ಬೀದರ : ಹೆಮ್ಮಾರಿ ಕೋವಿಡ್-19 ಆರ್ಭಟದ ನಡುವೆ ಸೂರ್ಯಾಘಾತದಿಂದ ತಲ್ಲಣ ಎದುರಿಸುತ್ತಿರುವ ಗಡಿ ನಾಡು ಬೀದರಗೆ ಈಗ ಜೀವ ಜಲದ ಕಂಟಕದ ಆತಂಕ ಶುರುವಾಗಿದೆ. ಮೇ ತಿಂಗಳ ಆರಂಭದಲ್ಲಿ ನೀರಿನ ಅಭಾವ ತಲೆದೋರಲಿರುವ ಜಿಲ್ಲೆಯ 70ಕ್ಕೂ ಅಧಿಕ ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಮತ್ತು ಜಿಪಂ ಸಿದ್ಧಪಡಿಸಿದ್ದು, ಅಗತ್ಯ ಸಿದ್ಧತೆಗೆ ಮುಂದಾಗಿದೆ.
ಕೊರೊನಾ ಸೋಂಕಿನ ಕರಾಳ ಮುಖ ಅನಾವರಣದಿಂದ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶವೂ ನಲುಗಿ ಹೋಗುತ್ತಿದೆ. ಈ ವರ್ಷ ಉತ್ತಮ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಿದ್ದರೂ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD) ಪ್ರಕಾರ ಮೇ ಮೊದಲ ವಾರದಿಂದ ಜಿಲ್ಲೆಯ 72 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಹುದೆಂದು ಅಂದಾಜಿಸಲಾಗಿದೆ.
ಆದರೆ, ಈ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಅಧಿಕವಾಗಿದೆ. ಜಿಲ್ಲೆಯ ಜೀವನಾಡಿ ಆಗಿರುವ ಕಾರಂಜಾ ಜಲಾಶಯದಿಂದ ಬೀದರ ನಗರ ಮತ್ತು 18 ಹಳ್ಳಿಗಳು, ಚಿಟಗುಪ್ಪ ಪಟ್ಟಣ ಮತ್ತು 8 ಹಳ್ಳಿ ಹಾಗೂ ಹುಮನಾಬಾದ್ ಪಟ್ಟಣಕ್ಕೆ ನೀರು ಪೂರೈಕೆ ಇದೆ. ಡ್ಯಾಂನಲ್ಲಿ 5.737 ಟಿಎಂಸಿ ನೀರಿನ ಲಭ್ಯತೆ ಇದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಒಟ್ಟು 17 ಬಹು ಗ್ರಾಮ ಯೋಜನೆಗಳ ಪೈಕಿ 8 ಯೋಜನೆಗಳು ಮಾತ್ರ ಚಾಲ್ತಿಯಲ್ಲಿದ್ದು, 55 ಗ್ರಾಮಗಳಿಗೆ ನೀರಿನ ಸಂಪರ್ಕದ ವ್ಯವಸ್ಥೆಗಳಿವೆ. ಉಳಿದ ಗ್ರಾಮಗಳು ಕೆರೆ, ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿವೆ. ಬೀದರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳಿದ್ದು, 2,864 ಎಂಸಿಎಫ್ ಟಿ ಗರಿಷ್ಠ ನೀರಿನ ಸಾಮರ್ಥ್ಯ ಇದೆ. ಏ. 1ರವರೆಗೆ ಒಂದು ಕೆರೆಯೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ಒಟ್ಟು ಕೆರೆಗಳ ಪೈಕಿ 16 ಕೆರೆಗಳು ತುಂಬದೇ ಖಾಲಿ ಇದ್ದರೆ, ಶೇ. 1ರಿಂದ ಶೇ. 30 ತುಂಬಿದ ಕೆರೆ 40, ಶೇ. 31ರಿಂದ ಶೇ. 50 ತುಂಬಿದ ಕೆರೆ 41 ಹಾಗೂ ಶೇ. 51ರಿಂದ ಶೇ. 99ರಷ್ಟು 27 ಕೆರೆಗಳು ಭರ್ತಿಯಾಗಿವೆ. ಸಧ್ಯ ಹೆಚ್ಚಿನ ನೀರಿನ ಸಮಸ್ಯೆ ಇಲ್ಲವಾದರೂ ಬಿರು ಬಿಸಿಲಿಗೆ ಸಾಕ್ಷಿಯಾಗುವ ಮೇ ತಿಂಗಳಲ್ಲಿ ಅಭಾವ ಸೃಷ್ಟಿಯಾಗಲಿದ್ದು, ಈಗಾಗಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮತ್ತು ಜಿ.ಪಂ ನೀರಿನ ಸಮಸ್ಯಾತ್ಮಕ ಪಟ್ಟಿಯನ್ನು ಪಡೆದಿದೆ.
ಗ್ರಾಮ ಲೆಕ್ಕಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸರ್ವೇ ನಡೆಸಿ, ನೀರಿನ ಸೆಲೆ ಕಡಿಮೆಯಾದಲ್ಲಿ ಸುತ್ತಲಿನ ಬಾವಿ, ಬೊರ್‌ವೆಲ್‌ಗಳ ಮೂಲಕ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ಎದುರಾಗದಿದ್ದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಕೋವಿಡ್ ಆತಂಕದ ಮಧ್ಯ ಬಿರು ಬಿಸಿಲಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾದರೆ ಜನರ ಪರದಾಟ ಹೆಚ್ಚಲಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮೈಲಿಗಟ್ಟಲೆ ಕ್ರಮಿಸಿ ಹೊರವಲಯದ ತೋಟಗಳಲ್ಲಿನ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಸಮಸ್ಯೆ ತೀವ್ರವಾಗದಂತೆ ಆಡಳಿತ ಕ್ರಮ ವಹಿಸುವುದು ಅಗತ್ಯವಿದೆ.