ಗುಮಾಸ್ತ ಅಂಕಲ್ ನಮ್ಮ ಪರೀಕ್ಷಾ ಕೊಠಡಿಗೆ ಆಗಮಿಸಿದರು. ಅವರು ತರಗತಿಯೊಳಗೆ ಬರುತ್ತಿದ್ದಂತೆ ನಮ್ಮ ಪರೀಕ್ಷಾ ಸೂಪರ್‌ವೈಸರ್ ಎದ್ದು ನಿಂತು “ಸರ್ ಎಲ್ಲಾ ಸರಿ ಇದೆ. ಎಲ್ಲರೂ ಪರೀಕ್ಷೆ ಬರೀತ್ತಿದ್ದಾರೆ’ ಎಂದರು!
ಪದವಿ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳವು. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬ ಮಾತಿನಂತೆ ನಾನು ಮತ್ತು ನನ್ನ ಗೆಳೆಯರೆಲ್ಲ ಸೇರಿ ರಾತ್ರಿಯಿಡೀ ಪುಸ್ತಕ ತಿರುವಿ ಹಾಕಿದರೂ ಒಂದು ಅಕ್ಷರವೂ ತಲೆಗೆ ಹತ್ತಲಿಲ್ಲ. ಹೇಗಾದರೂ ಮಾಡಿ, ಪರೀಕ್ಷೆಯಲ್ಲಿ ಪಾಸ್ ಆಗ್ಲೆಬೇಕೆಂದು ನಿರ್ಧರಿಸಿದ ನಾವು ಕಾಲೇಜು ಗುಮಾಸ್ತನ ಸಹಾಯ ಪಡೆಯಲು ಮುಂದಾದೆವು.
ರಾಜು ಅಂಕಲ್ ನಮ್ಮ ಕಾಲೇಜಿನ ಗುಮಾಸ್ತ. ಪ್ರಶ್ನೆ ಪತ್ರಿಕೆಗಳ ಬಂಡಲ್ ವಾಪಸ್ ಪಡೆಯಲು, ರಿಜಿಸ್ಟರ್ ನಂಬರ್ ಚೆಕ್ ಮಾಡಲು ಅವರು ಎಕ್ಸಾಂ ಹಾಲ್‌ಗೆ ಬರುತ್ತಿದ್ದರು. ಆಗಲೇ ಕಾಪಿಚೀಟಿಗಳನ್ನು ತಂದುಕೊಡುವಂತೆ ಅವರನ್ನು ಕೇಳಲು ನಿರ್ಧರಿಸಿದ್ದೆವು. ಆದರೆ, ನಮ್ಮ ಪರೀಕ್ಷೆ ಇದ್ದ ದಿನ ಕಾರಣಾಂತರದಿಂದ ಅವರು ಕಾಲೇಜಿಗೆ ಬಂದಿರಲಿಲ್ಲ. ಅವರ ಬದಲಾಗಿ ಇನ್ನೊಬ್ಬರು ಆ ಕೆಲಸ ನಿಭಾಯಿಸುತ್ತಿದ್ದರು. ನಾವೊಂದಷ್ಟು ಜನ ಗೆಳೆಯರು ಹೊಸ ಗುಮಾಸ್ತರನ್ನು ಭೇಟಿಯಾದೆವು. ನಾವು ರೆಡಿ ಮಾಡಿದ್ದ ಕಾಪಿಚೀಟಿಗಳನ್ನು ಅವರಿಗೆ ಕೊಟ್ಟು, ಪರೀಕ್ಷೆ ಶುರುವಾದ ಮೇಲೆ ನೀರು ಕೊಡುವ ನೆಪದಲ್ಲಿ ನಮಗೆ ಆ ಚೀಟಿಗಳನ್ನು ತಂದು ಕೊಡಿ ಎಂದು ಕೇಳಿಕೊಂಡೆವು. ಅದಕ್ಕೆ ಅವರೂ ತಕರಾರಿಲ್ಲದೆ ಒಪ್ಪಿದರು.
ಪರೀಕ್ಷೆ ಆರಂಭವಾಗಿ ಒಂದು ಗಂಟೆಯಾದರೂ ಎಕ್ಸಾಂ ಹಾಲ್‌ಗೆ ಗುಮಾಸ್ತರು ಬರಲೇ ಇಲ್ಲ. ಇಡೀ ಕ್ಲಾಸ್ ಬರೆಯುವುದರಲ್ಲಿ ಬ್ಯುಸಿಯಾಗಿದ್ದರೆ ನಮ್ಮ ಕಪಿ ಸೈನ್ಯ ಮಾತ್ರ ಕಾಪಿಚೀಟಿಗಾಗಿ ಕಾದು ಕುಳಿತಿತ್ತು. ಸ್ವಲ್ಪ ಹೊತ್ತಿನಲ್ಲಿ ಗುಮಾಸ್ತ ಅಂಕಲ್ ನಮ್ಮ ಪರೀಕ್ಷಾ ಕೊಠಡಿಗೆ ಆಗಮಿಸಿದರು. ಅವರು ತರಗತಿಯೊಳಗೆ ಬರುತ್ತಿದ್ದಂತೆ ನಮ್ಮ ಪರೀûಾ ಸೂಪರ್‌ವೈಸರ್ ಎದ್ದು ನಿಂತು “ಸರ್ ಎಲ್ಲಾ ಸರಿ ಇದೆ. ಎಲ್ಲರೂ ಪರೀಕ್ಷೆ ಬರೀತ್ತಿದ್ದಾರೆ’ ಎಂದರು! ಇನ್ನೇನು ಚೀಟಿ ಕೈಗೆ ಸಿಗುತ್ತೆ, 35 ಅಂಕ ಪಡೆಯುವಷ್ಟು ಬರೆದು ಹೋದರಾಯಿತು ಎಂದು ಖುಷಿಯಲ್ಲಿದ್ದ ನಮಗೆ ಸೂಪರ್‌ವೈಸರ್ ಮಾತು ಕೇಳಿ ಗಾಬರಿ. ನಾವು ಯಾರನ್ನು ಗುಮಾಸ್ತ ಎಂದು ತಿಳಿದು ಕಾಪಿ ಚೀಟಿ ಕೊಟ್ಟು ಬಂದಿದ್ದೆವೋ ಅವರು ನಮ್ಮ ಕಾಲೇಜಿನ ಹೊಸ ವೈಸ್ ಪ್ರಿನ್ಸಿಪಾಲ್ ಆಗಿದ್ದರು. ಅವರು ನಮ್ಮ ಬಳಿ ಬಂದು ನಿಂತಾಗ ಎಲ್ಲಿಲ್ಲದ ಭಯ!
ಮುಗೀತು ನಮ್ಮ ಕಥೆ, ಮನೆಗೆ ಫೋನ್ ಹೋಗುವುದು ಪಕ್ಕಾ ಅಂದುಕೊಳ್ಳುವಾಗಲೇ ಅವರು, “ನೆಕ್ಸ್ಟ್ ಟೈಮ್ ಹೀಗೆ ಮಾಡಬೇಡ್ರೋ ಚೆನ್ನಾಗಿ ಬರೀರಿ’ ಎಂದು ನಗೆ ಬೀರಿ ಹೋದರು. ಹೊಸದಾಗಿ ಕಾಲೇಜಿಗೆ ಸೇರಿಕೊಂಡ ಅವರು ವಿದ್ಯಾರ್ಥಿಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಗುಮಾಸ್ತನಂತೆ ಬಂದಿದ್ದರು ಎಂದು ನಮಗೆ ನಂತರ ತಿಳಿಯಿತು. ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡ ನಾವು ಅಂದಿನಿಂದ ಕಾಪಿ ಮಾಡುವಾಗ ತುಂಬಾ ಎಚ್ಚರ ವಹಿಸಲಾರಂಭಿಸಿದೆವು!
– ಮಹೇಶ ಹುದಲಿ