾತನಾಡಿದರು. ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕಿ ಮೀನಾಕ್ಷಿ ಬಾಳಿ, ಪ್ರಾಧ್ಯಾಪಕರಾದ ಡಾ| ರುಬಿನಾ, ಡಾ.ಶರಣಮ್ಮ ಕುಪ್ಪಿ, ಶಕುಂತಲಾ ಬಿ, ಪ್ರೊ| ಶಿವಲೀಲಾ ಧೋತೆ, ಡಾ| ಸುಷ್ಮಾ ಕುಲಕರ್ಣಿ, ಜನವಾದಿ ಮಹಿಳಾ ಸಂಘಟನೆ ಮುಖ್ಯಸ್ಥೆ ಪದ್ಮಿನಿ ಕಿರಣಗಿ, ಜಗದೇವಿ ನೂಲಕರ್, ಶಹನಾಜ್ ಬೇಗಂ ಹಾಗೂ ಮಂಗಳೂರಿನ ವಾಣಿ ಪೆರಿಯೋಡಿ, ಬೆಂಗಳೂರಿನ ಅಖೀಲಾ ವಿದ್ಯಾಸಂದ್ರ, ಮಂಡ್ಯದ ಮಲ್ಲಿಗೆ ಸಿರಿಮನೆ, ಕೊಪ್ಪಳದ ಶೀಲಾ ಹಾಲಕುರ್ಕಿ ಕೊಪ್ಪಳ, ಶಿವಮೊಗ್ಗದ ರೇಖಾಂಬಾ, ವೃಂದಾ ಹೆಗಡೆ, ವಿಜಯಪುರದ ಮಲ್ಲಮ್ಮ ಯಾಳವಾರ, ಪ್ರಬುದ್ಧ ಭಾರತ ಸಂಘಟನೆಯ ಅಶ್ವಿನಿ ಮದನಕರ್, ವಿಜಯ ದಬ್ಬೆ, ಪ್ರೊ| ಶಿವಲೀಲಾ ಧೋತ್ರೆ ಇದ್ದರು.