Advertisement

ದಶಕ ಕಳೆದರೂ ನಿಂತಿಲ್ಲ ಸಮಸ್ಯೆ

12:13 PM Apr 18, 2018 | |

ಬೆಂಗಳೂರು: ಶಕ್ತಿಕೇಂದ್ರ ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿರುವ ಪ್ರದೇಶಗಳಲ್ಲಿಯೇ ಕೊಡ ನೀರಿಗೆ 2 ರೂ. ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಕುಡಿಯುವ ನೀರಿಗಾಗಿ ಜನರು ಯಾತನೆ ಅನುಭವಿಸುವಂತಾಗಿದೆ. ಕೇಂದ್ರ ಭಾಗದಲ್ಲಿದ್ದರೂ ಹಲವು ಬಡಾವಣೆಗಳು ಹಾಗೂ ಕೊಳೆಗೇರಿಗಳು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕುಡಿಯುವ ನೀರಿಗಾಗಿ ಜನರು ಅಲೆದಾಡಬೇಕಾದ ಪರಿಸ್ಥಿತಿಯಿದೆ.

Advertisement

ಬೇಸಿಗೆ ಆರಂಭವಾಗುತ್ತಿದ್ದಂತೆ ಕೇಂದ್ರ ಭಾಗದ ದೇವರ ಜೀವನಹಳ್ಳಿ, ದೊಡ್ಡಣ್ಣ ನಗರ, ಶ್ರೀರಾಮಪುರ, ಎಲ್‌.ಆರ್‌.ಪುರ, ಕೃಷ್ಣಪ್ಪ ಗಾರ್ಡನ್‌, ಕೆ.ಜಿ.ಹಳ್ಳಿ, ಟ್ಯಾನರಿ ರಸ್ತೆ ಸೇರಿದಂತೆ ಪೂರ್ವ ವಲಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನೀರಿಗಾಗಿ ಜನ ಸೈಕಲ್‌ ಅಥವಾ ಬೈಕ್‌ಗಳಲ್ಲಿ ಕ್ಯಾನ್‌ ನೇತು ಹಾಕಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.

ಬಿಬಿಎಂಪಿ ಹಾಗೂ ಜಲಮಂಡಳಿ ಕೇಂದ್ರ ಕಚೇರಿಗಳಿಗೆ ಸಮೀಪದಲ್ಲೇ ಇರುವ ಕೇಂದ್ರ ಭಾಗದ ಹಲವು ಬಡಾವಣೆಗಳ ನೀರಿನ ಸಮಸ್ಯೆಗೆ ಪರಿಹಾರ ಹಲವು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ಇನ್ನು ಕಾವೇರಿ ನೀರಿನ ಸಂಪರ್ಕವಿಲ್ಲದ ಬಡಾವಣೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಸಾರ್ವಜನಿಕ ನೀರಿನ ಟ್ಯಾಂಕ್‌ ಹಾಗೂ ನಲ್ಲಿಗಳ ಬಳಿ ಜನರು ಸಾಲುಗಟ್ಟಿ ನಿಲ್ಲುವುದು ತಪ್ಪಿಲ್ಲ.

ನೀರಿನ ಘಟಕಗಳೇ ಗತಿ: ಪಾಲಿಕೆಯ ಪೂರ್ವ ವಲಯಕ್ಕೆ ಬರುವ ಪುಲಿಕೇಶಿನಗರ, ಸಿ.ವಿ.ರಾಮನ್‌ ನಗರ, ಶಿವಾಜಿನಗರ, ಗಾಂಧಿನಗರ, ಶಾಂತಿನಗರ, ಹೆಬ್ಟಾಳ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಹಲವು ಬಡಾವಣೆಗಳು ಹಾಗೂ ಕೊಳೆಗೇರಿಗಳಿಗೆ ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅನುದಾನದಲ್ಲಿ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕಗಳೇ ಕುಡಿಯುವ ನೀರಿನ ಮೂಲಗಳೆನಿಸಿವೆ. ಈ ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡರೆ ಸಾರ್ವಜನಿಕರು ನೀರಿಗಾಗಿ ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾದುದು ಅನಿವಾರ್ಯ.

ಕೊಡಕ್ಕೆ ಐದು ರೂ: ನೀರಿನ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ಜನರು ಕೊಳವೆಬಾವಿ ಹೊಂದಿರುವ ಮನೆಗಳು ಅಥವಾ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಪ್ರತಿ ಕೊಡಕ್ಕೆ 2 ರಿಂದ 5 ರೂ. ಪಾವತಿಸಿ ಕುಡಿಯುವ ನೀರು ಖರೀದಿಸುತ್ತಿದ್ದಾರೆ. ಈ ಕುರಿತು ದೇವರ ಜೀವನಹಳ್ಳಿ ನಿವಾಸಿ ನಯಾಜ್‌ರನ್ನು ಪ್ರಶ್ನಿಸಿದರೆ, ಸಾರ್ವಜನಿಕ ನಲ್ಲಿಗಳಲ್ಲಿ ನೀರು ಯಾವಾಗ ಬರುತ್ತದೆ ಎಂದು ತಿಳಿಯುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿಯವರಿಂದ ನೀರು ಖರೀದಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ನೀರು ಹರಿಸುವುದರಲ್ಲೂ ತಾರತಮ್ಯ: ಪೂರ್ವ ವಲಯದ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಬಡಾವಣೆಗಳಿಗೆ ಜಲಮಂಡಳಿಯಿಂದ ವಾರದಲ್ಲಿ ಮೂರು ದಿನ ನೀರು ಪೂರೈಕೆಯಾಗುತ್ತದೆ. ಆದರೆ, ಅದೇ ಬಡಾವಣೆಗಳಿಗೆ ಹೊಂದಿಕೊಂಡಂತಿರುವ ಕೊಳೆಗೇರಿಗಳಿಗೆ ಮಾತ್ರ ವಾರದಲ್ಲಿ ಒಂದು ಅಥವಾ ಎರಡು ಬಾರಿಯಷ್ಟೇ ನೀರು ಹರಿಸಲಾಗುತ್ತಿದ್ದು, ಬಡಾವಣೆಗಳಿಂದ ಕೊಳೆಗೇರಿಗಳಿಗೆ ನೀರು ಬರುವ ವೇಳೆಗೆ ನೀರಿನ ಗಾತ್ರ ಕಿರಿದಾಗುತ್ತದೆ ಎಂಬುದು ಬೆನ್ನಿಗಾನಹಳ್ಳಿ ನಿವಾಸಿಯೊಬ್ಬರ ಆರೋಪ.

ಸಮಸ್ಯೆಯಿರುವ ಸ್ಥಳಗಳು ಯಾವುವು?: ಡಿ.ಜೆ.ಹಳ್ಳಿ, ದೊಡ್ಡಣ್ಣ ನಗರ, ಸಂಧ್ಯಾವನ, ಸಿ.ವಿ.ರಾಮನ್‌ ನಗರ, ನ್ಯೂ ತಿಪ್ಪಸಂದ್ರ, ಕೃಷ್ಣಪ್ಪ ಗಾರ್ಡನ್‌, ಎಚ್‌ಬಿಆರ್‌ ಬಡಾವಣೆ, ಹೆಣ್ಣೂರು, ನಾಗಶೆಟ್ಟಿಹಳ್ಳಿ, ಸಂಜಯನಗರದ ಆರ್‌ಎಂಎಸ್‌ ಬಡಾವಣೆ, ಹೆಬ್ಟಾಳ ಬಳಿಯ ಪೋಸ್ಟಲ್‌ ಕಾಲೋನಿ, ವೆಂಕಟೇಶಪುರ, ಮುನೇಶ್ವರನಗರ, ಕಾವಲ್‌ ಭೈರಸಂದ್ರ, ಶಾದಾಬ್‌ನಗರ, ಟ್ಯಾನರಿ ರಸ್ತೆ, ಕೆ.ಜಿ.ಹಳ್ಳಿ, ಬೆನ್ನಿಗಾನಹಳ್ಳಿ, ಪುಲಿಕೇಶಿನಗರ, ಸರ್ವಜ್ಞನಗರ, ಶಿವಾಜಿನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ನೀರಿನ ಸಮಸ್ಯೆಯಿದೆ.

ಜಲಮಂಡಳಿಯಿಂದ ವಾರದಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ನೀರು ಬರುತ್ತದೆ. ಆದರೆ, ಸಣ್ಣ ಪ್ರಮಾಣದಲ್ಲಿ ಒಂದು ಗಂಟೆಯಷ್ಟೇ ಬರುವ ನೀರು ಎರಡು ದಿನದ ಸಂಗ್ರಹಕ್ಕೂ ಸಾಕಾಗುವುದಿಲ್ಲ.
-ರಘು, ಎಲ್‌.ಆರ್‌.ಪುರ

ಜಲಮಂಡಳಿ ಹಾಗೂ ಸಾರ್ವಜನಿಕ ನಲ್ಲಿಗಳಲ್ಲಿ ಬರುವ ನೀರು ಕೆಲವೊಮ್ಮೆ ಕಲುಷಿತಗೊಂಡಿರುತ್ತದೆ. ಹೀಗಾಗಿ ಆ ನೀರನ್ನು ಕುಡಿಯುವುದಕ್ಕೂ ಬಳಸಲಾಗುವುದಿಲ್ಲ. ಹೀಗಾಗಿ ಶುದ್ಧ ನೀರಿನ ಕ್ಯಾನ್‌ ಖರೀದಿಸುತ್ತೇವೆ.
-ಅರುಣ್‌, ಶ್ರೀರಾಮಪುರ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next