ಕೊನೆ ದಿನದ ಕೊನೆ ಪಂದ್ಯ ನಡೆಯುವಾಗ ಸಂಗ್ರಹಿಸಿದ ಹಣವನ್ನು ಇಟ್ಟು ಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಇಬ್ಬರು ಗೆಳೆಯರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದರು. ಪ್ರಥಮ ಬಹುಮಾನ ಸಾವಿರದ ಐನೂರು ರೂ., ದ್ವಿತೀಯ ಬಹುಮಾನ ಸಾವಿರ ರೂ.ಗಳು ಅವರ ಹತ್ತಿರವೇ ಇತ್ತು. ನಾವೆಲ್ಲ ಗಾಬರಿಯಾದೆವು.
ಚಿಕ್ಕವರಿದ್ದಾಗ ನಮಗೆ ಸ್ಕೂಲಿಗೆ ಹೋಗುವುದಕ್ಕಿಂತ ಜಾನುವಾರುಗಳನ್ನು ಮೇಯಿಸುವುದರಲ್ಲೇ ಆಸಕ್ತಿ. ನಮ್ಮೂರ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದವು. ದನಕರುಗಳು ಊರ ತುಂಬ ಇದ್ದವು. ಅಂದರೆ, ಊರು ಸಮೃದ್ಧವಾಗಿತ್ತು ಅಂತಲೇ ಅರ್ಥ. ರಜಾ ದಿನಗಳಲ್ಲಿ ದನಕರುಗಳನ್ನು ಊರ ಹತ್ತಿರವಿರುವ ಜವುಳ ಕಡೆಗೆ (ಕೆರೆಗೆ)ಹೊಡೆದುಕೊಂಡು ಹೋಗಿಬಿಟ್ಟರೆ ಮುಗೀತು ನಮ್ಮ ಕೆಲಸ. ದನಗಳು ಕೆರೆ ಮುಟ್ಟುತ್ತಲೇ ಇತ್ತ ನಮ್ಮ ಚೆಂಡು-ದಾಂಡಿನ ಆಟ ಪ್ರಾರಂಭವಾಗುತ್ತಿತ್ತು. ಆಗಷ್ಟೇ ಎಲ್ಲೆಡೆ ಕ್ರಿಕೆಟ್ ಜ್ವರ ಏರುತಿತ್ತು. ಊರಲ್ಲಿ ಅಲ್ಲೊಂದು- ಇಲ್ಲೊಂದು ಇದ್ದ ಟಿ.ವಿಯಲ್ಲಿ ಆಟವನ್ನು ಕಣ್ತುಂಬಿಕೊಂಡೇ ಅಷ್ಟೊಂದು ಹುಚ್ಚು ತಲೆಗೆ ಏರಿತ್ತು.
ಆ ಕಾಲಕ್ಕೆ ನಮ್ಮ ಪಾಲಿನ ಈಡನ್ ಗಾರ್ಡನ್ ಅಂದರೆ ನಮ್ಮೂರ ಕೆರೆಯೇ. ಟಾಸ್ ಹಾಕಲು ನಮ್ಮ ಹತ್ತಿರ ಎಂಟಾಣಿಯೂ ಇರುತ್ತಿರಲಿಲ್ಲ. ಆ ಕಾರಣದಿಂದ ಚಿಕ್ಕಕಲ್ಲಿಗೆ ಉಗುಳು ಹಚ್ಚಿ, ಟಾಸ್ ಹಾಕುತ್ತಿದ್ದೆವು. ತೆಂಗಿನಮರದ ಮಟ್ಟಿಯಿಂದ ಮಾಡಿದ ಬ್ಯಾಟಲ್ಲೇ ಆಟ ಶುರು. ಅದು ಸಚಿನ್ ತೆಂಡೂಲ್ಕರ್ ಬಳಸುತ್ತಿದ್ದ ಎಮ…. ಆರ್. ಎಫ್ ಬ್ಯಾಟನ್ನು ಮೀರಿಸುವಂತಿತ್ತು. ಹೀಗೆ ಮುಂಜಾನೆ ಪ್ರಾರಂಭವಾಗುತ್ತಿದ್ದ ನಮ್ಮ ಕ್ರಿಕೆಟ್ ದನ-ಕರುಗಳು ಮೇದು ವಾಪಸ್ಸು ಬರುವ ತನಕವೂ ಮುಂದವರಿಯುತ್ತಿತ್ತು. ಈ ಕ್ರಿಕೆಟ್ ಹುಚ್ಚು ಯಾವ ಮಟ್ಟಕ್ಕೆ ಹೋಯಿತೆಂದರೆ, ಪಕ್ಕದ ಊರಿನಲ್ಲಿ ಸಂಘಟಿಸುತ್ತಿದ್ದ ಪಂದ್ಯಾವಳಿಗಳನ್ನು ನಮ್ಮೂರಲ್ಲಿ ಏಕೆ ಸಂಘಟಿಸಬಾರದು? ಎನ್ನುವ ಮಟ್ಟಕ್ಕೆ ಬಂತು. ಆದರೆ ಅಷ್ಟೊಂದು ಹಣ ಎಲ್ಲಿ ಸಂಗ್ರಹಿಸುವುದು? ಎಂಬ ಪ್ರಶ್ನೆಗೆ ಉತ್ತರವಾಗಿ ನಮ್ಮ ಗುಂಪಿನಲ್ಲಿ ಒಬ್ಬ ಸ್ನೇಹಿತನಿದ್ದ. ಒಳ್ಳೆ ತಿಳುವಳಿಕೆ ಹೊಂದಿದ್ದ. ಅಲ್ಪ-ಸ್ವಲ್ಪ ರಾಜಕೀಯ ಜ್ಞಾನವೂ ಇತ್ತು. ಅವನ ಮೂಲಕ ಹಣ ಸಂಗ್ರಹ ಮಾಡಬಹುದೇ ಅಂತ ಯೋಚಿಸಿದೆವು. ಅಷ್ಟರಲ್ಲಿ ಲೋಕಸಭಾ ಚುನಾವಣೆ ರಂಗೇರಿತ್ತು. ಊರಿಗೆ ರಾಜಕೀಯ ವ್ಯಕ್ತಿಗಳು ಬರುತ್ತಿದ್ದರು.
“ಲೇ, ಊರಾಗ ಜೀಪು ಬಂದು. ಬೇಗ ಬೇಗ ನಡಿರಲೇ’ ಅಂತಾ ಗೆಳೆಯ ಹೇಳಿದಾಕ್ಷಣ ನಾವೆಲ್ಲ ಊರ ಅಗಸಿಬಾಗಿಲು ಹತ್ತಿರ ಹಾಜರಿರುತ್ತಿದ್ದೆವು. ನಮಗೆ ಯಾವ ಪಾರ್ಟಿ, ಮುಖಂಡ ಅನ್ನೋದೆಲ್ಲಾ ಮುಖ್ಯವಾಗಿರಲಿಲ್ಲ. ದುಡ್ಡು ಕೊಟ್ಟರೆ ಸಾಕಾಗಿತ್ತು. ಸಾವಿರಗಟ್ಟಲೆ ಹಣ ಕೇಳುತ್ತಿರಲಿಲ್ಲ; ಐವತ್ತೂ-ನೂರೋ ಸಾಕಿತ್ತು. ಮೀಸೆ ಬಾರದ ನಮ್ಮನ್ನು ನೋಡಿ, ಹಣ ಕೊಡಲು ಕೆಲವರು ಹಿಂದೇಟು ಹಾಕುತ್ತಿದ್ದರು. ಗೆಳೆಯ ಮುಲಾಜಿಲ್ಲದೆ ಅವರ ಜೇಬಿಗೆ ಕೈ ಹಾಕಿ ಹಣ ಪಡೆಯುತ್ತಿದ್ದ. ಏಳೆಂಟು ದಿಗಳಲ್ಲಿ ನಾಲ್ಕೈದು ಸಾವಿರ ಸಂಗ್ರಹವಾಯಿತು. ಮೂರು ದಿನದ ಟೂರ್ನಮೆಂಟ್ ಶುರು ಮಾಡಿದೆವು. ಒಳ್ಳೆ ಊಟ. ವೀಕ್ಷಕ ವಿವರಣೆ ಎಲ್ಲವೂ ಇತ್ತು. ಕೊನೆ ದಿನದ ಕೊನೆ ಪಂದ್ಯ ನಡೆಯುವಾಗ ಸಂಗ್ರಹಿಸಿದ ಹಣವನ್ನು ಇಟ್ಟು ಕೊಳ್ಳುವ ಜವಾಬ್ದಾರಿ ಹೊತ್ತಿದ್ದ ಇಬ್ಬರು ಗೆಳೆಯರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದರು. ಪ್ರಥಮ ಬಹುಮಾನ ಸಾವಿರದ ಐನೂರು ರೂ., ದ್ವಿತೀಯ ಬಹುಮಾನ ಸಾವಿರ ರೂ.ಗಳು ಅವರ ಹತ್ತಿರವೇ ಇತ್ತು. ನಾವೆಲ್ಲ ಗಾಬರಿಯಾದೆವು. ಪಂದ್ಯ ಮುಗಿಯಿತು. ಆಟಗಾರರು ಬಹುಮಾನಕ್ಕಾಗಿ ಮುಗಿಬಿದ್ದರು. ಜೊತೆಯಲ್ಲಿದ್ದ ಸ್ನೇಹಿತರ ಜೊತೆ ಚರ್ಚಿಸಿ, ದಿನನಿತ್ಯ ಸಂಗ್ರಹಿಸಿದ್ದ ದನಕರುಗಳ ಸಗಣಿಯನ್ನು ಹರಾಜು ಹಾಕಿ ಬಹುಮಾನದ ಮೊತ್ತವನ್ನು ನೀಡಲು ಮುಂದಾದೆವು. ಎರಡು ಟ್ರ್ಯಾಕ್ಟರ್‌ನಷ್ಟಿದ್ದ ಸಗಣಿ ಗೊಬ್ಬರವನ್ನು ವೀಳ್ಯದೆಲೆ ಬೆಳೆಯುವ ರೈತ ಮೂರು ಸಾವಿರಕ್ಕೆ ಕೊಂಡುಕೊಂಡ. ಅದನ್ನೇ ಬಹುಮಾನವಾಗಿ ಕೊಟ್ಟೆವು. ನಮ್ಮೂರ ಜನರಿಂದ ಚೆನ್ನಾಗಿ ಬೈಯಿಸಿಕೊಂಡು ಹ್ಯಾಪು ಮೋರೆ ಹಾಕಿಕೊಂಡು ನಮ್ಮ ದನಗಳೊಂದಿಗೆ ಊರಿಗೆ ತೆರಳಿದೆವು.
ಐದಾರು ದಿನಗಳ ನಂತರ ಕಾಣೆಯಾಗಿದ್ದ ಗೆಳೆಯರು ಸಿಕ್ಕರು, ನಮ್ಮನ್ನು ನೋಡಿ ಅಳಲು ಪ್ರಾರಂಭಿಸಿ ನಡೆದ ಘಟನೆ ಹೇಳಿದರು. ಅವರು ಇಟ್ಟಿದ್ದ ಹಣವನ್ನು ಅವರ ತಂದೆ ಇಸ್ಪೀಟು ಆಟದಲ್ಲಿ ಸೋತಿದ್ದರಂತೆ. ಅಲ್ಲಿಗೆ ಕಂಪನಿ ಬ್ಯಾಟು ಮತ್ತು ಟೆನ್ನಿಸ್ ಬಾಲ್‌ನಲ್ಲಿ ದಿನನಿತ್ಯ ಆಡುವ ನಮ್ಮಗಳ ಕನಸು ಸಾಕಾರಗೊಳ್ಳಲಿಲ್ಲ.
ಈಗ, ಯಾರೇ ಕ್ರಿಕೆಟ್ ಆಡುವುದನ್ನು ಕಂಡರೆ, ಇವೆಲ್ಲ ನೆನಪಾಗುತ್ತದೆ
ಮಲ್ಲಪ್ಪ ಫ ಕರೇಣ್ಣನವರ