Advertisement
ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಖಾತೆ, ತಿದ್ದುಪಡಿ ಮಾಡಿಸಿಕೊಳ್ಳಲು ವಿಎ, ಆರ್‌ಐಗಳ ಬಳಿ ಅರ್ಜಿ ತೆಗೆದುಕೊಂಡು ಹೋದರೆ ಅಧಿಕಾರಿಗಳು ಲಂಚ ನೀಡುವಂತೆ ಕೇಳುತ್ತಾರೆ. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಆಲಗೂಡು ಮಹದೇವು ದೂರಿದರು.
Related Articles
Advertisement
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಶಿವಪ್ರಸಾದ್ ಮಾತನಾಡಿ, ಕೊತ್ತೇಗಾಲ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದು, ವೈರ್‌ಗಳು ಜೋತು ಬಿದ್ದು ಅನಾಹುತ ನಡೆಯುವ ಸಾಧ್ಯತೆಯಿದೆ. ಕೂಡಲೇ ಇದನ್ನು ಸರಿಪಡಿಸಿ ಕೊಡಿ ಎಂದು ಸೆಸ್ಕಾಂಗೆ ದೂರು ನೀಡಿದರೆ ಕ್ರಮವಹಿಸಬೇಕಾದ ಅಧಿಕಾರಿಗಳು ವಿದ್ಯುತ್ ಕಂಬ, ವೈರ್‌ಗಳಿಗಾಗಿ ರೈತರೇ ಹಣ ನೀಡಬೇಕೆಂದು ಹೇಳುತ್ತಾರೆ. ಇದೂ ಎಷ್ಟರ ಮಟ್ಟಿಗೆ ಸರಿ ಎಂದು ಸೆಸ್ಕಾಂ ಎಇಇ ಶಂಕರ್ ಅವರನ್ನು ಪ್ರಶ್ನಿಸಿದರು.
ಸಾಂಕ್ರಾಮಿಕ ರೋಗಗಳ ಭೀತಿ: ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಪ್ರಮುಖ ರಸ್ತೆಗಳನ್ನು ಸ್ವತ್ಛಗೊಳಿಸದಿದ್ದರಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ. ಬೇಸಿಗೆ ಆರಂಭವಾಗಿದ್ದು, ಅನೈರ್ಮಲ್ಯದಿಂದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ಬಗ್ಗೆ ಪಿಡಿಒಗಳ ಗಮನಕ್ಕೆ ತಂದರೂ ಅಸಡ್ಡೆ ತೋರುತ್ತಿದ್ದು, ಈ ಬಗ್ಗೆ ನಿಮಗೆ ಮನವಿ ಮಾಡಿದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಾಪಂ ಇಒ ಬಿ.ಎಸ್.ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
ಬರಗಾಲವಿರುವುದರಿಂದ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತೊಟ್ಟಿ ನಿರ್ಮಾಣ ಮಾಡಿ ನೀರು ಸರಬರಾಜು ಮಾಡಬೇಕು. ಆದರೆ, ಇದುವರೆಗೂ ಯಾವುದನ್ನೂ ಮಾಡಿಲ್ಲ ಎಂದು ಇಒ ವಿರುದ್ಧ ಹರಿಹಾಯ್ದರು.
ಚಿದರವಳ್ಳಿಯಲ್ಲಿ ಮೇವು ಬ್ಯಾಂಕ್: ತಹಶೀಲ್ದಾರ್ ಬಿ.ಶಂಕರಯ್ಯ ಮಾತನಾಡಿ, ಯಾವುದೇ ಅಧಿಕಾರಿ ಲಂಚ ಕೇಳಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರಿಗಿಸಲಾಗುವುದು. ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಶೀಘ್ರ ಚಿದರವಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆದು ಕೆಜಿಗೆ 2 ರೂ.ನಂತೆ ಮೇವು ವಿತರಣೆ ಮಾಡಲಾಗುವುದು ಎಂದರು.
ತಾಪಂ ಇಒ ಬಿ.ಎಸ್. ರಾಜು ಮಾತನಾಡಿ, ಈಗಾಗಲೇ ಯಾವ ಗ್ರಾಮಗಳಲ್ಲಿ ಕುಡಿಯವ ನೀರು ಹಾಗೂ ಮೇವಿನ ಸಮಸ್ಯೆ ಇದೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದು, ತಾಲೂಕಿನಾದ್ಯಂತ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ಸ್ವತ್ಛತೆ ಕಾಪಾಡುವಂತೆ ಆಯಾ ಗ್ರಾಪಂ ಪಿಡಿಒಗೆ ನಿರ್ದೇಶನ ನೀಡಲಾಗುವುದೆಂದು ಭರವಸೆ ನೀಡಿದರು.
ಸಭೆಯಲ್ಲಿ ರೈತ ಮುಖಂಡರಾದ ಬನ್ನೂರು ಹುಚ್ಚೇಗೌಡ, ಗೌಡರ ಪ್ರಕಾಶ್, ತಲಕಾಡು ದಿನೇಶ್, ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷೆ ರೇವತಿ. ಕೃಷಿ ಅಧಿಕಾರಿ ಕೃಷ್ಣಮೂರ್ತಿ, ಸಬ್‌ಇನ್ಸ್‌ಪೆಕ್ಟರ್ ಎನ್.ಆನಂದ್, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ಕರೋಹಟ್ಟಿ ಕುಮಾರಸ್ವಾಮಿ ಇತರರು ಹಾಜರಿದ್ದರು.