ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ಎರಡು ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ನಗರದ ಹುಳಿಮಾವು ನಿವಾಸಿ ಅರಣ್ ಬಂಧಿತ.
ಈತ ನಿರುದ್ಯೋಗಿಯಾಗಿದ್ದು, ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಹೆಚ್ಚಾಗಿ ವಂಚಿಸುತ್ತಿದ್ದ. ಇತ್ತೀಚೆಗೆ ರಾಜಾಜಿನಗರ ನಿವಾಸಿ ಕೋಮಲಾ ಎಂಬುವರನ್ನು ಪರಿಚಯಿಸಿಕೊಂಡು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿಕೊಂಡು ಆರೋಪಿಯು ಕೋಮಲಾರಿಂದ 2.5 ಲಕ್ಷ ರು. ಮುಂಗಡ ಹಣ ಪಡೆದುಕೊಂಡಿದ್ದ.
ಆದರೆ, ನಿಗದಿತ ಸಮಯದೊಳಗೆ ಕೆಲಸ ಕೊಡಿಸದೆ, ಇತ್ತ ಹಣವನ್ನು ಕೊಡದೆ ಸಬೂಬು ಹೇಳುತ್ತಿದ್ದ. ಬೇಸರಗೊಂಡ ಕೋಮಲ ಫೆಬ್ರವರಿಯಲ್ಲಿ ರಾಜಾಜಿನಗರ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟೇ ಅಲ್ಲದೇ, ಹುಳಿಮಾವು ನಿವಾಸಿ ಸುಮಿತ್ರಾ ಎಂಬ ವೃದ್ಧೆಯೊಬ್ಬರ ಸಂಬಂಧಿಗೆ ಕೆಲಸ ಕೊಡಿಸುವುದಾಗಿ ಹೇಳಿ 7 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ಸಮಿತ್ರಾ ಹುಳಿಮಾವು ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕರೆದು ವಿಚಾರಣೆ ನಡೆಸಿದಾಗ ಆರೋಪಿಯ ಕೃತೃ ಬಯಲಾಗಿತ್ತು. ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ, ರಾಜಾಜಿನಗರ ನಿವಾಸಿ ಕೋಮಲಾ ಎಂಬುವರಿಗೂ ವಂಚಿಸಿರುವ ಬಗ್ಗೆ ಬಾಯಿಬಿಟ್ಟಿದ್ದ. ಹೀಗಾಗಿ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಗುರುತಿನ ಚೀಟಿ: ನಿರುದ್ಯೋಗಿಯಾಗಿದ್ದ ಅರುಣ್,ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯ ಹುದ್ದೆ ಪಡೆದಿದ್ದೇನೆ ಎಂದು ನಕಲಿ ಗುರುತಿನ ಚೀಟಿ ಹೊಂದಿದ್ದ. ಈ ಗುರುತಿನ ಚೀಟಿ ತೋರಿಸಿ ಆಲ್‌ಲೈನ್ ಮೂಲಕ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರ ಮಾಹಿತಿ ಸಂಗ್ರಹಿಸಿ ಸಂಪರ್ಕಿಸುತ್ತಿದ್ದ.
ಬಳಿಕ ಅವರನ್ನು ನೇರವಾಗಿ ಭೇಟಿ ಮಾಡಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ನೇರವಾಗಿಯೇ ನೇಮಕಾತಿ ಮಾಡಿಸುತ್ತೇನೆ ಎಂದು ಹಂತ-ಹಂತವಾಗಿ ಹಣ ಪಡೆಯುತ್ತಿದ್ದ. ಹೀಗೆ ಮೂವರು ಮಹಿಳೆಯರಿಂದ 10 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.