Advertisement

ಸಮಸ್ಯೆ ಸಂಪತ್ತು ಆಗಿ ಪರಿವರ್ತನೆ

11:48 PM Aug 24, 2019 | Team Udayavani |

ಜ್ಯ ಒಂದೆಡೆ ಸಮಸ್ಯೆಯಾದರೆ, ಇನ್ನೊಂದೆಡೆ ಸಂಪತ್ತು. ತ್ಯಾಜ್ಯ ನಿರ್ವಹಣೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ, ಸಮರ್ಪಕ ಯೋಜನೆಗಳಿಲ್ಲದಿದ್ದರೆ ಅದು ಸಮಸ್ಯೆಯಾಗಿ ಕಾಡುತ್ತದೆ. ಕಸವನ್ನು ರಸವಾಗಿ ಪರಿವರ್ತಿಸುವ ಬಗ್ಗೆ ಪ್ರಸ್ತುತ ಇರುವ ವಿಧಾನಗಳ ಜತೆಗೆ ಇನ್ನಷ್ಟು ಆವಿಷ್ಕಾರಗಳು ನಡೆದಾಗ ತ್ಯಾಜ್ಯ ಸಮಸ್ಯೆಯಾಗುವ ಬದಲು ಸಂಪತ್ತು ಆಗಿ ಪರಿಣಮಿಸುತ್ತದೆ. ಇದನ್ನು ಮನಗಂಡಿರುವ ಬೆಂಗಳೂರು ವಿಶ್ವವಿದ್ಯಾನಿಲಯ ಘನತ್ಯಾಜ್ಯ ನಿರ್ವಹಣೆಯನ್ನು ಪಠ್ಯದ ವಿಷಯವಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ಮುಂದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ವಿಷಯದಲ್ಲಿ ಹೊಸ ಕೋರ್ಸ್‌ ಆರಂಭಿಸಲು ಕ್ರಮ ಕೈಗೊಂಡಿದೆ.

Advertisement

ಮಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಬೃಹತ್‌ ಸಮಸ್ಯೆಯಾಗಿ ಬೆಳೆದಿದೆ. ಬಹಳಷ್ಟು ವರ್ಷಗಳಿಂದ ಅನುಸರಿಸುತ್ತಿದ್ದ ಲ್ಯಾಂಡ್‌ಫಿಲ್ಲಿಂಗ್‌ ವಿಧಾನ ಅಪಾಯಕಾರಿಯಾಗಿ ಪರಿಣಮಿಸಿದ್ದು ಪಕ್ಕದ ಒಂದು ಊರನ್ನೇ ಕಬಳಿಸಿದೆ. ನಗರ ಬೆಳೆದಂತೆಲ್ಲಾ ತ್ಯಾಜ್ಯದ ಪ್ರಮಾಣವೂ ಬೆಳೆಯುತ್ತದೆ. ಲ್ಯಾಂಡ್‌ ಫಿಲ್ಲಿಂಗ್‌ ಅಥವಾ ಇತರ ಅವೈಜ್ಞಾನಿಕ ವಿಧಾನಗಳಿಂದ ಇದನ್ನು ನಿರ್ವಹಿಸಲು ಸಾಧ್ಯವಿಲ್ಲ. ಇದಕ್ಕೊಂದು ವೈಜ್ಞಾನಿಕ ಪರಿಹಾರದ ತುರ್ತು ಆವಶ್ಯಕತೆ ಇದೆ. ಅದನ್ನು ಶೈಕ್ಷಣಿಕ ವಿಷಯವಾಗಿ ಅಧ್ಯಯನ ನಡೆಸುವ ಅಗತ್ಯವಿದೆ . ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ತ್ಯಾಜ್ಯ ನಿರ್ವಹಣೆ ಕುರಿತಂತೆ ಆರಂಭಿಸಿರುವ ನೂತನ ಕೋರ್ಸ್‌ ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಅನುಸರಿಸುವುದು ಪ್ರಸ್ತುತ ಕಾಲಘಟ್ಟದ ಮತ್ತು ಭವಿಷ್ಯದ ಆವಶ್ಯಕತೆಯಾಗಿದೆ.

ಕೋರ್ಸ್‌ನ ಸ್ವರೂಪ
ಯುವಜನರಿಗೆ ತ್ಯಾಜ್ಯದ ಸಮರ್ಪಕ ನಿರ್ವಹಣೆಯಲ್ಲಿ ಇರುವ ಆರ್ಥಿಕ ಲಾಭಗಳು ಹಾಗೂ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗ 2019-20 ನೇ ಸಾಲಿನಿಂದ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಕೋರ್ಸ್‌ ಆರಂಭಿಸುತ್ತಿದ್ದು ಇದಕ್ಕೆ ಅವಶ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಕೋರ್ಸ್‌ ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಂತಯೇ ಇರುತ್ತದೆ. ಎರಡು ವರ್ಷದ ಈ ಕೋರ್ಸ್‌ ನಲ್ಲಿ ನಾಲ್ಕು ಸೆಮಿಸ್ಟರ್‌ಗಳಿರುತ್ತವೆ. ವರ್ಷಕ್ಕೆ 30 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋರ್ಸ್‌ಗೆ ಬೇಕಾದ ಲ್ಯಾಬ್‌ ಸೌಲಭ್ಯಗಳನ್ನು ಪರಿಸರ ವಿಜ್ಞಾನದ ವಿಭಾಗದ ಮೂಲಕ ವ್ಯವಸ್ಥೆಗೊಳಿಸಲಾಗಿದೆ. ಪಠ್ಯಕ್ರಮಗಳನ್ನು ಸಿದ್ಧಗೊಳಿಸಲಾಗಿದೆ. ಪ್ರಸ್ತುತ ಇದಕ್ಕೆ ಹೊಸದಾಗಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಪರಿಸರ ವಿಜ್ಞಾನ ವಿಭಾಗದಲ್ಲಿರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಬೋಧಿಸುತ್ತಾರೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ ( ಯುಜಿಸಿ) ಕೋರ್ಸ್‌ಗೆ ಅವಶ್ಯವಿರುವ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿದೆ.

ತ್ಯಾಜ್ಯವೇ ಸಂಪತ್ತು
ತ್ಯಾಜ್ಯವೇ ಸಂಪತ್ತು ಪರಿಕಲ್ಪನೆ ಯಡಿಯಲ್ಲಿ ನಡೆಯಲಿರುವ ನೂತನ ಕೋರ್ಸ್‌ನಲ್ಲಿ ಮೊದಲ ಸೆಮಿಸ್ಟರ್‌ನಲ್ಲಿ ತ್ಯಾಜ್ಯ, ತ್ಯಾಜ್ಯ ಉತ್ಪತ್ತಿ,ಅದರ ಮರುಬಳಕೆ ಮುಂತಾದ ಮೂಲಭೂತ ಅಂಶಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಎರಡನೆ ಸೆಮಿಸ್ಟರ್‌ನಲ್ಲಿ ತ್ಯಾಜ್ಯ ಸಮಸ್ಯೆಯ ಕಾರಣಗಳು, ತ್ಯಾಜ್ಯ ಪ್ರಮಾಣ, ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಅನುಸರಿಸಬೇಕಾದ ಕ್ರಮಗಳು, ಪ್ರಸ್ತುತ ಇರುವ ವೈಜ್ಞಾನಿಕ ಕ್ರಮಗಳು, ಸಂಸ್ಕರಣಾ ಘಟಕಗಳ ಕಾರ್ಯನಿರ್ವಹಣೆ , ಆಧುನಿಕ ಜಗತ್ತಿನಲ್ಲಿ ಹೆಚ್ಚುತ್ತಿರುವ ಇ- ತ್ಯಾಜ್ಯಗಳು ಮತ್ತು ಅದರ ವಿಲೇವಾರಿ ಬಗ್ಗೆ ಪ್ರಾಯೋಗಿಕ ತರಗತಿಗಳ ಮೂಲಕ ಕಲಿಸಿ ಕೊಡಲಾಗುತ್ತದೆ. ಇದರ ಜತೆಗೆ ತ್ಯಾಜ್ಯದಿಂದ ಅಂತರ್ಜಲದ ಮೇಲಾಗುವ ದುಷ್ಪರಿಣಾಮ, ಕೆರೆ, ಬಾವಿ,ನದಿ ನೀರು ಕಲುಷಿತವಾಗುವುದನ್ನು ತಡೆಗಟ್ಟುವ ವಿಧಾನಗಳು, ತ್ಯಾಜ್ಯಗಳಿಂದ ಪ್ರಾಕೃತಿಕ ಸಂಪತ್ತಿನ ರಕ್ಷಣೆ ಹೇಗೆ ಎಂಬ ಬಗ್ಗೆಯೂ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು.

ಉದ್ಯೋಗಾವಕಾಶಗಳು
ತ್ಯಾಜ್ಯ ವಿಲೇವಾರಿ ಪ್ರಸ್ತುತ ಕೇವಲ ನಗರಾಡಳಿತ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ. ಇದರ ಬದಲು ದೇಶ ವಿದೇಶಗಳಲ್ಲಿ ಅನುಷ್ಠಾನದಲ್ಲಿರುವ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಹೊಸದಾಗಿ ಆವಿಷ್ಕಾರಗಳ ಮೂಲಕ ತ್ಯಾಜ್ಯ ವಿಲೇವಾರಿ , ಸಂಸ್ಕರಣೆ ಹಾಗೂ ಮರುಬಳಕೆ ಕ್ಷೇತ್ರವನ್ನು ಒಂದು ಔದ್ಯೋಗಿಕ ವಲಯವಾಗಿ ಪರಿವರ್ತಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳಿವೆ. ತ್ಯಾಜ್ಯ ಸಂಸ್ಕರಣೆ ಕೋರ್ಸ್‌ ಮೂಲಕ ಯುವಜನರಿಗೆ ಕೌಶಲ ತುಂಬುವುದರೊಂದಿಗೆ ಉದ್ಯೋಗಕ್ಕೂ ದಾರಿಯಾಗಲಿದೆ. ಬೆಂಗಳೂರು ವಿವಿ ಈ ಉದ್ದೇಶದಿಂದ ಕೋರ್ಸ್‌ ಆರಂಭಿಸಿದೆ.

ತ್ಯಾಜ್ಯ ಇದೀಗ ಒಂದು ಸಾರ್ವತ್ರಿಕ ಸಮಸ್ಯೆ. ಏರುತ್ತಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಪ್ರಸ್ತುತ ಇರುವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗಳು ಉನ್ನತೀಕರಣ ಗೊಂಡಿಲ್ಲ. ತ್ಯಾಜ್ಯವನ್ನು ಒಂದು ಸಮಸ್ಯೆಯಾಗಿ ನೋಡುವ ಬದಲು ಸಂಪತ್ತು ಆಗಿ ಪರಿವರ್ತಿಸುವ , ಆದಾಯದ ಮೂಲವಾಗುವ ನಿಟ್ಟಿನಲ್ಲಿ ಯೋಚನೆಗಳು, ಯೋಜನೆಗಳು ಬರಬೇಕಾಗಿದೆ. ಬೆಂಗಳೂರು ವಿವಿ ಪ್ರಸ್ತುತ ಪರಿಚಯಿಸಿರುವ ಘನ ತ್ಯಾಜ್ಯ ನಿರ್ವಹಣೆ ಕೋರ್ಸ್‌ ಸಕಾಲಿಕ ಮತ್ತು ಸರ್ವ ಕಡೆಗೂ ಅನುಸರಿಸಲು ಯೋಗ್ಯವಾಗಿದೆ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ನೂತನ ಆವಿಷ್ಕಾರಗಳಿಗೆ, ನಾವೀನ್ಯತೆಗಳಿಗೆ ಕಾರಣವಾಗಲಿದೆ. ಸಮಸ್ಯೆ ನಿವಾರಣೆಯ ಜತೆಗೆ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿದೆ. ಮಂಗಳೂರು ವಿವಿ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಈ ಕೋರ್ಸ್‌ನ್ನು ಪರಿಚಯಿಸುವ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಬಹುದಾಗಿದೆ.

•ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next