Advertisement

ಬೇಸಿಗೆ ಮುನ್ನವೇ ಕುಡಿವ ನೀರಿನ ಸಮಸ್ಯೆ ಉಲ್ಬಣ

12:06 PM Nov 18, 2018 | Team Udayavani |

ಭಾಲ್ಕಿ: ಬೇಸಿಗೆ ಪ್ರಾರಂಭವಾಗುವ ಮುನ್ನವೇ ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆರಂಭದಲ್ಲಿ ಉತ್ತಮವಾಗಿದ್ದ ಮುಂಗಾರು ಮಳೆ ನಂತರದ ದಿನಗಳಲ್ಲಿ ಮಳೆ ಕಣ್ಮರೆಯಾಗಿ, ಹಿಂಗಾರು ಮಳೆಯೂ ಬಾರದಿರುವುದರಿಂದ ಜನ ಜಾನುವಾರಗಳು ನೀರಿಗಾಗಿ ಪರಿತಪಿಸುವಂತಾಗಿದೆ.

Advertisement

ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಗಿ ಎಲ್ಲವೂ ಚನ್ನಾಗಿತ್ತು. ಆದರೆ ಈ ವರ್ಷ ಪ್ರಾರಂಭದ ಜೂನ್‌, ಜುಲೈ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದು ಬಿಟ್ಟರೆ ಇಲ್ಲಿಯ ವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ತಾಲೂಕಿನ ಗ್ರಾಮಸ್ಥರು ಪರದಾಡುವಂತಾಗಿದೆ.
ಚಳಿಗಾಲದಲ್ಲಿಯೇ ಇಷ್ಟು ಸಮಸ್ಯೆಯಾಗಿದೆ. ಇನ್ನು ಬೇಸಿಗೆ ಕಾಲದಲ್ಲಿ ಎಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಜನರಿಗೆ ಚಿಂತೆ ಕಾಡತೊಡಗಿದೆ.

ತೇಗಂಪೂರ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಕೊರೆದ ಹತ್ತು ಕೊಳವೆ ಬಾವಿಗಳಿವೆ. ಆದರೆ ಅವು ನೀರಿಲ್ಲದೆ ಬತ್ತಿ ಹೋಗಿವೆ. ಈಚೆಗೆ 3 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಆದರೆ ಪ್ರಯೋಜನವಾಗಿಲ್ಲ. 700 ಅಡಿ ಆಳದ ವರೆಗೆ ಕೊರೆದರೂ ನೀರು ಲಭ್ಯವಾಗಿಲ್ಲ ಎಂದು
ಹೇಳುತ್ತಾರೆ ತೇಗಂಪೂರ ಗ್ರಾಮದ ನಿವಾಸಿಗರು. ತಾಲೂಕು ಆಡಳಿತದಿಂದ ತೇಗಂಪೂರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದೆ. ಆದರೆ ಕುಟುಂಬವೊಂದಕ್ಕೆ 6 ಕೊಡ ಮಾತ್ರ ನೀರು ಲಭಿಸುತ್ತಿದೆ. ಆದರೆ ಅಗತ್ಯವಿರುವ ಹೆಚ್ಚಿನ ನೀರು ಪಡೆಯಲು ದೂರದ ಹೊಲಗಳಿಗೆ ಮಕ್ಕಳು, ಮಹಿಳೆಯರು ಸೇರಿ ಅಲಿಯಬೇಕಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ಅ.26ರರಿಂದ ತಾಲೂಕಿನ ತೇಗಂಪೂರ ಗ್ರಾಮದಲ್ಲಿ ಮಾತ್ರ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತಾಲೂಕಿನ  ಒಟ್ಟು 44 ಗ್ರಾಮಗಳಲ್ಲಿ ನೀರಿನ ತೊಂದರೆ ಇದೆ. ಇವುಗಳಲ್ಲಿ 8 ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ತಾಲೂಕು ಆಡಳಿತದಿಂದ ನೀರು ಸರಬರಾಜು ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಹಶೀಲ್ದಾರ್‌ ಮನೋಹರ ಸ್ವಾಮಿ ಮಾಹಿತಿ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಗ್ರಾಮ ಸಮೀಪದ ಮಹಾದೇವ ಮಂದಿರ ಹತ್ತಿರ 10 ಎಕರೆ ಪ್ರದೇಶದ ಕೆರೆಯನ್ನು ಇನ್ನೂ ಆಳವಾಗಿ ಹೂಳೆತ್ತುವ ಕಾರ್ಯವಾಗಬೇಕು. ಅಲ್ಲದೇ ಕೆರೆಗೆ ತಡೆಗೋಡೆ ನಿರ್ಮಿಸಿ, ತುಂಬಿದ ಕೆರೆಯ ನೀರು ಹರಿದುಹೋಗಲು ಇರುವ ನಾಲೆ, ತಡೆಗೋಡೆ ದುರಸ್ತಿಗೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ  ಒತ್ತಾಯ.

Advertisement

ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಕೆರೆಗಳಿವೆ. ಈ ಕೆರೆಗಳಿಗೆ ಕಾಯಕಲ್ಪ ನೀಡಿದಲ್ಲಿ ಮಳೆ ಅಭಾವದಿಂದ ಉಂಟಾಗುವ ನೀರಿನ ತೊಂದರೆ ತಪ್ಪಿಸಬಹುದು ಎನ್ನುವುದು ಚಿಂತಕರ ಅಭಿಮತವಾಗಿದೆ. 

„ಜಯರಾಜ ದಾಬಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next