ವಾಡಿ: ವಿಪರೀತ ಮಳೆ ಹೊಡೆತದಿಂದ ತತ್ತರಿಸಿ ಹಾಳಾಗಿದ್ದ ಮುಂಗಾರು ಬಿತ್ತನೆಯ ತೊಗರಿ ಮರುಬಿತ್ತನೆಗೂ ಕಾರಣವಾಗಿತ್ತು. ಹೊಲ ಹರಗಿ ಭೂಮಿಗೆ ಮತ್ತೆ ಬೀಜ ಹಾಕಿದ ಅನ್ನದಾತರು, ಬಂಪರ್ ಫಸಲಿನ ನಿರೀಕ್ಷೆ ಹೊತ್ತಿದ್ದರು. ಮಂಜಿನ ಹೊಡೆತಕ್ಕೆ ಮತ್ತೆ ತೊಗರಿ ಮುಗ್ಗರಿಸಿದ್ದು ಹುಳು ಕಾಟ ಜೋರಾಗಿದೆ. ಕ್ರಿಮಿನಾಶಕ ತೈಲ ಸಿಂಪರಣೆ ಮಾಡುವ ಮೂಲಕ ಅಳಿದುಳಿದ ತೊಗರಿ ಕಾಳು ರಕ್ಷಣೆಗೆ ರೈತರು ಮುಂದಾಗಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ, ನಾಲವಾರ ಹೋಬಳಿ ವಲಯದ ಸಾವಿರಾರು ಎಕರೆ ಭೂಮಿಯಲ್ಲಿ ತೊಗರಿ ಬೆಳೆ ಕಾಳು ಕಟ್ಟಿದ್ದು, ಹುಳುಗಳ ಕಾಟವೂ ಹೆಚ್ಚಾಗಿದೆ. ಮಂಜು ಆವರಿಸಿದ ವಾತಾವರಣದಿಂದ ಗೊಡ್ಡು ರೋಗಬಾಧೆಗೆ ಬೆಳೆ ತುತ್ತಾಗಿವೆ. ನಾಲ್ಕನೇ ಬಾರಿಗೆ ಕ್ರಿಮಿನಾಶಕ ತೈಲ ಸಿಂಪರಣೆಗೆ ಮುಂದಾದರೂ ಹುಳುಗಳು ಮಾತ್ರ ಸಾಯುತ್ತಿಲ್ಲ ಎನ್ನುವ ಕೊರಗು ರೈತರನ್ನು ಕಾಡುತ್ತಿದೆ. ಒಣ ಬೇಸಾಯವನ್ನೇ ನಂಬಿರುವ ಗ್ರಾಮೀಣ ಜನರು ವರುಣನ ಅಟ್ಟಹಾಸಕ್ಕೆ ನಲುಗಿ ಪ್ರಾಕೃತಿಕ ಅಸಮತೋಲನದಿಂದ ಬೆಳೆ ಇಳುವರಿ ಕುಂಠಿತದ ಆತಂಕ ಎದುರಿಸುತ್ತಿದ್ದಾರೆ.
ಪ್ರಮುಖವಾಗಿ ತೊಗರಿಯನ್ನೇ ನಂಬಿಕೊಂಡಿದ್ದ ಗಣಿನಾಡ ಭಾಗದ ರೈತರು ಈ ಬಾರಿ ಹತ್ತಿ, ಸೂರ್ಯಕಾಂತಿ, ಕಡಲೆ, ಜೋಳ ಬಿತ್ತನೆ ಮಾಡಿದ್ದಾರೆ. ನಾಲವಾರ, ಕೊಲ್ಲೂರ, ಸನ್ನತಿ, ಲಾಡ್ಲಾಪುರ, ರಾವೂರ, ದಂಡಗುಂಡ, ಅಳ್ಳೊಳ್ಳಿ, ಚಾಮನೂರ, ಕಡಬೂರ, ಕೊಂಚೂರು, ಬಳವಡಗಿ ವ್ಯಾಪ್ತಿಯ ಅಡವಿಯಲ್ಲಿ ತೊಗರಿ ಬೆಳೆ ನಿರೀಕ್ಷೆಯಂತೆ ಫಸಲು ಕಾಳು ಕಟ್ಟಿಲ್ಲ. ಭೀಮಾನದಿ ದಂಡೆಯ ಜಮೀನುಗಳಲ್ಲಿ ಮೆಳಸಿನಕಾಯಿ, ಭತ್ತ ಮತ್ತು ಈರುಳ್ಳಿ ಬೆಳೆಯಲಾಗಿದ್ದು, ಪ್ರಾಣಿಗಳ ದಾಳಿಯಿಂದ ಬೆಳೆ ರಕ್ಷಿಸಲು ರೈತರು ಹಗಲು-ರಾತ್ರಿ ಕಾವಲು ಕಾಯುತ್ತಿದ್ದಾರೆ. ಕಳೆದ ವರ್ಷ ಹಸಿ ಬರ ಎದುರಿಸಿ ಸಾಲಕ್ಕೆ ಸಿಲುಕಿದ್ದ ರೈತರಿಗೆ ಈ ವರ್ಷವೂ ಸಂಕಷ್ಟ ತಪ್ಪಿಲ್ಲದಂತೆ ಆಗಿದೆ. ಹೊಲದ ತುಂಬ ಬೆಳೆ ಕಾಣಿಸಿಕೊಂಡರೂ ಗೊಡ್ಡು ರೋಗ ಹೂ ಬಿಡುವ ಅವಕಾಶ ಕಸಿದುಕೊಂಡಿದೆ.
ಕಾಳು ಕಟ್ಟಿದ ತೊಗರಿ ಗಿಡಗಳಿಗೆ ಹುಳುಗಳ ದಾಳಿ ದಟ್ಟವಾಗಿದೆ. ಹುಳು ಬೇಟೆಯಲ್ಲಿ ತೊಗರಿ ರೈತರು ತೊಡಗಿದರೆ, ಹತ್ತಿ ಬೆಳೆದ ರೈತರು ಕೃಷಿ ಕೂಲಿಕಾರರ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳು ಮತ್ತು ಮಹಿಳೆಯರನ್ನು ಸಂಘಟಿಸಿ ಹೊಲಕ್ಕೆ ತಂದರೂ ಹತ್ತಿ ಬಿಡಿಸಲು ಸಾಧ್ಯವಾಗುತ್ತಿಲ್ಲ. ತೊಗರಿ ಮತ್ತು ಹತ್ತಿ ಹೊಲಗಳಲ್ಲಿ ಸದ್ಯ ಕೃಷಿ ಚಟುವಟಿಕೆ ಗರಿಗೆದರಿದ್ದು, ಕಾಯಿ ಕಟ್ಟಿದ ತೊಗರಿಯಲ್ಲಿ ಕಾಳು ಇಲ್ಲದಿರುವುದು ಕಂಡು ಸಾಲದ ಹೊರೆ ಇಳಿಸಬಲ್ಲ ಆದಾಯ ನಿರೀಕ್ಷೆ ಸಾಕಾರಗೊಳ್ಳದೇ ರೈತರು ಮರುಗುತ್ತಿದ್ದಾರೆ.
–ಮಡಿವಾಳಪ್ಪ ಹೇರೂರ