Advertisement

ಸಮಸ್ಯೆಗಳ ಆಗರ ಬೆಳ್ಮಣ್‌ ಇಟ್ಟಮೇರಿ ಅಂಗನವಾಡಿ

11:48 PM Jun 24, 2019 | sudhir |

ಬೆಳ್ಮಣ್‌: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಟ್ಟಮೇರಿ ಅಂಗನವಾಡಿಯ ಶೌಚಾಲಯದ ಪೈಪ್‌ಲೈನ್‌ ಸಂಪರ್ಕ 2 ವರ್ಷಗಳಿಂದ ತೆರೆದ ಸ್ಥಿತಿಯಲ್ಲಿದ್ದು ಪುಟಾಣಿಗಳ ಜತೆ ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

Advertisement

ಕಳೆದ ಎರಡು ವರ್ಷಗಳ ಹಿಂದೆ ಈ ಆಂಗನವಾಡಿಯ ತ್ಯಾಜ್ಯ ಗುಂಡಿಯ ಪೈಪ್‌ಲೈನ್‌ ಸಂಪರ್ಕ ತೆರೆದ ಸ್ಥಿತಿಯಲ್ಲಿದ್ದ ಬಗ್ಗೆ ಬೆಳ್ಮಣ್‌ ಗ್ರಾಮ ಪಂಚಾಯತ್‌ಗೆ ಮನವಿ ನೀಡಿದ್ದರೂ ಈ ವರೆಗೂ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಇತ್ತ ಸುಳಿದಿಲ್ಲ. ಸ್ವಚ್ಛ ಭಾರತದ ಕೂಗು ದೇಶಾದ್ಯಂತ ಬಲವಾಗಿದ್ದರೂ ಇಲ್ಲಿ ಮಾತ್ರ ಕ್ಷೀಣಿಸಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಯುವ ಸಂಘಟನೆ ದುರಸ್ತಿ ಮಾಡಿತ್ತು

ಕಳೆದ 6 ತಿಂಗಳ ಹಿಂದೆ ಇಲ್ಲಿನ ಯುವಕ ಮಂಡಲ ಈ ಶೌಚದಾಲಯದ ತ್ಯಾಜ್ಯ ಗುಂಡಿಯ ತೆರೆದ ಪೈಪ್‌ಲೈನನನ್ನು ಮುಚ್ಚಿ ಒಂದಿಷ್ಟು ಮುಕ್ತಿ ನೀಡಿದ್ದರೂ ಮತ್ತೆ ಗುಂಡಿ ತೆರೆದುಕೊಂಡು ದುರ್ನಾತ ಬೀರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪುಟಾಣಿಗಳು ಸಂಕಷ್ಟ ಪಡುವಂತಾಗಿದೆ. ಸ್ಥಳೀಯಾಡಳಿತ ನಿದ್ರಾವಸ್ಥೆಯಲ್ಲಿದ್ದು ಶೀಘ್ರ ದುರಸ್ಥಿಗೆ ಮುಂದಾಗ ಬೇಕೆಂಬುದು ಹೆತ್ತವರ ಆಗ್ರಹ.

ಬೆಂಕಿ ಉಗುಳುವ ಪರಿವರ್ತಕ

Advertisement

ಅಂಗನವಾಡಿ ಪಕ್ಕದಲ್ಲೇ ಇರುವ ವಿದ್ಯುತ್‌ ಪರಿವರ್ತಕ (ಟಿ.ಸಿ) ಸದಾ ಬೆಂಕಿ ಉಗುಳುತ್ತಿದ್ದು ಇನ್ನಷ್ಟು ಅಪಾಯಕ್ಕೆ ಎಡೆ ಮಾಡಿದೆ. ಇಲ್ಲಿ ಬೇಸಗೆಯಲ್ಲಿ ಹಲವು ಬಾರಿ ಬೆಂಕಿ ಆವರಿಸಿದ್ದೂ ಇದೆ. ಬೆಳ್ಮಣ್‌ ಮೆಸ್ಕಾಂ ಸಿಬಂದಿ ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಟ್ಟಡದ ಮೇಲೆ ಮರದ ಗೆಲ್ಲು

ಅಂಗನವಾಡಿ ಕಟ್ಟಡದ ಮೇಲೆ ಬಾಗಿರುವ ಮರದ ಗೆಲ್ಲುಗಳು ಬೀಳುವ ಸ್ಥಿತಿಯಲ್ಲಿವೆ. ಗಾಳಿ ಮಳೆಗೆ ಇವು ಮುರಿದು ಬೀಳಬಹುದು ಎಂಬ ಆತಂಕ ಹೆತ್ತವರು ಮತ್ತು ಅಂಗನವಾಡಿ ಕಾರ್ಯಕರ್ತೆ ಯರನ್ನು ಕಾಡುತ್ತಿದೆ.

ಕೂಡಲೇ ರಿಪೇರಿ

ಈ ಅಂಗನವಾಡಿನ ಕಟ್ಟಡದ ಜಾಗದ ಬಗ್ಗೆ ಗೊಂದಲ ಇದೆ. ಆಂಗನವಾಡಿ ಇಂದ ಯಾವುದೇ ಮನವಿ ಬಂದಿಲ್ಲ. ಶೌಚಾಲಯದ ತ್ಯಾಜ್ಯ ಗುಂಡಿಯ ಬಳಿ ಮರದ ಬೇರು ಬಂದ ಕಾರಣ ಪೈಪ್‌ಲೈನ್‌ ತೆರೆಯಲ್ಪಟ್ಟಿದೆ. ಕೂಡಲೇ ರಿಪೇರಿ ಮಾಡಲಾಗುವುದು.
– ವಾರಿಜಾ, ಬೆಳ್ಮಣ್‌ ಗ್ರಾ.ಪಂ. ಅಧ್ಯಕ್ಷೆ
Advertisement

Udayavani is now on Telegram. Click here to join our channel and stay updated with the latest news.

Next